ಪೊಲೀಸ್ ಸಿಬ್ಬಂದಿ ಮೇಲೆ ಮಾಜಿ ರೌಡಿ ಹಲ್ಲೆ ನಡೆಸಿದರೂ ಮೌನವಾಗಿದ್ದ ಪಿಎಸ್ಐ ಬಸವರಾಜ ಅಮಾನತು; 8 ಪೊಲೀಸರ ವರ್ಗಾವಣೆ
ಕಾರವಾರ 18 : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪೊಲೀಸರ ಮೇಲೆ ಮಾಜಿ ರೌಡಿಯೊಬ್ಬ ಅವಾಚ್ಯವಾಗಿ ಬೈದು, ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ಸಿಬ್ಬಂದಿಯ ರಕ್ಷಣೆಗೆ ನಿಲ್ಲದ ಹಿನ್ನೆಲೆಯಲ್ಲಿ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮಬನೂರ ಅವರನ್ನು ಅಮಾನತ್ ಮಾಡಿದ್ದಾರೆ. ಹಳಿಯಾಳ ಪೊಲೀಸ್ ಠಾಣೆಯ 8 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ಎಸ್ಪಿ ದೀಪನ್ ಆದೇಶ ಹೊರಡಿಸಿದ್ದಾರೆ. ಮಾಜಿ ರೌಡಿ ಶೀಟರ್ ಆಗಿರುವ ಮಚ್ಚ್ ಮಂಜ್ಯಾ ಎಂಬಾತ ಎಣ್ಣೆ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದನು.
ಈ ಸಂಬಂಧ ಮಾಹಿತಿ ತಿಳಿದ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಆದರೆ, ಪೊಲೀಸರನ್ನು ನೋಡುತ್ತಿದ್ದಂತೆಯೇ ವಿಪರೀತ ಕೋಪಗೊಂಡ ಮಚ್ಚ್ ಮಂಜ್ಯಾ, ಪೊಲೀಸ್ ಸಿಬ್ಬಂದಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದನು. ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಈ ವೇಳೆ ಸ್ಥಳದಲ್ಲಿಯೇ ಇದ್ದ ಪಿಎಸ್ಐ ಅವರ ಮೌನ ವರ್ತನೆ ಪೊಲೀಸ್ ಇಲಾಖೆಯೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತನ್ನ ಕೈಕೆಳಗಿನ ಸಿಬ್ಬಂದಿಯ ಮೇಲೆ ಮಾಜಿ ರೌಡಿಯೊಬ್ಬ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸುತ್ತಿದ್ದರೂ, ಪಿಎಸ್ಐ ಬಸವರಾಜ್ ಮಾತ್ರ, ಪೊಲೀಸ್ ವಾಹನದಿಂದ ಕೆಳಗೆ ಇಳಿಯದೆ ಸುಮ್ಮನೆ ಕುಳಿತಿದ್ದರು.
ಸಿಬ್ಬಂದಿ ಮೇಲೆ ಹಲ್ಲೆಯಾದರೂ ಅವರ ನೆರವಿಗೆ ಧಾವಿಸದ, ಪಿಎಸ್ಐ ನಡೆಯು ಭಾರಿ ಟೀಕೆಗೆ ಗುರಿಯಾಗಿತ್ತು. ತಮ್ಮ ಪರವಾಗಿ ನಿಲ್ಲದ ಮೇಲಾಧಿಕಾರಿಯ ಈ ವರ್ತನೆಯಿಂದಾಗಿ ಜಿಲ್ಲೆಯ ಕೆಳಹಂತದ ಪೊಲೀಸ್ ಸಿಬ್ಬಂದಿಗಳಲ್ಲಿ ವ್ಯಾಪಕ ಅಸಮಾಧಾನ ಭುಗಿಲೆದ್ದಿತ್ತು. ಈ ಅಸಮಾಧಾನದ ಕಟ್ಟೆಯೊಡೆಯುತ್ತಿದ್ದಂತೆಯೇ ಎಚ್ಚೆತ್ತ ಎಸ್ಪಿ ದೀಪನ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಪಿಎಸ್ಐ ಅವರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದಾರೆ.