ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನ ಕಿರುಕುಳ ಮತ್ತು ದೌರ್ಜನ್ಯ ಖಂಡಿಸಿ ಶಾಲೆಗೆ ಬೀಗ ಹಾಕಿ ಪೋಷಕರು ಪ್ರತಿಭಟನೆ
ಕಂಪ್ಲಿ 23 : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿರುವ ಘಟನೆ ಕಂಪ್ಲಿ ತಾಲೂಕಿನ ದೇವಸಮುದ್ರ ಸರ್ಕಾರಿ ಶಾಲೆ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಘಟನೆ ತಗ್ಗಿಸುವ ದುರ್ಘಟನೆ ಇದಾಗಿದ್ದು, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 11 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತಿಥಿ ಶಿಕ್ಷಕ ಜಡೆಪ್ಪ ಕಿರುಕುಳ ಮತ್ತು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಕಳೆದ ಸೋಮವಾರ(ಫೆ.16)ದಂದು ಬೆಳಿಗ್ಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಂತಹ 5ನೇ ತರಗತಿಯ ವಿದ್ಯಾರ್ಥಿನಿಯೂ ಆವರಣದಲ್ಲಿ ಸ್ವಚ್ಚತೆಯಲ್ಲಿ ನಿರತರಾದಾಗ ಇಲ್ಲಿನ ಅತಿಥಿ ಶಿಕ್ಷಕ ನಮ್ಮ ಮನೆಗೆ ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿ, ವಿದ್ಯಾರ್ಥಿನಿ ಮೇಲೆ ಕಿರುಕುಳ ಎಸಗಿದ್ದಾನೆ.
ಫೆ.22ರ ಭಾನುವಾರ ಸಂಜೆ ತಮ್ಮ ಮನೆಯಲ್ಲಿದ್ದಾಗ ಪೋಷಕರು ವಿದ್ಯಾರ್ಥಿನಿಗೆ ನಾಳೆ ಅಂದರೆ ಸೋಮವಾರ ಶಾಲೆಗೆ ಹೋಗಬೇಕು ಎಂದಾಗ ಅಳುತ್ತಾ ಪೋಷಕರ ಮುಂದೆ ಕರಾಳ ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಈ ಘಟನಾ ವಿಷಯ ತಿಳಿದ ಪೋಷಕರು ವಿದ್ಯಾರ್ಥಿನಿ ಮುಖೇನ ಪೊಲೀಸ್ ಠಾಣೆಗೆ ಶಿಕ್ಷಕನನ್ನು ಹಿಡಿದುಕೊಂಡು ಬಂದು ಒಪ್ಪಿಸಿ, ಫೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಇನ್ನೂ ತನಿಖಾ ಕಾರ್ಯದ ಮೂಲಕ ಇನ್ನಷ್ಟು ಮಾಹಿತಿ ಹೊರ ಬರಬೇಕಾಗಿದೆ. ಶಾಲೆ ಮುಂದೆ ಪ್ರತಿಭಟನೆ : ಈ ಘಟನೆ ಖಂಡಿಸಿ, ಪೋಷಕರು ಹಾಗೂ ವಾಲ್ಮೀಕಿ ನಾಯಕ ಸಮಾಜದವರು ಇಲ್ಲಿನ ದೇವಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ, ಅತಿಥಿ ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು.
ಇದಕ್ಕೆ ಮುಖ್ಯಗುರುವಿನ ಬೇಜವಾಬ್ದಾರಿ ಕಾರಣವಾಗಿದೆ ಎನ್ನಲಾಗುತ್ತಿದೆ. ಇವರನ್ನು ಸೇವೆಯಿಂದ ವಜಾಗೊಳಿಸಿ, ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕೆಂಬ ಒತ್ತಾಯಸಿದರು ನಂತರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ನೀರ್ಗಂಟಿ ವಿರೇಶ ಮಾತನಾಡಿ, ಮಾನವ ಕುಲ ತಲೆ ತಗ್ಗಿಸುವಂತಹ ಘಟನೆಯಾಗಿದೆ. ನಿರ್ಭಯ ಮತ್ತು ನಿರ್ಭಿತಿಯಿಂದ ಮಕ್ಕಳು ಶಾಲೆಗೆ ಹೋಗಬೇಕೆಂದರೆ, ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹಿಳಾ ಮತ್ತು ಮಕ್ಕಳ ಆಯೋಗವು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು, ಶಿಕ್ಷಿಸಬೇಕು. ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಇದನ್ನು ಇಲ್ಲಿಗೆ ಬಿಡುವು ಮಾತೇ ಇಲ್ಲ ಎಂದರು.