ಛಾಯಾಗ್ರಹಣ ಸಂದರ್ಭದ ಪೇಚಿನ ಪ್ರಸಂಗಗಳು !
ಪ್ರಸಂಗ ೧
ಗೌರೀಶ್ ಕಪನಿ
ಅದು ಮಳವಳ್ಳಿಯ ಹತ್ತಿರದ ಮಾರೇಹಳ್ಳಿ ಕೆರೆ. ಒಂದು ಮುಂಜಾನೆ ಛಾಯಾಗ್ರಹಣಕ್ಕಾಗಿ ಹೋದೆ. ಕೆರೆಯಲ್ಲಿ ಸಾಕಷ್ಟು ಹಕ್ಕಿಗಳಿದ್ದವು. ದಡದಲ್ಲಿ ಕೊಕ್ಕರೆಗಳು ನೀರಿನಲ್ಲಿ ಮೀನಿಗಾಗಿ ತಡಕುತ್ತಿದ್ದವು. ದೂರದಲ್ಲಿ ಹೆಜ್ಜಾರ್ಲೆ ನೀರಲ್ಲಿ ತೇಲುತ್ತಿದ್ದವು. ಅಲ್ಲೆ ದಡದ ಆಚೆಯ ಅಣತಿಯಲ್ಲಿ ಕಿಂಗ್ ಫಿಶರ್ ಬಂದು ಕುಳಿತು ತನ್ನ ಗುರಿ ಹುಡುಕುತ್ತಿತ್ತು. ಆಗಿನ್ನೂ ಸೂರ್ಯ ಮೇಲೆ ಬಂದು ನೀರೆಲ್ಲಾ ಚಿನ್ನದ ಬಣ್ಣಕ್ಕೆ ತಿರುಗಿ ಹೊಳೆಯುತ್ತಿತ್ತು. ವಾತಾವರಣ ಅಹ್ಲಾದಕರವಾಗಿತ್ತು.
ನಾನು ಹೊಸದಾಗಿ ಕ್ಯಾಮೊ ಬಟ್ಟೆಯ ಪರದೆಯೊಂದನ್ನು ಕೊಂಡಿದ್ದೆ. ಅದು ಬೆಡ್ ಶೀಟ್ ನಂತೆ ಹೊದ್ದು ಕೂರುವ ಮಿಲಿಟರಿ ಸಮವಸ್ತ್ರದಂಥಾ ಬಟ್ಟೆ. ಪಕ್ಷಿ-ಪ್ರಾಣಿಗಳಿಗೆ ನಮ್ಮ ಗುರುತು ಸಿಗದಂತೆ ಸುತ್ತ-ಮುತ್ತ ಪರಿಸರದಲ್ಲಿ ನಮ್ಮ ಇರುವಿಕೆಯನ್ನು ಮರೆಮಾಡಿಕೊಳ್ಳಲಿಕ್ಕಾಗಿ ಬಳಸುವಂಥಾ ಪರದೆ. ಅದನ್ನು ಇಂದು ಪರೀಕ್ಷಿಸಲು ಯೋಚಿಸಿದೆ. ದೂರದಿಂದ ಎಲ್ಲವನ್ನೂ ಗಮನಿಸಿ, ಒಂದು ಪ್ರಶಸ್ತ ಸ್ಥಳ ಆರಿಸಿ ಕೆಮೆರಾ ರೆಡಿ ಮಾಡಿ ಟ್ರೈಪಾಡಿಗೆ ಸಿಕ್ಕಿಸಿ ಸಣ್ಣ ಕುರ್ಚಿ ಹಾಕಿ ಈ ಹೊಸ ಕ್ಯಾಮೊ ಪರದೆ ಹೊದ್ದು ಕೂತೆ!
ಮೊದಲಿಗೆ ಎಲ್ಲವೂ ಸರಿ ಇತ್ತು!
