ವಿಜಯಪುರ

75 ಸಸಿ ನೆಟ್ಟು ಹಸೀರೀಕರಣಕ್ಕೆ ಸಂಕಲ್ಪ: ಡಾ. ಮಹಾಂತೇಶ ಬಿರಾದಾರ

75 ಸಸಿ ನೆಟ್ಟು ಹಸೀರೀಕರಣಕ್ಕೆ ಸಂಕಲ್ಪ: ಡಾ. ಮಹಾಂತೇಶ ಬಿರಾದಾರ


ವಿಜಯಪುರ 10: ಒಬ್ಬ ವ್ಯಕ್ತಿ ಗಳಿಸುವ ಸಂಪತ್ತು, ಆಸ್ತಿ-ಪಾಸ್ತಿಗಿಂತ ಒಂದು ಸಸಿ ನೆಟ್ಟು ಪೋಷಿಸುವುದರಿಂದ ದೊರೆಯುವ ಸಂತೋಷ ಮತ್ತು ತೃಪ್ತಿ ಹೆಚ್ಚು ಮಹತ್ವದ್ದಾಗಿದೆ ಎಂದು ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದರು. ಐಶ್ವರ್ಯ ನಗರದ ಉದ್ಯಾನದಲ್ಲಿ 75 ಸಸಿಗಳನ್ನು ನೆಡುವ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಣಪತಿ ಪೆಂಡಾಲ್ಗಾಗಿ ಉದ್ಯಾನದ ಮರಗಳನ್ನು ಕಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ತಪ್ಪಿನ ಅರಿವಾಗಿ ಇದೀಗ ನಾಲ್ಕು ಸಸಿಗಳ ಬದಲಿಗೆ 75 ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.  

ಜಯಪ್ರಕಾಶ ಸೊಡ್ಡಗಿ ಮಾತನಾಡಿ, ಮನೆ-ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಿಸಬೇಕು. ಇದರಿಂದ ತಾಪಮಾನ ನಿಯಂತ್ರಣದ ಜೊತೆಗೆ ಸುಂದರ ಪರಿಸರವೂ ನಿರ್ಮಾಣವಾಗುತ್ತದೆ ಎಂದರು. ಬಸವರಾಜ ಕೋರಿ ಸಸಿಗಳಿಗೆ ಡ್ರಿಪ್ ವ್ಯವಸ್ಥೆ ಕಲ್ಪಿಸಿ ಪೋಷಣೆ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಾಪೌರ ಮಡಿವಾಳ ಕರಡಿ, ಡಾ. ಗಂಗಾಧರ ಸಂಬಣ್ಣಿ, ಸಂತೋಷಕುಮಾರ ಅಜೂರ ಸೇರಿದಂತೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಹಾಗೂ ಐಶ್ವರ್ಯ ನಗರದ ನಿವಾಸಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