ರಾಷ್ಟ್ರೀಯ

ಮುಜಫ್ಫರ್ ನಗರ ಗಲಭೆ; ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ಹಿಂಪಡೆಯುವುದಕ್ಕೆ ವಿಪಕ್ಷ ಆಕ್ಷೇಪ

ಮುಜಫ್ಫರ್ ನಗರ ಗಲಭೆ; ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ಹಿಂಪಡೆಯುವುದಕ್ಕೆ ವಿಪಕ್ಷ ಆಕ್ಷೇಪ

ಲಕ್ನೋ, ಡಿಸೆಂಬರ್.25: ಮುಜಫ್ಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿ 2013 ರಲ್ಲಿ ನಡೆದ ಮುಜಫ್ಫರ್ ನಗರ ಗಲಭೆಯ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ರಾಜ್ಯ ಸಚಿವ ಸುರೇಶ್ ರಾಣಾ ಮತ್ತು ಶಾಸಕರಾದ ಸಂಗೀತ ಸೋಮ್ ಮತ್ತು ಕಪಿಲ್ ಡಿಯೊ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಯುಪಿ ಸರ್ಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಆದಾಗ್ಯೂ, ಸರ್ಕಾರದ ಅರ್ಜಿಯ ಬಗ್ಗೆ ನ್ಯಾಯಾಲಯವು ಇನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ.   ರಾಜಕೀಯ ದುರುದ್ದೇಶದಿಂದ ಈ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರ ಈ ಅರ್ಜಿಯಲ್ಲಿ ಹೇಳಿದೆ.

ಈ ಮಧ್ಯೆ ಬಿಎಸ್ ಪಿ ವರಿಷ್ಠೆ ಮಾಯಾವತಿ ಶುಕ್ರವಾರ ಟ್ವೀಟ್ ಮಾಡಿ, ಮುಜಫ್ಫರ್ ನಗರ ಗಲಭೆಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ದಾಖಲಾದ ಪ್ರಕರಣಗಳನ್ನು ಸರ್ಕಾರ ಹಿಂಪಡೆದರೆ , ಗಲಭೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಖಲಾದ ಪ್ರಕರಣಗಳನ್ನೂ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದು ನ್ಯಾಯಸಮ್ಮತವಲ್ಲ ಮತ್ತು ಇದು ಸ್ವಯಂ ಅಪರಾಧ ಎಂದು  ಸಿಪಿಐ (ಎಂಎಲ್) ರಾಜ್ಯ ಕಾರ್ಯದರ್ಶಿ ಸುಧಾಕರ್ ರಾವ್  ಆರೋಪಿಸಿದ್ದಾರೆ.

"ಗಲಭೆಯ ಸಮಯದಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, 50,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾಗ ಸರ್ಕಾರವು ಅಂತಹ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳುತ್ತದೆ ? ಎಂದು ಅವರು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಅವರು ಪ್ರಶ್ನಿಸಿದ್ದಾರೆ.

ಸುದ್ದಿ ಓದಿ