ದುಡುಕನ್ನು ಮೆಟ್ಟಿ ನಿಲ್ಲುವುದೇ ತಾಳ್ಮೆ: ಡಾ. ಮಾನಕರಿ ಶ್ರೀನಿವಾಸಾಚಾರ್ಯ
ಬಳ್ಳಾರಿ18 : ತಾಳ್ಮೆಯನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಬರುವ ಆತಂಕ, ಉದ್ವೇಗ, ಸಿಟ್ಟು ಮುಂತಾದವುಗಳನ್ನು ಸುಲಭವಾಗಿ ಗೆಲ್ಲಬಹುದು. ಬದುಕನ್ನು ನರಕವಾಗಿಸಿಕೊಳ್ಳದೆ ನೆಮ್ಮದಿಯಿಂದ ಬಾಳಬಹುದು ಎಂದು ಸಾಹಿತಿಗಳಾದ ಡಾ.ಮಾನಕರಿ ಶ್ರೀನಿವಾಸಾಚಾರ್ಯರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ‘ತಾಳುವಿಕೆಗಿಂತ ಅನ್ಯ ತಪವು ಇಲ್ಲ' ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಈ ಹೊತ್ತಿನ ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿಗೆ ಸಿಲುಕಿ ಶಾಂತಿಯನ್ನು ಕಳೆದುಕೊಂಡು ಹತಾಶರಾಗುತ್ತಿದ್ದಾರೆ. ಪ್ರತಿ ಗಳಿಗೆಯಲ್ಲೂ ತಾಳ್ಮೆಯಿಂದ ಇರಬೇಕೆಂದರು. ದಾಸ ಸಾಹಿತ್ಯದ ಕಣ್ಮಣಿಗಳಾದ ವಾದಿರಾಜರು ತಮ್ಮ ಕೀರ್ತನೆಗಳ ಮೂಲಕ ಅನುಭಾವ ಮತ್ತು ಲೋಕನೀತಿಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ ಎಂದರು.
ದುಡುಕು, ಮಿಡುಕು, ಸಿಡುಕು ಮೊದಲಾದ ದೌರ್ಬಲ್ಯಗಳನ್ನು ಮೆಟ್ಟಿ ನಿಂತು, ಧೈರ್ಯದಿಂದ, ನೈತಿಕ ಬಲದಿಂದ ಮೌಲಿಕ ಬದುಕನ್ನು ಕಟ್ಟಿಕೊಳ್ಳುವ ಮಾನಸಿಕ ಸಾಧನವೇ ತಾಳ್ಮೆ ಎಂದು ಮಾರ್ಮಿಕವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್ .ಕೆ. ಮಂಜುನಾಥ್ ರೆಡ್ಡಿಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ತಾಳ್ಮೆಯ ಮೊರೆ ಹೋಗಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಯವರು ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಉಪನ್ಯಾಸ ಮಾಲಿಕೆಗಳು ತುಂಬ ನೆರವಾಗುತ್ತವೆ ಎಂದರು.
ಆರಂಭದಲ್ಲಿ ಪ್ರಾರ್ಥನೆಯನ್ನು ಉಪನ್ಯಾಸಕ ಸತ್ಯಮೂರ್ತಿ ನೆರವೇರಿಸಿದರು. ಸ್ವಾಗತವನ್ನು ಸಹ ಪ್ರಾಧ್ಯಾಪಕ ಡಾ.ಬಿ.ಜಿ.ಕಲಾವತಿಯವರು ಮಾಡಿದರು. ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಎಂ.ಎನ್ ನಿರ್ವಹಿಸಿದ ಈ ಕಾರ್ಯಕ್ರಮವು ಸಹಾಯಕ ಪ್ರಾಧ್ಯಾಪಕ ಲಿಂಗಪ್ಪ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಜ್ಯೋತಿ ಅಣ್ಣಾರಾವ್, ಮಂಜುನಾಥ ಉಲವತ್ತಿ ಶೆಟ್ಟರ್, ಚೂಡಾಮಣಿ, ಡಾ.ಕೆ.ಬಸಪ್ಪ, ಮಹಾಂತೇಶ, ಹುಲುಕುಂಟೇಶ್ವರ, ಗೋವಿಂದ, ಮೇಘರಾಜ ಮುಂತಾದವರು ಉಪಸ್ಥಿತರಿದ್ದರು.