‘ದಿಯಾ’ ನಟನಿಗೆ ಹೆಚ್ಚಿದ ಬೇಡಿಕೆ, ಬಾಲಿವುಡ್ ನತ್ತ ಪೃಥ್ವಿ ಅಂಬರ್
ಬೆಂಗಳೂರು, ಜ 20 :ಕಳೆದ ವರ್ಷ 2020ರಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದ ‘ದಿಯಾ’ ಚಿತ್ರದ ನಾಯಕ ನಟ ಪೃಥ್ವಿ ಅಂಬರ್ ಅವರಿಗೆ ಬೇಡಿಕೆ ಹೆಚ್ಚಿದ್ದು, ಸ್ಯಾಂಡಲ್ ವುಡ್ ಜತೆಗೆ ಬಾಲಿವುಡ್ ನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಗಿದ್ರೆ, ಬಾಲಿವುಡ್ ನಲ್ಲಿ ಪೃಥ್ವಿಗೆ ಸಿಕ್ಕಿರುವ ಅವಕಾಶವೇನು? ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರೆ, ‘ದಿಯಾ’ ಚಿತ್ರದ ರಿಮೇಕ್ ನಲ್ಲಿ! ಹೌದು. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡು, ಬಳಿಕ ಓಟಿಟಿಯಲ್ಲೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಈಗ ಹಿಂದಿಗೆ ರಿಮೇಕ್ ಆಗುತ್ತಿದ್ದು, ಜನಮೆಚ್ಚುಗೆ ಪಡೆದಿರುವ 'ಆದಿ' ಪಾತ್ರದಲ್ಲಿ ಪೃಥ್ವಿಯೇ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ‘ದಿಯಾ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಕೆ.ಎಸ್. ಅಶೋಕ್ ರಿಮೇಕ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಕೂಡ ಶುರುವಾಗಿದೆಯಂತೆ.
ಇತ್ತೀಚೆಗೆ ಪೃಥ್ವಿ ಅಂಬರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಅವರು ರಿಮೇಕ್ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಗೆ ಪುಷ್ಟಿ ನೀಡಿದೆ. ಪೃಥ್ವಿ ಅಂಬರ್ ಸ್ಯಾಂಡಲ್ ವುಡ್ ಗೆ ಕಾಲಿಡುವ ಮುನ್ನ, ತುಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. 'ದಿಯಾ' ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ಚಂದನವನದಲ್ಲಿ ಬೇಡಿಕೆ ಹೆಚ್ಚಿದೆ. ಶಿವರಾಜ್ಕುಮಾರ್ ಜೊತೆಗೆ 'ಶಿವಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಲೋಹಿತ್ ಎಚ್. ನಿರ್ಮಾಣದ 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. 'ಫಾರ್ ರಿಜಿಸ್ಟ್ರೇಷನ್' ಮತ್ತು 'ಶುಗರ್ಲೆಸ್' ಚಿತ್ರಗಳೂ ಅವರ ಕೈಯಲ್ಲಿವೆ.