ನೇತ್ರ ತಜ್ಞ ಡಾ. ಪ್ರಭುಗೌಡರಿಗೆ ಸನ್ಮಾನ
ತಾಳಿಕೋಟಿ: ‘ದೇಹ ನಶ್ವರ ದೃಷ್ಟಿ ಅಮರ’ ದೃಷ್ಟಿ ಇದ್ದರೆ ಸೃಷ್ಟಿ ಎಂಬ ಘೋಷವಾಕ್ಯದಂತೆ ದೃಷ್ಟಿ ಹೀನತೆಯಿಂದ ಬಳಲುವ ಬಡವ ನಿರ್ಗತಿಕ ಜನರಿಗಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿರುವ ಡಾ. ಪ್ರಭುಗೌಡ ಪಾಟೀಲರ ಕಾರ್ಯ ಶ್ಲಾಘನೀಯವಾಗಿದೆ, ಎಂದು ನಾಡಿನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ತಿಳಿಸಿದರು.
ತಾಲೂಕಿನ ಚಬನೂರು ಗ್ರಾಮದಲ್ಲಿ ಅಮೋಘಸಿದ್ಧೇಶ್ವರ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಂಡ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ತಂಡದ ವತಿಯಿಂದ ನೇತ್ರ ತಜ್ಞ ಡಾ. ಪ್ರಭುಗೌಡರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಭುಗೌಡ ಪಾಟೀಲ-ಕಳೆದ 22ವರ್ಷಗಳಿಂದ ಅನುಗ್ರಹ ಸಂಸ್ಥೆಯನ್ನು ಸ್ಥಾಪಿಸಿ ಸುಮಾರು 10 ಲಕ್ಷ ರೋಗಿಗಳ ತಪಾಸಣೆ ಹಿ 1.5 ಲಕ್ಷಕ್ಕೂ ಅಧಿಕ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ಹಾಗೂ ಸುಮಾರು 35 ಸಾವಿರ ಬಡ ರೋಗಿಗಳ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. ಕಳೆದ 12 ವರ್ಷಗಳಿಂದ ನನ್ನ ಹುಟ್ಟುರಾದ ಚಬನೂರಿದಲ್ಲಿ ಇಂತಹ ಹಲವಾರು ಶಿಬಿರಗಳನ್ನು ನಡೆಸಿದ್ದೇನೆ. ಇದಕ್ಕೆ ನಿಮ್ಮೇಲ್ಲರ ಪ್ರೀತಿ ಹಾಗೂ ವಿಶ್ವಾಸವೆ ಕಾರಣ ಎಂದರು.
ಚಬನೂರು ಹಿರೇಮಠದ ಪೀಠಾಧಿಪತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಖ್ಯಾತ ಜೋತಿಷ್ಯ ಪ. ಪೂ. ಶ್ರೀ ರಾಮಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಜಾತ್ರಾ ಕಮೀಟಿ ಅಧ್ಯಕ್ಷ ಬಸನಗೌಡ .ಬ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಇಟಗಿ ಶ್ರೀಗಳು, ಸಿದ್ಧರಾಮಪ್ಪ ಮುತ್ಯಾ, ಶಿವು ಮುತ್ಯಾ, ಈರತಯ್ಯಾ ಹಿರೇಮಠ ಹಾಸ್ಯಕಲಾವಿದರಾದ ನರಸಿಂಹ ಜ್ಯೋಷಿ ಹಾಗೂ ಬಸವರಾಜ ಮಾಮನಿ ಇದ್ದರು.