ಮುಂದಗೋಡ

ರೈತರ ಜಮೀನು ಕೆಜಿಪಿ., ಮನೆ ಜಾಗ ಮಂಜೂರಾತಿಗಾಗಿ ಒತ್ತಾಯಿಸಿ ಮನವಿ

ರೈತರ ಜಮೀನು ಕೆಜಿಪಿ., ಮನೆ ಜಾಗ ಮಂಜೂರಾತಿಗಾಗಿ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ  

ಮುಂಡಗೋಡ: ರೈತರ ಜಮೀನನ್ನು ಕೆ.ಜಿ.ಪಿ. ಮಾಡುವುದು ಮತ್ತು ಧರ್ಮಾ ಕಾಲನಿ ನಿವಾಸಿಗಳ ಮನೆ ಜಾಗವನ್ನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಮಳಗಿ ಧರ್ಮಾ ಕಾಲನಿಯ ನಾಗರಿಕ ಹೋರಾಟ ಸಮಿತಿಯವರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.       

ಕಳೆದ ವರ್ಷ ದಿ.10-10-2022ರಂದು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೆಲವು ದಿನಗಳ ನಂತರ ತಮ್ಮ ಸಮಕ್ಷಮದಲ್ಲಿ ಸಭೆ ಮಾಡಲಾಗಿತ್ತು. ಆದರೆ ಧರ್ಮಾ ಕಾಲನಿ ನಿವಾಸಿಗಳ ಮನೆ ಜಾಗ ಮಂಜೂರು ಮಾಡುವ ಬಗ್ಗೆ ಅಥವಾ ರೈತರ ಜಮೀನು ಕೆ.ಜಿ.ಪಿ. ಮಾಡುವ ಬಗ್ಗೆಯಾಗಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿಯನ್ನು ನಮಗೆ ಕೊಟ್ಟಿಲ್ಲ.           

ಸರ್ಕಾರ ನಮ್ಮ ಬಗ್ಗೆ ತಳೆದಿರುವ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಮೆರವಣಿಗೆ ಮತ್ತು ಧರಣಿ ಮೂಲಕ ಮತ್ತೊಮ್ಮೆ ತಮ್ಮ ಗಮನಕ್ಕೆ ತರುತ್ತಿದ್ದೇವೆ. ಧರ್ಮಾ ಜಲಾಶಯದ ಯೋಜನೆಯಲ್ಲಿ ಮನೆ-ಮಠ ಮತ್ತು ಜೀವನಕ್ಕೆ ಆಶ್ರಯವಾಗಿರುವ ಜಮೀನನ್ನು ಕಳೆದುಕೊಂಡ ರೈತರಿಗೆ ಮತ್ತು ಅವರನ್ನು ಅವಲಂಬಿಸಿರುವ ಕೂಲಿ ಕಾರ್ಮಿಕರಿಗೆ ಸರ್ಕಾರವೇ ಮನೆ ಕಟ್ಟಿಕೊಳ್ಳಲು ಜಾಗ ಮತ್ತು ಜಮೀನನ್ನು ಕೊಟ್ಟು ಸರಿಸುಮಾರು 60 ವರ್ಷ ಕಳೆಯುತ್ತಾ ಬಂದರೂ ಮನೆ ಜಾಗದ ಪಟ್ಟಾ ಕೊಟ್ಟಿಲ್ಲ. ಆದ್ದರಿಂದ ರೈತರ ಜಮೀನು ಕೆ.ಜಿ.ಪಿ. ಮಾಡಬೇಕು. ಧರ್ಮಾ ಕಾಲನಿಯ ಎಲ್ಲ ನಿವಾಸಿಗಳಿಗೆ ಮನೆ ಜಾಗವನ್ನು ಮಂಜೂರು ಮಾಡಿ ಕೊಡಬೇಕು. ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಕ್ರಮವನ್ನು ಇನ್ನೂ ತೆಗೆದುಕೊಳ್ಳದೆ ಹೋದರೆ ನಮ್ಮ  ಪ್ರತಿಭಟನೆಯ ಮುಂದಿನ ಭಾಗವಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಬಹಿಷ್ಕರಿಸುತ್ತೇವೆ ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.           ಇದಕ್ಕೂ ಮುನ್ನ ಪಟ್ಟಣದ ಪರೀವೀಕ್ಷಣಾ ಮಂದಿರದಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.            

ಈ ವೇಳೆ ಸಂಚಾಲಕ ಗಣಪತಿ ಹೆಗಡೆ, ರಾಮಾಂಜನಪ್ಪ ಆಲದಹಳ್ಳಿ, ವಿನಾಯಕ ನಾಯ್ಕ, ಆನಂದ ನಾಯ್ಕ, ಗೀತಾ ನಾಯ್ಕ, ರೇಣುಕಾ ಲಂಬಾಣಿ, ಮಂಜುನಾಥ ಹಸ್ಲರ, ದುರ್ಗಜ್ಜ ಪೂಜಾರ, ಜೀವನ ಚಕ್ರಸಾಲಿ, ಚೌಡಪ್ಪ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