ರಾಷ್ಟ್ರೀಯ

ಜಮ್ಮು ಕಾಶ್ಮೀರದಲ್ಲಿ ಆಯುಷ್ಮಾನ್‌ ಭಾರತ್‌ 'ಸೇಹತ್‌' ಯೋಜನೆಗೆ ಪ್ರಧಾನಿ ಮೋದಿ ಚಾಲನೆ; 21 ಲಕ್ಷ ಕುಟುಂಬಗಳಿಗೆ ಲಾಭ

ಜಮ್ಮು ಕಾಶ್ಮೀರದಲ್ಲಿ ಆಯುಷ್ಮಾನ್‌ ಭಾರತ್‌ 'ಸೇಹತ್‌' ಯೋಜನೆಗೆ ಪ್ರಧಾನಿ ಮೋದಿ ಚಾಲನೆ; 21 ಲಕ್ಷ ಕುಟುಂಬಗಳಿಗೆ ಲಾಭ

ಜಮ್ಮು, ಡಿಸೆಂಬರ್ 26: ಜಮ್ಮು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ವಿಮಾ ಯೋಜನೆ ಕಲ್ಪಿಸುವ ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)-'ಸೇಹತ್‌'ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರಂಭಗೊಂಡ ಈ ಯೋಜನೆ, 2011ರ ಜನಗಣತಿಯ ಆಧಾರದ ಮೇಲೆ 21 ಲಕ್ಷ ಅರ್ಹ ಫಲಾನುಭವಿಗಳಿಗೆ ಲಾಭ ಒದಗಿಸಲಿದ್ದು, ಅವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ.

ಈ ಸಂದರ್ಭದಲ್ಲಿ ವರ್ಚ್ಯುವಲ್‌ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಇದು ಜಮ್ಮು ಕಾಶ್ಮೀರಕ್ಕೆ ಐತಿಹಾಸಿಕ ದಿನ.  ಪ್ರತಿ ವ್ಯಕ್ತಿ ಕೂಡ ಆಯುಷ್ಮಾನ್‌ ಭಾರತ್‌ ಯೋಜನೆಯ ಲಾಭ ಪಡೆಯುತ್ತಾರೆ. ನಾನು ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಈ ಯೋಜನೆಗೆ ಚಾಲನೆ ನೀಡಲು ಬಯಸಿದ್ದೆ" ಎಂದರು.

"ಅಟಲ್‌ ಜಿ ಜಮ್ಮು ಕಾಶ್ಮೀರದೊಂದಿಗೆ ವಿಶೇಷ ಸಂಪರ್ಕ ಹೊಂದಿದ್ದರು. ಇದು ಈಗ 'ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿತನ '"ದ ಮಾರ್ಗದಲ್ಲಿ ಸಮೃದ್ಧಿಯಾಗುತ್ತಿದೆ ಎಂದು ಹೇಳಿದರು.

ಆರು ಲಕ್ಷ ಕುಟುಂಬಗಳಿಗೆ ಈಗಾಗಲೇ ಆಯುಷ್ಮಾನ್‌ ಭಾರತ್‌ ಯೋಜನೆಯ ಲಾಭ ದೊರೆಯುತ್ತಿದೆ. ಈಗ ಸೇಹತ್ ಯೋಜನೆಯಿಂದ ಎಲ್ಲಾ 21 ಲಕ್ಷ ಕುಟುಂಬಗಳಿಗೆ ಇದರ ಫಲ ದೊರೆಯಲಿದೆ. ಫಲಾನುಭವಿಗಳ ಚಿಕಿತ್ಸೆ ಕೇವಲ ಜಮ್ಮು ಕಾಶ್ಮೀರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೀಮಿತವಾಗುವುದಿಲ್ಲ. ಬದಲಿಗೆ, ದೇಶಾದ್ಯಂತ ಈ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲಾ ಆಸ್ಪತ್ರೆಗಳಲ್ಲಿ ಇದರ ಉಪಯೋಗ ಪಡೆಯಬಹುದಾಗಿದೆ ಎಂದರು.

ಆದರೆ, ಈ ಸೌಲಭ್ಯವನ್ನು ಕೋಲ್ಕತಾದಲ್ಲಿ ಕಲ್ಪಿಸಲಾಗದು. ಏಕೆಂದರೆ, ಅಲ್ಲಿನ ಸರ್ಕಾರ ಈ ಯೋಜನೆಯಡಿ ನೋಂದಣಿಯಾಗಲು ಒಪ್ಪುತ್ತಿಲ್ಲ ಎಮದು ಕಿಡಿಕಾರಿದರು.

ತಾವು ಹಿಂದೆ ಪಿಡಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, "ನಾವು ಹಿಂದೆ ಅಧಿಕಾರದಲ್ಲಿದ್ದೆವು. ಆದರೆ, ನಂತರ ಅದನ್ನು ತಿರಸ್ಕರಿಸಿದೆವು. ಏಕೆಂದರೆ, ಜನರಿಗೆ ಯಾವುದೇ ಅಭಿವೃದ್ಧಿ ಯೋಜನೆ ನೀಡದೆ ಅದಿಕಾರದಲ್ಲಿರಲು ನಾವು ಬಯಸಿರಲಿಲ್ಲ. ಆದ್ದರಿಂದ ತಳಮಟ್ಟದಿಂದ ಪ್ರಜಾಪ್ರಬುತ್ವವನ್ನು ಸದೃಢಗೊಳಿಸಲು ಪಂಚಾಯತ್‌ ಚುನಾವಣೆಗಳನ್ನು ನಡೆಸಲಾಗಿದೆ. ಇತ್ತೀಚೆಗೆ ನಡೆದ ಡಿಡಿಸಿ ಚುನಾವಣೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಮತ ಚಲಾಯಿಸಿದ್ದು ಒಂದು ಉತ್ತಮ ಬೆಳವಣಿಗೆ" ಎಂದರು.

ಆದರೆ, ಪುದುಚೆರಿಯಲ್ಲಿ ಕಾಂಗ್ರೆಸ್‌ ಪಂಚಾಯತ್‌ ಚುನಾವಣೆಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತಿಲ್ಲ.  ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿಲ್ಲ. ಆದರೆ, ಇತರರಿಗೆ ಮಾತ್ರ ಪಾಠ ಹೇಳುತ್ತಿದೆ. ಕೆಲ ಪಕ್ಷಗಳ ಬೋಧನೆಯ ಮಾಡುವುದು ಒಂದು, ಕೆಲಸ ಮಾಡುವುದು ಮತ್ತೊಂದು ಎಂದು ವ್ಯಂಗ್ಯವಾಡಿದರು.

ನಂತರ, ಅವರು ಆಯುಷ್ಮಾನ್‌ ಭಾರತ್‌ ಯೋಜನೆಯ  ಕೆಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. 

ಸುದ್ದಿ ಓದಿ