ದೂರ ಸರಿದಿದ್ದ ಕೊಕ್ಕರೆಗಳು ನಿಧಾನವಾಗಿ ಹತ್ತಿರ ಬರಲು ಪ್ರಾರಂಭಿಸಿದ್ದವು. ಆದರೆ ಮೊದಲಿದ್ದಷ್ಟು ಹತ್ತಿರ ಇನ್ನೂ ಬಂದಿರಲಿಲ್ಲ. ವಿಚಿತ್ರವಾಗಿ ಹೊದ್ದು ಕೂತ ನಾನು ಹೇಗೆ ಕಾಣುತ್ತಿದ್ದೆನೊ ಗೊತ್ತಿಲ್ಲ. ಹಕ್ಕಿಗಳು ನನ್ನನ್ನು ವಿಚಿತ್ರವಾಗಿ ನೋಡಿ ಅಲ್ಲೆ ನಿಲ್ಲುತ್ತಿದ್ದವು ಅನ್ನಿಸುತ್ತದೆ. ಎಮ್ಮೆಯಂತೆಯೊ, ಮೊಸಳೆಯಂತೆಯೊ ಅಥವಾ ಇನ್ಯಾವುದೋ ವಿಚಿತ್ರ ಪ್ರಾಣಿಯಂತೆ ಕಾಣುತ್ತಿರಬಹುದೆಂದು ಊಹಿಸತೊಡಗಿದೆ! ಏನಾದರೂ ಅಂದುಕೊಳ್ಳಲಿ, ನಾನಂತೂ ಕ್ಯಾಮೊ ಪರದೆಯ ಹಿಂದೆ ಅಲ್ಲಾಡದೇ ಹಾಗೇ ಕೂತಿದ್ದೆ. ನನ್ನ ಹಿಂದೆ ಏನೋ ಜರುಗುತ್ತಿದೆ ಎಂಬ ಅನುಮಾನ ಬಂತು. ನಿಧಾನಕ್ಕೆ ತಿರುಗಿ ನೋಡಿದೆ. ಮೂರು-ನಾಲ್ಕು ನಾಯಿಗಳು ಕಿವಿ-ಬಾಲ ನಿಮಿರಿಸಿ ನನ್ನೆಡೆಗೆ ನೋಡುತ್ತಿದ್ದವು! ಕೊಕ್ಕರೆಗಳು ಇತ್ತ ಸುಳಿಯದ್ದಕ್ಕೆ ಇನ್ನೊಂದು ಕಾರಣವೂ ಅರ್ಥವಾಯಿತು. ನಾನು ತಿರುಗಿ ಕೊಂಚ ಅಲ್ಲಾಡಿದ್ದಕ್ಕೆ ನಾಯಿಗಳು ಗಾಬರಿಗೊಂಡವು!
ಗುರ್… ಎಂದು ನಂತರ ಬೊಗಳಲು ಪ್ರಾರಂಭಿಸಿದವು! ಥು… ಕರ್ಮ… ಗ್ರಹಚಾರಕ್ಕೆ ಬಂತಲ್ಲ ಅಂದುಕೊಂಡು ಇತ್ತ ತಿರುಗಿ ಕೂತೆ. ಅವು ಅಷ್ಟಕ್ಕೆ ಸುಮ್ಮನಾಗುವಂತೆ ಕಾಣಲಿಲ್ಲ, ಬೊಗಳುತ್ತಲೇ ಇದ್ದವು. ದೂರದಲ್ಲಿ ಕೇಳುತ್ತಿದ್ದ ನಾಯಿಯ ದ್ವನಿ ನಿಧಾನಕ್ಕೆ ಹತ್ತಿರವಾಗಲು ಪ್ರಾರಂಭವಾಯಿತು, ಮತ್ತೆ ತಿರುಗಿ ನೋಡಿದೆ. ಹತ್ತಿರ ಬರುತ್ತಿದ್ದ ನಾಯಿಗಳು ಹಿಂದೆ ಸರಿದು ಬೊಗಳಲಾರಂಭಿಸಿದವು.
