ಹಾನಗಲ್

ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಜನಪರ ಕೆಲಸ ಮಾಡಿ; ಶಾಸಕ ಮಾನೆ

ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಜನಪರ ಕೆಲಸ ಮಾಡಿ; ಶಾಸಕ ಮಾನೆ

ಹಾನಗಲ್ 23: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಜೊತೆಗೂಡಿ ಹೆಜ್ಜೆ ಹಾಕಿದರೆ ಪರಿಣಾಮಕಾರಿ ಆಡಳಿತ ನೀಡಬಹುದಾಗಿದೆ. ಹಾಗಾಗಿ ಯಾರ ಮುಲಾಜಿಗೂ ಒಳಗಾಗದೇ ಜನಪರ ಕೆಲಸ ಮಾಡುವಂತೆ ಶಾಸಕ ಶ್ರೀನಿವಾಸ ಮಾನೆ ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು. 

ಇಲ್ಲಿನ ಜಗಜೀವನರಾಂ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಹಾಗೂ ಸರ್ಕಾರಿ ನೌಕರರ ಸಹಭಾಗಿತ್ವದಿಂದ ಮಾತ್ರ ರಾಜ್ಯದ ಅಭಿವೃದ್ಧಿಗೆ ಶಕ್ತಿ ತುಂಬಲು ಸಾಧ್ಯವಿದೆ.ಸಂವಿಧಾನದಡಿಯಲ್ಲಿ ಸರ್ಕಾರಿ ನೌಕರರಿಗೆ ಹಕ್ಕುಗಳಿವೆ,ಜವಾಬ್ದಾರಿಗಳೂ ಇವೆ. ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಿಕೊಡಲು ರಾಜ್ಯ ಸರಕಾರ ಬದ್ಧವಾಗಿದೆ. ಈಗಾಗಲೇ 7 ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲಾಗಿದೆ. ನೌಕರರು ಕೂಡ ಸರ್ಕಾರದ ಯೋಜನೆಗಳನ್ನು ಸಾಕಾರ ಮಾಡುವ ಸಂಕಲ್ಪ ಮಾಡಬೇಕಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಜನಸಾಮಾನ್ಯರ ಕಷ್ಟಕ್ಕೆ ಸಹಕಾರಿಯಾಗಲಿದೆ.  ಹಾನಗಲ್ಲ ತಾಲೂಕನ್ನು ಮಾದರಿ ತಾಲೂಕು ಮಾಡುವ ನನ್ನ ಸಂಕಲ್ಪಕ್ಕೆ ನೀವು ಕೈ ಜೋಡಿಸಿ. ಸರ್ಕಾರಿ ನೌಕರರ ಎನ್‌ಪಿಎಸ್ ಗೆ ಮುಕ್ತಿ ದೊರೆತು ಓಪಿಎಸ್ ಮಾಡುವ ಕಾಲ ಸನ್ನಿಹಿತವಾಗಿದೆ ಎಂದರು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ 12 ಸಾವಿರ ಸರ್ಕಾರಿ ನೌಕರರು 6.5 ಕೋಟಿ ಜನರಿಗೆ ಸರ್ಕಾರಿ ಸೇವೆ ಸಲ್ಲಿಸುವ ಅನಿವಾರ್ಯತೆಯಲ್ಲಿದ್ದೇವೆ. ಜನಸಂಖ್ಯೆ ಹೆಚ್ಚಿದೆ, ಆದರೆ ಅದಕ್ಕೆ ತಕ್ಕಂತೆ ನೌಕರರಿಲ್ಲ. ನಿವೃತ್ತರ ಕೆಲಸವೂ ಸೇರಿ ಇಬ್ಬರು ಮೂವರ ಕೆಲಸವನ್ನು ನಾವು ಒಬ್ಬೊಬ್ಬರೇ ತೀರ ಒತ್ತಡದಲ್ಲಿ ಮಾಡಬೇಕಾಗಿದೆ. ಈ ರಾಜ್ಯದ ಶಿಕ್ಷಕರಂತೂ ಪಾಠದ ಜೊತೆಗೆ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಹೆಣಗಾಡುವಂತಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದೆ. ಸರ್ಕಾರಿ ನೌರರಿಗೆ 1.25 ಕೋಟಿ ರೂ ಅಪಘಾತ ವಿಮೆ ಜಾರಿಗೆ ತರುತ್ತಿದೆ. 7 ನೇ ವೇತನ ಆಯೋಗ ಜಾರಿ ಮಾಡಿದೆ. ಕೆಜಿಐಡಿ ಸಾಲ ಸರಳೀಕರಣವಾಗಿದೆ. ಫೆಸ್ಟಿವಲ್ ಅಡ್ವಾನ್ಸ್‌ 50 ಸಾವಿರ ರೂ.ಗೆ ಏರಲಿದೆ. ಆರೋಗ್ಯದತ್ತ ನೌಕರರು ಆದ್ಯತೆ ನೀಡಿರಿ. ಒತ್ತಡ, ಭಯದಲ್ಲಿ ಕೆಲಸ ಮಾಡುವ ಸ್ಥಿತಿಯಿಂದ ಹೊರ ಬನ್ನಿರಿ. ಎನ್‌ಪಿಎಸ್ ಬದಲಾಗಿ ಓಪಿಎಸ್ ಹಾಗೂ ಕೇಂದ್ರದ ಮಾದರಿಯ ವೇತನ ಖಚಿತ. ಈ ಅವಧಿಯಲ್ಲಿ ಅದು ಸಾಧ್ಯವಾಗುತ್ತದೆ ಎಂದರು.  

