ಮುಂಡರಗಿ

ತಾಮ್ರಗುಂಡಿ ರೈತನ ಭೂಸ್ವಾಧೀನ ಪರಿಹಾರಕ್ಕೆ ಆಗ್ರಹಿಸಿ ಮನವಿ

ತಾಮ್ರಗುಂಡಿ ರೈತನ ಭೂಸ್ವಾಧೀನ ಪರಿಹಾರಕ್ಕೆ ಆಗ್ರಹಿಸಿ ಮನವಿ

ಮುಂಡರಗಿ 26:  ತಾಲೂಕಿನ ತಾಮ್ರಗುಂಡಿ ರೈತನ ಭೂಸ್ವಾಧೀನ ಪರಿಹಾರಕ್ಕೆ ಆಗ್ರಹಿಸಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆಯಿಂದ ತಾಮ್ರಗುಂಡಿ ಸಣ್ಣ ನೀರಾವರಿ ಕೆರೆಯ ನೀರಿನ ಗೇಟಿಗೆ ಬೀಗ ಜಡೆದು ಪ್ರತಿಭಟನೆ ಮಾಡುವ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.  

ಈ ಕುರಿತು ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಮುಂಡರಗಿ ತಾಲೂಕಿನ ಸಣ್ಣ ನೀರಾವರಿ ಇಲಾಖೆಯಿಂದ ರೈತರ ಯಾವುದೇ ವಿನಂತಿಗೆ ಸ್ಪಂದನೆ ಮಾಡದೇ ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ. ಅವರ ಬೇಜವಾಬ್ದಾರಿಯಿಂದ ನ್ಯಾಯಾಲಯದಲ್ಲಿ ರೈತನಿಗೆ ಬರಬೇಕಾದ ನ್ಯಾಯಯುತವಾದ ಪರಿಹಾರ ಸಿಗದೇ ಇರುವುದನ್ನು ವೇದಿಕೆಯು ಉಗ್ರವಾಗಿ ಖಂಡಿಸುತ್ತದೆ. ಸಣ್ಣ ನೀರಾವರಿ ಇಲಾಖೆಯು ತಾಮ್ರಗುಂಡಿ ಕೆರೆಯ ಮುಂಭಾಗದ ದಲಿತ ರೈತ ಕುಟುಂಬಗಳ ಕೃಷಿ ಜಮೀನುಗಳನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿರುವದು ವಿಷಾದನೀಯ.  

ಏಕೆಂದರೆ, ಭೂಸ್ವಾಧೀನ ಮಾಡಿಕೊಳ್ಳುವ ಮುಂಚಿತವಾಗಿ ರೈತನ ಹೊಲದಲ್ಲಿ ನಾಶವಾದ ತೋಟಗಾರಿಕೆ ಬೆಳೆಗಳಾದ ತೆಂಗು, ಪೇರಲ, ಚಿಕ್ಕು, ಮಾವು, ಪಪ್ಪಾಯ, ಹುಣಸೆ ಮರಗಳು ಅಪಾರ ಬೆಳೆಗಳು ಹಾಳಾಗಿ 20 ವರ್ಷ ಗತಿಸಿದರೂ ಅವುಗಳಿಗೆ ಪರಿಹಾರ ಕೊಟ್ಟಿರುವುದಿಲ್ಲ ಎಂದು ಆರೋಪಿಸಿದರು.  

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಂಡರಗಿ ತಹಶಿಲ್ದಾರ ಧನಂಜಯ.ಎಂ ಸಣ್ಣ ನೀರಾವರಿ ಇಲಾಖೆಯ ಇಂಜನಿಯರನ್ನು ಕೆರೆಯ ಗೇಟಿಗೆ ಕರೆಯಿಸಿ ರೈತನಿಗೆ ಆದ ಅನ್ಯಾಯವನ್ನು ಸರಿಪಡಿಸಲು ಸೂಚಿಸಿದರು. ಈ ಭರವಸೆಯ ಮೇರೆಗೆ ಪ್ರತಿಭಟನಾಕಾರರು ಒಪ್ಪಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಈ ವೇಳೆ ಮುಂಡರಗಿ ಪೊಲೀಸ ಇಲಾಖೆ ಬಂದೋಬಸ್ತ್‌ ನ್ನು ಕೈಗೊಂಡಿದ್ದರು. ಈ ಪ್ರತಿಭಟನೆಯಲ್ಲಿ ಸುಭಾಷ ಕುಂಬಾರ, ಮಂಜುನಾಥ ಹುಬ್ಬಳ್ಳಿ, ರಮೇಶ ರಾಮೇನಳ್ಳಿ, ಬಸಪ್ಪ ವಡ್ಡರ, ಪ್ರಕಾಶ ವಡ್ಡರ, ಅಪ್ಪಣ್ಣ ವಡ್ಡರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