ವಿಜಯಪುರ

ವಿಜಯಪುರದಲ್ಲಿ ಮಹಿಳೆಯರ ಪ್ರೋಮೋ ರನ್ಗೆ ಭರ್ಜರಿ ಸ್ಪಂದನೆ

ವಿಜಯಪುರದಲ್ಲಿ ಮಹಿಳೆಯರ ಪ್ರೋಮೋ ರನ್ಗೆ ಭರ್ಜರಿ ಸ್ಪಂದನೆ

ವಿಜಯಪುರ 06: ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಪ್ರೋಮೋ ರನ್ಗೆ ನಗರದಲ್ಲಿ ಭರ್ಜರಿ ಸ್ಪಂದನೆ ದೊರೆಯಿತು. ನಗರದ ಗಗನ್ ಮಹಲ್ನಿಂದ ಆರಂಭವಾದ ಓಟವು ಗೋಲ್ ಗುಂಬಜ್ವರೆಗೆ ಸಾಗಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಪತ್ನಿ ಪ್ರಾಧ್ಯಾಪಕಿ ರಂಜಿತಾ ಕೆ.ಆರ್‌. ಹಾಗೂ ಖ್ಯಾತ ದಂತ ವೈದ್ಯೆ ಡಾ. ಸವಿತಾ ಕಲ್ಲೂರ ಅವರು ಓಟಕ್ಕೆ ಚಾಲನೆ ನೀಡಿದರು. ನಗರ ಹಾಗೂ ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು ಸೇರಿದಂತೆ ವಿವಿಧ ವರ್ಗದ ನೂರಾರು ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.  

ಡಾ. ಸವಿತಾ ಕಲ್ಲೂರ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ. ಡಿ.13ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ನಲ್ಲಿ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.

ಪ್ರಸಿದ್ಧ ಓಟಗಾರ ರೇಣುಕಾ ಪ್ರಸಾದ್ ಅವರು ಮಹಿಳೆಯರು ಹಾಗೂ ಯುವತಿಯರಿಗೆ ಓಟದ ತರಬೇತಿ ನೀಡಿದರು. ಸಾವಿತ್ರಿ ಡವಳೇಶ್ವರ ಅವರ ಜುಂಬಾ ನೃತ್ಯ, ವಾದ್ಯಮೇಳ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಬ್ರಹ್ಮಕುಮಾರಿ ಬಿ.ಕೆ. ಸರೋಜಾ ಅಕ್ಕ ವ್ಯಸನಮುಕ್ತಿಯ ಪ್ರತಿಜ್ಞೆ ಬೋಧಿಸಿ ಧ್ಯಾನ ಮಾಡಿಸಿದರು.  

ವೃಕ್ಷಥಾನ್ ಹೆರಿಟೇಜ್ ರನ್ಗಾಗಿ ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದ್ದು, ನೂರಾರು ಮಂದಿ ಹೆಸರು ನೋಂದಾಯಿಸಿಕೊಂಡರು. ‘ಅವಳು ಓಡಿದರೆ ದಾರಿ ದೊಡ್ಡದು’ ಸೇರಿದಂತೆ ಪರಿಸರ ಜಾಗೃತಿ ಮೂಡಿಸುವ ಘೋಷಣೆಗಳು ಮೊಳಗಿದವು. 


ಸುದ್ದಿ ಓದಿ