ಐ.ಆರ್.ಮಠಪತಿಗೆ ತೋಂಟದ ಶ್ರೀ ರಾಷ್ಟ್ರೀಯ ಪ್ರಶಸ್ತಿ
ಲೋಕದರ್ಶನ ವರದಿ
ಹಾರೂಗೇರಿ 16: ಗದುಗಿನ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಕೊಡಮಾಡುವ ಡಾ.ತೋಂಟದ ಸಿದ್ಧಲಿಂಗ ರಾಷ್ಟ್ರೀಯ ಪ್ರಶಸ್ತಿಗೆ ಇಲ್ಲಿನ ನಿಶ್ಚಿಂತ ನೆಲೆಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಆಯ್.ಆರ್.ಮಠಪತಿ ಅವರನ್ನು ಜ.ತೋಂಟದಾರ್ಯ ವಿದ್ಯಾಪೀಠ ಆಯ್ಕೆ ಮಾಡಿದೆ. ಆಯ್.ಆರ್.ಮಠಪತಿ ಅವರು ಕಳೆದ ನಾಲ್ಕೈದು ದಶಕಗಳಿಂದ ಶರಣ ವಿಚಾರ ವಾಹಿನಿ ಮೂಲಕ ಕಲ್ಯಾಣದ ಶರಣ, ಶರಣೆಯರ ವಚನ, ತತ್ವ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅವರು ಶಿಕ್ಷಕರಾಗಿ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಅಲ್ಲದೇ ರಾಜ್ಯ ಹಾಗೂ ಜಿಲ್ಲಾಮಟ್ಟದ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ.
ಮನೆಮನೆಯಿಂದ ಮನೆಮನಕ್ಕೆ ವಚನ ವೈಭವ, ವಚನ ದರ್ಬಾರ, ಕಲ್ಯಾಣದಂಗಳದಲ್ಲಿ ಶರಣ ದಂಪತಿಗಳು, ಶರಣ ಸಂಸ್ಕೃತಿ ಉತ್ಸವ, ವಚನ ಕಂಠಪಾಠ, ವಚನ ಶ್ರಾವಣ, ವಚನ ಗಾಯನ, ಅಂತರ್ಜಾತಿ ವಿವಾಹ, ವ್ಯಸನ ಮುಕ್ತ ಸಮಾಜ ನಿರ್ಮಾಣ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ನಾಡಿನಾಧ್ಯಂತ ಸಂಚರಿಸಿ 12ನೇ ಶತಮಾನದ ಬಸವಾಧಿಶರಣರ ವಚನಗಳು ಮತ್ತು ಶರಣರ ತತ್ವಗಳನ್ನು ಪ್ರಚಾರ ಮಾಡಿದ್ದಾರೆ. ಅ.22 ರಂದು ಗದಗನಲ್ಲಿ ನಡೆಯಲಿರುವ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ 8ನೇ ಪುಣ್ಯಸ್ಮರಣೆ ಹಾಗೂ ಮರಣವೇ ಮಹಾನವಮಿ ಆಚರಣೆ ಸಂದರ್ಭದಲ್ಲಿ ಶರಣ ಆಯ್.ಆರ್.ಮಠಪತಿ ಅವರಿಗೆ ಒಂದು ಲಕ್ಷರೂ. ಗೌರವಧನದೊಂದಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.