ಹಿಂದಿ ದಿವಸ್ ಆಚರಣೆ ವಿರೋಧಿಸಿ ಖಂಡನೆ
ಬಳ್ಳಾರಿ 14: ಸೆಪ್ಟೆಂಬರ್ 14ರಂದು ಭಾರತ ಒಕ್ಕೂಟ ಸರ್ಕಾರ ನಡೆಸುವ ಹಿಂದಿ ದಿವಸ್ ಆಚರಣೆಗೆ ಕರ್ನಾಟಕ ಜನಸೈನ್ಯ ತೀವ್ರವಾಗಿ ವಿರೋಧಿಸಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ರೈಲ್ವೆ ನಿಲ್ದಾಣಗಳ ಮುಂಭಾಗದಲ್ಲಿ ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ನಡೆಸಿ, ರೈಲ್ವೇ ನಿಲ್ದಾಣದ ಮುಖ್ಯಸ್ಥರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆಯನ್ನು ಕರ್ನಾಟಕ ಜನಸೈನ್ಯ ತೀವ್ರವಾಗಿ ಖಂಡಿಸುತ್ತದೆ. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಕನ್ನಡಿಗರ ಮೇಲೆ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸಿ, ಕನ್ನಡಿಗರ ಮತ್ತು ದೇಶದ ವಿವಿಧ ರಾಜ್ಯಗಳಿಂದ ಸಂಗ್ರಹವಾಗಿರುವ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ್ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾಷಾ ವೈವಿಧ್ಯದ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು. ಅದಕ್ಕೆ ವಿಶೇಷ ಮಹತ್ವ, ಪ್ರೋತ್ಸಾಹ ನೀಡುವುದು ಅನ್ಯಾಯ.
ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿ ದಿವಸ್ ಆಚರಣೆಯ ಮೂಲಕ ಇತರ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರ ಭಾಷಿಕರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದು ಅಕ್ಷಮ್ಯ ಅಪರಾಧ. ಇದು ಇನ್ನು ಮೇಲಾದರೂ ನಿಲ್ಲಬೇಕಾಗಿದೆ.
ಸಂವಿಧಾನದ 343ನೇ ವಿಧಿಯು ದೇಶದ ಅಧಿಕೃತ ಭಾಷೆಯ ಕುರಿತು ವಿವರಿಸುತ್ತದೆ. (ಅಧಿಕೃತ ಭಾಷೆ ಎಂದರೆ ಸರ್ಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಮತ್ತು ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆ). ಈ ವಿಧಿಯ ಪ್ರಕಾರ, ದೇವನಾಗರಿ ಲಿಪಿಯಲ್ಲಿರುವ ಹಿಂದಿ ಭಾಷೆಯು ಅಧಿಕೃತ ಭಾಷೆ. ಆದರೆ, ಈ ಭಾಷೆಯ ಜೊತೆಗೆ ಸರ್ಕಾರಿ ಉದ್ದೇಶಗಳಿಗಾಗಿ ಹಿಂದಿಯ ಜೊತೆ ಇಂಗ್ಲಿಷ್ ಭಾಷೆಯನ್ನು ಕೇಂದ್ರಾಡಳಿತ ಹಾಗೂ ಸಂಸತ್ತಿನಲ್ಲಿ ಅಧಿಕೃತ ಭಾಷೆಯನ್ನಾಗಿ ಸಂವಿಧಾನ ಆರಂಭದ (26ನೇ ಜನವರಿ 1965) 15 ವರ್ಷಗಳವರೆಗೆ ಮಾತ್ರ ಮುಂದುವರೆಸಿಕೊಂಡು ಹೋಗಬಹುದು (ಸಂವಿಧಾನ ನೀಡಿರುವ ಈ ಅವಧಿ 1980ಕ್ಕೆ ಮುಕ್ತಾಯಗೊಂಡಿದೆ). 15 ವರ್ಷ ಪೂರ್ಣಗೊಂಡ ಮೇಲೆ ಭಾಷೆಗೆ ಸಂಬಂಧಿಸಿದಂತೆ ಒಂದು ಆಯೋಗವನ್ನು ರಾಷ್ಟ್ರಪತಿಯವರು ರಚಿಸಬೇಕು.
ಅದರಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಮಲಯಾಳಂ, ಗುಜರಾತಿ ಇತ್ಯಾದಿ ಭಾಷೆಗಳಿವೆ. ಹೀಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ರಾಜ್ಯಕ್ಕೆ ಅಧಿಕೃತ ಭಾಷೆ ಎಂದು ಘೋಷಿಸುವಾಗ ಹಿಂದಿ ಬಾರದ ವ್ಯಕ್ತಿಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಇದೇ ವಿಧಿಯ ‘ಇ‘ ಉಪವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಹಿಂದಿಯು ಅಧಿಕೃತ ಭಾಷೆ ಎಂದಿದೆಯೇ ಹೊರತು ರಾಷ್ಟ್ರೀಯ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ.
ಕೇಂದ್ರದ ಒಕ್ಕೂಟ ಸರ್ಕಾರದ ನೇತೃತ್ವವನ್ನು ಯಾವುದೇ ರಾಜಕೀಯ ಪಕ್ಷ ಹಿಡಿದರೂ ಹಿಂದಿ ಹೇರಿಕೆಯನ್ನು ಎಗ್ಗಿಲ್ಲದೆ ನಡೆಸಲಾಗುತ್ತಿದೆ. ಕಳೆದ ದಶಕಗಳಿಂದಲೂ ಕರ್ನಾಟಕ ಜನಸೈನ್ಯ ಮತ್ತು ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿವರ್ಷ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸುತ್ತಾ ಬಂದಿದ್ದರೂ, ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುವುದನ್ನು ನಿಲ್ಲಸಲಾಗಿಲ್ಲ. ಭಾರತದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ದೊರೆಯುವವರೆಗೆ ಈ ಪ್ರತಿರೋಧ ಮುಂದುವರೆಯಲಿದೆ.
ಭಾರತ ಸಂವಿಧಾನದ 343 ರಿಂದ 351 ವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತಂದು, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ಈ ಕೂಡಲೇ ಕಿತ್ತುಹಾಕಬೇಕು. ಈ ಪರಿಚ್ಛೇದಗಳನ್ನು ತೆಗೆದುಹಾಕಿದಾಗ ಮಾತ್ರ ಭಾರತೀಯರೆಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ. ಭಾಷೆಯ ಹೆಸರಿನ ತಾರತಮ್ಯ ಕೊನೆಗೊಳ್ಳಲೇಬೇಕಾಗಿದೆ.
ಹಿಂದಿ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳಾದ ಐಎಎಸ್, ಐಪಿಎಸ್, ಬ್ಯಾಂಕಿಂಗ್, ನೌಕಾಪಡೆ, ರೈಲ್ವೇ, ವಿಮಾನಯಾನ, ಭಾರತೀಯ ವಿಮಾ ನಿಗಮ ಮತ್ತು ರಕ್ಷಣಾ ವಲಯಗಳ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ದಕ್ಷಿಣ ಭಾರತ ನಿರುದ್ಯೋಗ ಯುವಕರು ಹಿಂದಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಕಷ್ಟಸಾಧ್ಯವಾಗುತ್ತಿದೆ. ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ.
ಈ ಸಂದರ್ಭದಲ್ಲಿ ಬಿ.ಹೊನ್ನೂರಪ್ಪ, ಎಂ.ಚೆಂಚಯ್ಯ, ಫಾರೂಕ್ ಷಫಿ, ಫಯಾಜ್ ಭಾಷ, ಶೇಖರ್ (ಚಿಟ್ಟಿ), ನಾಸೀರ್, ಆಯೇಷಾ ಸಿದ್ಧಿಕಾ, ಶ್ರೀನಿವಾಸರೆಡ್ಡಿ, ಲಕ್ಷ್ಮಿ, ಲಕ್ಷ್ಮಣ ಜಾಧವ್, ರಮೇಶ್ ಹಲಕುಂದಿ, ಹೊನ್ನಳ್ಳಿ ಹಸೇನ್, ಶಿವಕುಮಾರ್ ನಾಯಕ್, ಕ್ಯಾಸೆಟ್ ಕುಮಾರ್, ಇಬ್ರಾಹಿಂ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.