ಇತ್ತ ಹಕ್ಕಿಗಳೂ ಸುಳಿಯುತ್ತಿಲ್ಲ, ಅತ್ತ ನಾಯಿಗಳೂ ಬಿಡುತ್ತಿಲ್ಲ! ಇನ್ನು ಪ್ರಯೋಜನವಿಲ್ಲವೆಂದು ಮೇಲೆದ್ದೆ. ಕ್ಯಾಮೊ ಪರದೆ ಕಳಚಿದೆ. ಸ್ವಲ್ಪ ದೂರದಲ್ಲಿದ್ದ ಹಕ್ಕಿಗಳೆಲ್ಲಾ ಹಾರಿದವು. ವದರುತ್ತಿದ್ದ ನಾಯಿಗಳು ಇನ್ನಷ್ಟು ದೂರ ನಿಂತು ಮುಂದುವರೆಸಿದವು… ಕಲ್ಲೆತ್ತುಕೊಳ್ಳುವವನಂತೆ ನಟಿಸಿದೆ, ಓಡಿದವು. ಮತ್ತೆ ಬಂದು ಕುರ್ಚಿಯ ಮೇಲೆ ಕುಳಿತೆ. ಮತ್ತೆ ಹಿಂದೆ ಬಂದು ಗುರ್ ಎಂದವು! ಇವ್ಯಾವೋ ನಕ್ಷತ್ರಿಕ ನಾಯಿಗಳೇ ಇರಬೇಕು ಎಂದು ಮತ್ತೆ ಎದ್ದು ಕಲ್ಲು ತೆಗೆದು ಬೀಸಿದೆ. ಒಂದಷ್ಟು ದೂರ ಹೋಗಿ ಓಡಿಸಿ ಬಂದೆ. ಸದ್ಯ ಈ ದರಿದ್ರಗಳ ಕಾಟ ತಪ್ಪಿತೆಂದು ಮತ್ತೆ ಬಂದು ಕ್ಯಾಮೊ ಪರದೆ ಹೊದ್ದು ಕೂತೆ! ಸುಮಾರು ಹೊತ್ತು ಕಳೆಯಿತು. ಇಷ್ಟೆಲ್ಲಾ ಗಲಾಟೆಯಿಂದ ಹಕ್ಕಿಗಳು ಹತ್ತಿರ ಸುಳಿಯಲಿಲ್ಲ.
ಬಹುಶಃ ನಾನು ಕೂತಿರುವ ಕಾರಣಕ್ಕೆ ಕ್ಯಾಮೊ ಪರದೆ ಹೊದ್ದಿದ್ದರೂ ಮನುಷ್ಯನ ಆಕೃತಿ ಸ್ಪಷ್ಟವಾಗಿಯೇ ಕಾಣುತ್ತಿರುತ್ತದೆ. ಅವೇನು ನನ್ನ ಮುಖ ನೋಡಿ ಗುರುತಿಸುತ್ತವೆಯೆ! ಆಕೃತಿಯು ಮನುಷ್ಯನಂತೆ ಕಂಡರೆ ಸಾಕಲ್ಲ, ಈ ಆಲೋಚನೆ ಸರಿಯಾಗಿಯೇ ಇದೆ ಅನ್ನಿಸಿತು. ಕೂರೋದೆ ಬೇಡ ಅಂತ ಕ್ಯಾಮೋ ಪರದೆ ಹೊದ್ದು ನೆಲದ ಮಟ್ಟಕ್ಕೆ ಕೆಮೆರಾ ಹೊಂದಿಸಿ, ಮಲಗಿದೆ. ಈಗಲಾದರೂ ಈ ಕೊಕ್ಕರೆ ಹತ್ತಿರ ಬರಬಹುದೆಂದು ಕಾದೆ. ಸ್ವಲ್ಪ ಸಮಯ ಜಾರಿತು, ಹಿಂದೆ ಏನೋ ಸದ್ದಾಯಿತು. ತಿರುಗುವಂತಿರಲಿಲ್ಲ, ಆದರೂ ಹಿಂದಿನ ಅನುಭವ ನೆನೆದು ಮತ್ತೆ ನಾಯಿ ಬಂದಿರಬಹುದು ಎಂದು ಹೆದರಿ ಹಿಂದೆ ತಿರುಗಿದೆ! ಆದರೆ ಈ ಬಾರಿ ನಾಯಿಯಾಗಿರಲಿಲ್ಲ. ಯಾರೋ ದಾರಿಹೋಕ ಹಿಂದೆ ಬಂದಿದ್ದ! ನಾನು ಅಲುಗಾಡಿದಾಕ್ಷಣ ಹೆದರಿ ಎರಡೆಜ್ಜೆ ಹಿಂದೆ ಸರಿದ.
ಏನಪ್ಪ? ಎಂದೆ.
ಯಾರು ಸಾ ನೀವು ಎಂದ.
ಹಕ್ಕಿ ಫೋಟೋ ತೆಗೀತಿರುವೆ ಎಂದೆ.
ನಿಮ್ಮ ಕರ್ಮ, ಪೋಟ ಮನೆ ಹಾಳಾಗ
ನಾನು ಯಾವ್ದೋ ಹೆಣ ಬಿದ್ದೋಗದೆ ಅಂತ ಗಾಬರೀಲಿ
ಬಂದೆ, ಎಂದ!
ಈ ಕ್ಯಾಮೊ ಪರದೆಯ ಸಹವಾಸವೇ ಬೇಡ ಅಂತ ಮುದುರಿ ಕಾರಿಗಿಟ್ಟು ಒಂದೂ ಫೋಟೋ ತೆಗೆಯದೆ ವಾಪಸ್ ಮನೆಗೆ ಬಂದೆ!
ಪ್ರಸಂಗ ೨
ಗೆಳೆಯರೆಲ್ಲರೂ ದಮ್ಮನಕಟ್ಟೆ ಸಫಾರಿ ಹೋಗುವ, ಹುಲಿ ಸಿಕ್ಕರೂ ಸಿಗಬಹುದೆಂದು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಐದಕ್ಕೆಲ್ಲಾ ಮೈಸೂರು ಬಿಟ್ಟು, ಆರಕ್ಕೆ ದಮ್ಮನಕಟ್ಟೆ ತಲುಪಿದಾಗ ಇನ್ನೂ ಕತ್ತಲೆ ಕವಿದಿತ್ತು. ಆಗಿನ್ನೂ ಆಕಾಶ ನೀಲಿ ಕಟ್ಟುತಿತ್ತು. ಒಬ್ಬ ಗೆಳೆಯ ಟಿಕೆಟ್ ತರಲು ಕೌಂಟರ್ ಕಡೆ ಹೋದ. ನಾನು ಅಲ್ಲೆಲ್ಲೊ ನಿಂತು ಆಕಡೆ-ಈಕಡೆ ನೋಡುತ್ತಿದ್ದೆ. ಇನ್ನೊಬ್ಬ ಗೆಳೆಯ ಸುಮ್ಮನೆ ತಿರುಗಾಡುತ್ತಾ ಅಲ್ಲೊಂದು ಹೊಸ ನಿರ್ಮಾಣ ಹಂತದ ಕಟ್ಟಡ ಹತ್ತಿ ಆಕಾಶ ನೀಲಿಯಿಂದ ಕೆಂಪಾಗುತ್ತಾ ಇರುವ ಸೌಂದರ್ಯ ಸವಿಯುತ್ತ ಫೋಟೊ ತೆಗೆದು ವಾಪಸ್ಸಾದ. ಟಿಕೇಟು ಪಡೆದು ಮತ್ತೊಬ್ಬ ಗೆಳೆಯನೂ ಬಂದ. ಸಫಾರಿಗೆ ಹೊರಡಲು ಇನ್ನೂ ಸಮಯವಿತ್ತು, ಕಾಫಿಕುಡಿಯಲು ಗೇಟ್ ಕಡೆ ಹೆಜ್ಜೆ ಹಾಕುತ್ತಿದ್ದೆವು.
ಆಷ್ಟರಲ್ಲಿ ಒಬ್ಬ ಎದುರಾದ…
ಯಾರ್ ಸೊಮಿ ಅಲ್ಲಿ ನಿಂತ್ಕೊಂಡು ಪೊಟ ತೆಗೀತಿದ್ದು?
