ಸಾಧನೆಗೆ ನಿರಂತರ ಪರಿಶ್ರಮದ ಅಗತ್ಯ :ರೇಣುಕಾ ಕಲಬುರ್ಗಿ
ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ಮುಖ್ಯೋಪಾಧ್ಯಾಯಿನಿ ರೇಣುಕಾ ಕಲಬುರ್ಗಿ ಅಭಿಪ್ರಾಯ
ತಾಳಿಕೋಟಿ: ಜೀವನಕ್ಕೊಂದು ಸ್ಪಷ್ಟವಾದ ಗುರಿ ಅದನ್ನು ಸಾಧಿಸಲು ನಿರಂತರ ಪ್ರಯತ್ನ ಹಾಗೂ ಸಾಧಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸವಿದ್ದರೆ ಎಂಥಹ ಸಾಧನೆಯನ್ನಾದರೂ ಮಾಡಬಹುದು ಎಂದು ಮಿಣಜಗಿ ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ರೇಣುಕಾ ಕಲಬುರ್ಗಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಮೈಲೇಶ್ವರ) ಇದರ 2023ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೀಗೆ ಶುಭಕೋರುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರದಷ್ಟೇ ಪಾಲಕರ ಪಾತ್ರವು ಇದೆ ಇಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ನೀಡಲಾಗುತ್ತದೆ ಎಂದರು.
ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಸಜ್ಜನ ಮಾತನಾಡಿ ಪಾಲಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ನೀಡಬೇಕು ಇದು ಅವರ ಸಾಧನೆಗೆ ಪೂರಕವಾಗುತ್ತದೆ, ಕೇವಲ ಅಂಕಗಳಿಗೆ ಮಹತ್ವ ನೀಡದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಹತ್ವ ನೀಡುವ ಅಗತ್ಯ ಇದೆ ಎಂದರು. ಸಂಸ್ಥೆಯ ಅಧ್ಯಕ್ಷ ಎನ್.ಬಿ. ನಡುವಿನಮನಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಲಿತು ವೈದ್ಯಕೀಯ ಹಾಗೂ ಇಂಜೀನೀಯರಿಂಗ್ ಕೋರ್ಸಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯ ಎ.ವ್ಹಿ. ಹಿರೇಮಠ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಎಸ್.ಸಿ. ಕರಡಿ ನಿರೂಪಿಸಿ ವಂದಿಸಿದರು. ಒಂದು ನಿಮಿಷ ಮೌನಾಚರಣೆಯೊಂದಿಗೆ ಲಿಂಗೈಕ್ಯ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯಲ್ಲಿ ಬಿ.ಇ.ಓ. ಎಸ್.ಜೆ. ನಾಯಕ, ಕ್ಷೇತ್ರ ಸಮನ್ವಯಾಧಿಕಾರಿ, ಯು.ಬಿ. ಧರಿಕಾರ, ಶಿಕ್ಷಣ ಸಂಯೋಜಕ ಎಸ್.ಎ. ಹಿರೇಮಠ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಸಜ್ಜನ, ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ಮೂರಮಾನ, ಕ.ರಾ.ಸ.ನೌ. ಸಂಘ ತಾಲೂಕಾ ಅಧ್ಯಕ್ಷ ಎನ್.ಎಸ್. ದೊಡಮನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಜಿ. ರಾಠೋಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ. ವಜ್ಜಲ, ಸಂಸ್ಥೆಯ ಕಾರ್ಯದರ್ಶಿ ಎಂ.ಬಿ. ಮಡಿವಾಳರ, ಉಪಾಧ್ಯಕ್ಷ ಆರ್.ಬಿ. ನಡುವಿನಮನಿ, ನಿರ್ದೇಶಕರಾಸ ಎಸ್.ಎಚ್. ಪಾಟೀಲ, ಎಲ್.ಎಂ. ಬಿರಾದಾರ, ಎನ್.ಎಸ್. ಗಡಗಿ, ಎಸ್.ಎಂ. ಬಿರಾದಾರ ಇದ್ದರು.