ಪಿಂಚಣಿ ನಮ್ಮ ಮೂಲಭೂತ ಹಕ್ಕು: ಮುಡೆಣ್ಣವರ
ಮುಂಡಗೋಡ:ನಿವೃತ್ತಿ ನಂತರ ಪಿಂಚಣಿ ಸಿಗದೆ ಹೋದರೆ ಮುಂದೆ ನಾವು ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ ಎಂದು ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ಹೇಳಿದರು.
ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ನ.12ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟಕ್ಕೆ ಹೋಗುವ ಕುರಿತು ಚರ್ಚಿಸಲು ಗುರುವಾರ ಪಟ್ಟಣದ ಆದಿಜಾಂಭವ ಪ್ರೌಢಶಾಲೆಯಲ್ಲಿ ಪಿಂಚಣಿ ವಂಚಿತ ನೌಕರರು ಸೇರಿದ ಸಭೆಯಲ್ಲಿ ಮಾತನಾಡಿದ ಅವರು ಎಲ್ಲ ನೌಕರರು ಒಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿದರೆ ಸರ್ಕಾರದ ಗಮನ ಸೆಳೆಯಬಹುದು. ಪಿಂಚಣಿ ನಮ್ಮ ಮೂಲಭೂತ ಹಕ್ಕು ಅದನ್ನು ಪಡೆದುಕೊಳ್ಳುವುದು ಅವಶ್ಯಕ. ಉತ್ತರಕನ್ನಡ ಜಿಲ್ಲೆಯ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲೆಯ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.
ಇಂದೂರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಎನ್.ಸವದತ್ತಿ ಮಾತನಾಡಿ ಈಗ ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ ಎಂದರು. ಸಭೆಯಲ್ಲಿ ತಾಲೂಕಿನ ಎಲ್ಲ ಅನುದಾನಿತ ಪ್ರೌಢಶಾಲೆ ಶಿಕ್ಷಕರು ಭಾಗವಹಿಸಿ ಹೋರಾಟಕ್ಕೆ ತಮ್ಮ ತನು, ಮನ, ಧನದಿಂದ ಕಡ್ಡಾಯವಾಗಿ ಬರಲು ಒಪ್ಪಿಗೆ ಸೂಚಿಸಿದರು.
ಈ ವೇಳೆ ವಿ.ವಿ.ಮಲ್ಲನಗೌಡ, ಮಧುಮತಿ ಹಿರೇಮಠ, ಅಶ್ವಿನಿ ಇಚ್ಚಂಗಿ, ಪ್ರಪೆತಾ ರೆಗೋ, ರೇಷ್ಮಾ ಗೊನ್ಸಾಲೀಸ್, ಜಿ.ಟಿ.ನಾಯಕ, ಎಸ್.ಎಸ್.ಭದ್ರಶೆಟ್ಟಿ, ಎಮ್.ಕೆ.ಕೊಂಡೋಜಿ, ಶ್ರೀಶೈಲ ಮೊಸಳಗಿ, ಇಕ್ಬಾಲ್ ಅಹಮ್ಮದ್, ಅರುಣಕುಮಾರ ಬುದ್ದಿನ್ನಿ, ಮಂಜುನಾಥ ನಾಯ್ಕ, ಶರಣಪ್ಪ ಜಡದೆಲಿ, ರಶ್ಮಿ ಎನ್.ಆರ್., ಪಿ.ಸಿ.ಐನಾಪೂರ, ಆರ್.ವಿ.ಚವ್ಹಾಣ, ಪ್ರಭಾಕರ ಓಣಿಕೇರಿ, ರೇಖಾ ಹಾಗೂ ಮುಂತಾದವರು ಉಪಸ್ಥಿತರಿದ್ದರು. ರವಿ ಅಕ್ಕಿವಳ್ಳಿ ಸ್ವಾಗತಿಸಿದರು. ಕೃಷ್ಣ ಗುಜಮಾಗಡಿ ವಂದಿಸಿದರು.