5 ತೊಲಿ ಬಂಗಾರದ ಆಭರಣ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ
ಜಮಖಂಡಿ 25: ನಗರದ ಸಾರಿಗೆ ಸಂಸ್ಥೆ ನಿರ್ವಾಹಕನ ಕೈಚೀಲದಲ್ಲಿ ಇದ್ದ, 5 ತೊಲಿ ಬಂಗಾರದ ಆಭರಣ ಹಾಗೂ ಇತರೆ ವಸ್ತುಗಳನ್ನು ಮರಳಿ ನೀಡಿದ ನಿರ್ವಹಕನ ಪ್ರಾಮಾಣಿಕತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗದಿಂದ ಜಮಖಂಡಿಗೆ ಬರುವ ಬಸ್ಸಿನಲ್ಲಿ ರಾಮದುರ್ಗದಿಂದ ಮುಧೋಳಗೆ ಪ್ರಯಾಣಿಸುತ್ತಿದ್ದ ಅರ್ಚನಾ ಸಿಂಧೆ ಎಂಬ ಪ್ರಯಾಣಿಕೆ ತನ್ನ ಕೈಚೀಲವನ್ನು ಬಸ್ಸಲ್ಲಿ ಬಿಟ್ಟು ಮುಧೋಳದಲ್ಲಿ ಇಳಿದುಕೊಂಡಿದ್ದಳು.ಜಮಖಂಡಿಗೆ ಬಂದ ಬಸ್ನಲ್ಲಿ ಒಂದು ಕೈಚೀಲವನ್ನು ಕಂಡ ನಿರ್ವಾಹಕ ಚಂದ್ರಶೇಖರ ವಾಲಿಶೆಟ್ಟಿ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು,ಬಸ್ ನಿಲ್ದಾಣದಲ್ಲಿ ಕುಳಿತು ಕೈಚೀಲ ಬಿಟ್ಟ ಪ್ರಯಾಣಿಕರು ಬರುವ ದಾರಿ ಕಾಯುತ್ತಿದ್ದ, ಸಂಜೆ ವೇಳೆಗೆ ಅರ್ಚನಾ ಸಿಂಧೆ ಪ್ರಯಾಣಿಕೆ ಜಮಖಂಡಿ ಅಧಿಕಾರಿಗಳ ಬಳಿ ದೂರು ಸಲ್ಲಿಸುತ್ತಿದ್ದಂತೆ ಚಂದ್ರಶೇಖರ ವಾಲಿಶೆಟ್ಟಿ ಪ್ರಯಾಣಿಕೆಯ ಮುಖ ಚಹರೆ ಗುರ್ತಿಸಿ ತನ್ನಲ್ಲಿದ ಕೈಚೀಲವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳೆಗೆ ನೀಡಿದ್ದಾನೆ. ಆ ಮಹಿಳೆ ಕೈಚೀಲ ಪರೀಕ್ಷಿಸಿ ಅದರಲ್ಲಿದ್ದ 5 ತೊಲಿ ಬಂಗಾರದ ಆಭರಣ ಹಾಗೂ ಇತರೆ ವಸ್ತುಗಳು ಇದ್ದ ಬಗ್ಗೆ ಖಚಿತ ಪಡೆಸಿಕೋಂಡು,ನಿರ್ವಾಹಕನಿಗೆ ಕೈ ಮುಗಿದು ಧನ್ಯವಾದ ತಿಳಿಸಿದಳು.ಜಮಖಂಡಿ ಘಟಕ ವ್ಯವಸ್ಥಾಪಕ ಸಂಗಮೇಶ ಮಟೋಳ್ಳಿ ಹಾಗೂ ಸಿಬ್ಬಂದಿ ನಿರ್ವಾಹಕ ಚಂದ್ರಶೇಖರ ವಾಲಿಶೆಟ್ಟಿ ಅವರ ಪ್ರಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು.