ನಮ್ಮ ನಡೆ, ಅಂತರಂಗದೆಡೆಗೆ; ವಾಕ್ ವಿಥಿನ್ - 2025
ಧಾರವಾಡ 25: ‘ನಮ್ಮ ನಡೆ, ಅಂತರಂಗದೆಡೆಗೆ' ಎಂಬ, ವಾಕ್ ವಿಥಿನ್ -2025, ವಿಶಿಷ್ಟ ಪಾದಯಾತ್ರೆ, ನಾಡಿದ್ದು ಶನಿವಾರ 27 ರಿಂದ, ಬುಧವಾರ 31ನೇ ತಾರೀಖಿನ ವರೆಗೆ, ಐದು ದಿನಗಳ ಕಾಲ ಧಾರವಾಡ ಹಾಗೂ ಸುತ್ತಲಿನ ಆಯ್ದ ಕೆಲ ಹಳ್ಳಿಗಳಲ್ಲಿ, ಗ್ರಾಮ ವಾಸ್ತವ್ಯದ ಮೂಲಕ, ನಡೆಯಲಿದೆ.
ಜನಸಹಭಾಗಿತ್ವದ ಈ ನಡಿಗೆಗೆ, ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ಬಳಿಯ, ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ, ಸಂಸ್ಥಾಪಕರು, ಖ್ಯಾತ ಅಭ್ಯುದಯ ತಜ್ಞ, ಭಾರತ ಸರ್ಕಾರದ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ, ಸಾಮರ್ಥ್ಯ ಅಭಿವೃದ್ಧಿ ಆಯೋಗದ ತಜ್ಞ ಸದಸ್ಯರಾದ, ಡಾ. ಆರ್. ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ, ವಾಕ್ ವಿಥಿನ್ -2025 ನಡೆಯಲಿದೆ.
ಪದ್ಮಶ್ರೀ ಪುರಸ್ಕೃತ, ಕಲಬುರಗಿಯ ಖ್ಯಾತ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞ ವೈದ್ಯೆ ಡಾ. ವಿಜಯಲಕ್ಷ್ಮೀ ದೇಶಮಾನೆ ಸೇರಿದಂತೆ, ಅನೇಕ ಗಣ್ಯರು ಪಾಲ್ಗೊಂಡು, ಧಾರವಾಡದ ಮನೋಆರೋಗ್ಯ ಹಾಗೂ ನರ ವಿಜ್ಞಾನಗಳ ಸಂಸ್ಥೆ ಡಿಮ್ಹಾನ್ಸ್ ಸಭಾಂಗಣದಲ್ಲಿ, ಶನಿವಾರ 27ನೇ ತಾರೀಖು ಬೆಳಗ್ಗೆ 10 ಗಂಟೆಗೆ, ಐದು ದಿನಗಳ ವಾಕ್ ವಿಥಿನ್ ನಡಿಗೆಗೆ ಚಾಲನೆ ನೀಡಲಿದ್ದಾರೆ.
ವಿವಿಧ ಕ್ಷೇತ್ರಗಳ ತಜ್ಞರು, ಜನ ಸಾಮಾನ್ಯರು, ವಿದ್ಯಾರ್ಥಿಗಳು ನಿತ್ಯ 10 ಕಿಲೋ ಮೀಟರ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಹಳ್ಳಿಗಳಿಗೆ ತೆರಳಿ, ಅವರ ಬದುಕು, ಸಾಧನೆ, ಬವಣೆ ಹಾಗೂ ಬೇಕು-ಬೇಡಗಳ ಬಗ್ಗೆ ಚಿಂತನ-ಮಂಥನ ನಡೆಸಲಿದ್ದಾರೆ.
ಕೆಲಗೇರಿ, ದಡ್ಡಿಕಮಲಾಪುರ, ಮುಗದ, ಕಲಕೇರಿ, ದೇವರಹುಬ್ಬಳ್ಳಿ, ಬಾಡ, ಮನಸೂರು ಹಾಗೂ ಮನಗುಂಡಿ ಮೂಲಕ, ಈ ಪಾದಯಾತ್ರೆ ಐದು ದಿನಗಳ ಗ್ರಾಮ ವಾಸ್ತವ್ಯದ ಮೂಲಕ, ಚಿಂತೆ ಮತ್ತು ಚಿಂತನೆಯ ಮಧ್ಯೆ ಸಾಗುವ, ಆತ್ಮಾವಲೋಕನದ ಹೆಜ್ಜೆ ವಾಕ್ ವಿಥಿನ್ ತಂಡ ಇರಿಸಲಿದೆ.
ನಿಸರ್ಗದಲ್ಲಿ ಮೌನ ನಡಿಗೆ, ಹಳ್ಳಿಯಲ್ಲಿ ಸಹಜ ಸಾಮಾನ್ಯ ವಾಸ್ತವ್ಯ, ಬೆಳ್ಳಂಬೆಳಗ್ಗೆ ಉತ್ಥಾನ, ಮಣ್ಣಿನ ಸಾಮಿಪ್ಯದಲ್ಲಿ ಬದುಕುವ ಸುಯೋಗ ಅರಸಲಿದ್ದಾರೆ. ಹಳ್ಳಿಗರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ.
31ನೇ ತಾರೀಖು, ಬುಧವಾರ ಮಧ್ಯಾಹ್ನ 1 ಗಂಟೆಗೆ, ನುಗ್ಗಿಕೇರಿಯ ವಿದ್ಯಾ ಪಿ. ಹಂಚಿನಮನಿ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ, ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ, ಖ್ಯಾತ ಶಿಕ್ಷಣ ತಜ್ಞ, ಪ್ರೊ. ಪಿ.ಆರ್. ಹಂಚಿನಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ.