‘ಪೋಷಕರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ’
ಬ್ಯಾಡಗಿ: ದೇಶದಲ್ಲಿ ಕೊರೊನಾ ಸೋಂಕಿನ ಅಲೆಯ ಮುನ್ಸೂಚನೆ ಇರುವುದರಿಂದ ಕೇಂದ್ರ ಸರಕಾರ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿದ್ದು, ಪೋಷಕರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.ಪಟ್ಟಣದ ಎಸ್’ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್’ನಲ್ಲಿ 15ರಿಂದ 18ವಯೋಮಿತಿಯ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ 44ಪ್ರೌಢಶಾಲೆ ಹಾಗೂ 13ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 15ರಿಂದ 18ವರ್ಷದೊಳಗಿನ 7975 ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ವಿದ್ಯಾರ್ಥಿಗಳಿಗೆ ಆಯಾ ಶಾಲಾ,ಕಾಲೇಜುಗಳಲ್ಲಿ ಕೋವಿಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಕಲಿದ್ದು, ಆಯಾ ಶಾಲಾ ಕಾಲೇಜುಗಳ ಮುಖ್ಯ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಸೂಚಿಸಿದರು.ತಾಲೂಕಾ ಆರೋಗ್ಯಾಧಿಕಾರಿ ಡಾ.ಸುಹೀಲ್ ಹರವಿ ಮಾತನಾಡಿ, ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 15ರಿಂದ 18ವರ್ಷದೊಳಗಿನ 7975 ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಗುರಿಯಿದ್ದು, ಇದರಲ್ಲಿ 44 ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5241 ವಿದ್ಯಾರ್ಥಿಗಳಿಗೆ ಹಾಗೂ 13 ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 2734 ವಿದ್ಯಾರ್ಥಿಗಳು ಇದ್ದಾರೆ. ಲಸಿಕೆ ಹಾಕುವ ಸಲುವಾಗಿ ತಲಾ ಇಬ್ಬರು ಸಿಬ್ಬಂದಿಯನ್ನು ಒಳಗೊಂಡ 26 ಲಸಿಕಾ ತಂಡಗಳನ್ನು ರಚಿಸಲಾಗಿದ್ದು, ಜನೇವರಿ 3ರಿಂದ 5ರವರೆಗೆ ಮೂರು ದಿನದಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ಬಿಇಒ ರುದ್ರಮುನಿ, ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ, ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಜಿತೇಂದ್ರ ಸುಣಗಾರ, ಸುರೇಶ ಉದ್ಯೋಗಣ್ಣನವರ, ಸದಾನಂದ ಚಿಕ್ಕಮಠ, ಪ್ರಭುಗೌಡ ದೊಡ್ಡಮನಿ, ವೈ.ಎನ್.ಹಿರಿಯಕ್ಕನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.