ಎಲ್ಲಿ?
ಅಲ್ಲಿ, ಮ್ಯಾಲೆ ನಿಂತ್ಕೊಂಡು…ಆ ಮರದತವ.
ಯಾಕಪ್ಪಾ, ಏನಾಯಿತು?
ಅಲ್ಲ ಸಾ, ಅವರ್ಗೆನು ಅಕ್ಕ-ತಂಗಿರು ಇಲ್ವಾ! ಇಂತಾ ಕೆಲ್ಸನಾ ಮಾಡೋದು?
ಅದೇನಾಯಿತು ಸರಿಗೆ ಹೇಳು, ಅದ್ಯಾಕೆ ಹಿಂಗ್ ಮಾತಾಡ್ತಿಯ!
ಅಲ್ಲ ಸಾ, ನನ್ ಹೆಂಡ್ತಿ ಅಲ್ಲಿ ಕಕ್ಸ ಮಾಡ್ತಿದ್ರೆ ಆ ಯಪ್ಪ ಪೊಟ ತಗಳದ!! ನನ್ ಹೆಂಡ್ತಿ ಎಷ್ಟ್ ಬೇಜಾರ್ ಮಾಡ್ಕಂದವಳೆ ಗೊತ್ತಾ… ವೊಗೂ ಕೇಳ್ಕ ಬಾವೋಗೂ ಅಂತ ಕಳ್ಸವಳೇ!! ನೀವು ಇಂಥಾ ಕೆಲ್ಸನಾ ಮಾಡೋದು…
ಹೇಯ್, ಏನು ಹೀಗೆ ಮಾತಾಡ್ತಿಯ, ನೋಡ್ಕಂಡು ಮಾತಾಡು. ಹೀಗೆಲ್ಲಾ ಮಾತಾಡಿದ್ರೆ ಸರಿಯಿರಲ್ಲ. ತಗೋ ಮೊಬೈಲು, ನೋಡು… ನಾವು ಆಕಾಶಾ ನೋಡ್ತಾ ಸೂರ್ಯ ಹುಟ್ಟೋ ಫೋಟೊ ತೆಗೀತಿದ್ದದ್ದು. ನಿನ್ನ ಹೆಂಡತಿ ಫೋಟೊ ತಗೊಂಡು ನಾವೇನು ಮಾಡೋಣ?
ನಾವು ರೇಗಿದಾಗ ತಣ್ಣಗಾದ ಅಣ್ಣಾ, ಮೊಬೈಲ್ ಅಲ್ಲಿ ಫೋಟೋ ನೋಡಿ ಸಮಾದಾನಗೊಂಡ.
ಆಯಿತು ಬುಡಿ ಸಾ, ನಾನ್ ಯೋಳ್ದೆ ನನ್ ಹೆಡ್ತಿಗೆ… ಹೇ ತೆಗಿ ಅವರಂತವರಲ್ಲ ಅಂಥ… ಇಲ್ಲಾ ಇಲ್ಲಾ ಅವ್ರು ನಂಕಡಿಕೆ ಫೋನಾ ಹಿಡ್ಕಂದು ಪೊಟ ತಕ್ಕಂದ… ಮೂದೇವಿ ನೀನೊಗಿ ಕೇಳು ಅಂದ್ಲು ಅದ್ಕೆ ಬಂದೆ ಸಾ…
ಭಾರತ ಬಯಲು ಶೌಚಮುಕ್ತ ಆಗೋಗಿದೆ ಅಂತ ನಂಬಿಕೊಂಡು ಅತ್ತಿತ್ತ ನೋಡದೆ ಕೆಮರಾ ಎತ್ತಿದ ಗೆಳೆಯ, ಇನ್ನು ಮುಂದೆ ಸುತ್ತ – ಮುತ್ತ ಗಮನಿಸಿ ಕೆಮರಾ ಮುಟ್ಟುವ ಹಾಗಾಗಿದ್ದು, ಒಳ್ಳೆಯ ಪಾಠ !