ಸಂಘದ ತಾಲೂಕಾಧ್ಯಕ್ಷ ಗುರುನಾಥ ಗವಾಣಿಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರಾಯಗೋಳ, ಶಿಗ್ಗಾಂವಿ ತಾಲೂಕಾಧ್ಯಕ್ಷ ಅರುಣ ಹುಡೇದಗೌಡ್ರ, ರಾಣೇಬೆನ್ನೂರು ತಾಲೂಕಾಧ್ಯಕ್ಷ ಮಂಜುನಾಥ ಕೆಂಚರಡ್ಡಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ತಹಶೀಲ್ದಾರ್ ರೇಣುಕಾ ಎಸ್‌.ಶಿಗ್ಗಾಂವಿ ಪ್ರಭಾರ ತಹಶೀಲ್ದಾರ್ ರವಿ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ಗಂಗಾ ಹಿರೇಮಠ, ಸಿ.ಜಿ.ಪಾಟೀಲ, ಬಿ.ಎಸ್‌.ಚಲ್ಲಾಳ, ಎಂ.ಎಸ್‌.ಗುಂಡಪಲ್ಲಿ, ಅನಿತಾ ಕಿತ್ತೂರ, ವಿ.ಬಿ.ಚಿಕ್ಕೇರಿ, ಎಸ್‌.ಇ.ನರೇಗಲ್ಲ, ಡಿ.ಡಿ.ಲಂಗೋಟಿ, ಡಾ.ಲಿಂಗರಾಜ, ಎಸ್‌.ಎಸ್‌.ನಿಸ್ಸೀಮಗೌಡರ ವೇದಿಕೆಯಲ್ಲಿದ್ದರು.ಬಾಲಚಂದ್ರ ಅಂಬಿಗೇರ, ಜಗದೀಶ ಮಡಿವಾಳರ ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ವೀರ​‍್ಪ ಕರೆಗೊಂಡರ ಸ್ವಾಗತಿಸಿದರು.ಸಿದ್ದು ಗೌರಣ್ಣನವರ ನಿರೂಪಿಸಿದರು. 


ಸುದ್ದಿ ಓದಿ