ದೇಶದ ಸುಭದ್ರತೆ ಬಗ್ಗೆ ಕಾಳಜಿ ಇರುವುದು ಬಿಜೆಪಿ ಪಕ್ಷಕ್ಕೆ ಮಾತ್ರ: ನವೀನ್
ಶಿಗ್ಗಾವಿ 03: ದೇಶದ ಸುಭದ್ರತೆ ಬಗ್ಗೆ ಕಾಳಜಿ ಇರುವುದು ಬಿಜೆಪಿ ಪಕ್ಷಕ್ಕೆ ಮಾತ್ರ, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಹುಮ್ಮಸ್ಸು ಕಳೆದುಕೊಳ್ಳಬಾರದು, ಬದುಕಿನಲ್ಲಿ ಬಿಜೆಪಿ ಜೊತೆ ಗುರುತಿಸಿಕೊಳ್ಳುವುದೇ ದೊಡ್ಡ ಸೌಭಾಗ್ಯವಾಗಿದೆ, ಪ್ರತೀ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆ ಹಾಗೂ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿರಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಹೇಳಿದರು.
ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಧಾರವಾಡ ವಿಭಾಗದ ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಗಳ ತಾಲೂಕಿನ ವಿವಿಧ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯರ ಪ್ರಶಿಕ್ಷಣ ವರ್ಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಈ ದೇಶದ ಶಕ್ತಿಯಾಗಿದ್ದು, ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಇಡೀ ದೇಶದಲ್ಲಿ ಪಕ್ಷ ಸಂಘಟನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಅವರ ಕೈ ಬಲಪಡಿಸುವ ಕಾರ್ಯ ಮಾಡಬೇಕಾಗಿದೆ, ಶಿಸ್ತು ಮತ್ತು ಬದ್ಧತೆಗೆ ಹೆಸರಾದ ಬಿಜೆಪಿಯಲ್ಲಿ ಚುನಾಯಿತ ಸದಸ್ಯರ ಮತ್ತು ಕಾರ್ಯಕರ್ತರನ್ನು ಸೇನಾನಿಗಳಂತೆ ಸಜ್ಜುಗೊಳಿಸಲು ವರ್ಷಕ್ಕೊಮ್ಮೆ ಪ್ರಶಿಕ್ಷಣ ವರ್ಗ ತರಬೇತಿ ನೀಡುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ, ಪ್ರಶಿಕ್ಷಣ ವರ್ಗ ಎಂಬುದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಇಲ್ಲಿ ಕಲಿಯುವ ವಿಷಯಗಳು ಪದಾಧಿಕಾರಿ ಹಾಗೂ ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತದೆ. ಅಭ್ಯಾಸ ವರ್ಗವು ಶಾಲೆ ಇದ್ದಂತೆ, ಇಲ್ಲಿ ಕಲಿಯುವ ವಿಷಯಗಳನ್ನು ಸರಿಯಾಗಿ ಅರಿತುಕೊಳ್ಳಬೇಕು. ಈ ತರಗತಿಗಳಿಗೆ ಯಾರೂ ಗೈರು ಹಾಜರಾಗದೇ ಲಾಭ ಪಡೆದುಕೊಳ್ಳಬೇಕು. ಅಭ್ಯಾಸ ವರ್ಗವೂ ಶಿಕ್ಷಣಾರ್ಥಿಗಳಲ್ಲಿ ಆತ್ಮವಿಶ್ವಾಸ, ಲವಲವಿಕೆ, ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು.
ಸಂಜಯ್ ಮಸ್ಕಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಬಾಜಪ ಮಂಡಳದ ಅಧ್ಯಕ್ಷ ಶಿದ್ದರಾಜ ಕಲಕೋಟಿ, ಧಾರವಾಡ ಮಂಡಲ ಅಧ್ಯಕ್ಷ ಬಸವರಾಜ್ ಕುಂದಗೋಳಮಠ, ತಾಲೂಕ ಬಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಮಾಜಿ ಅಧ್ಯಕ್ಷೆ ರೂಪಾ ಬನ್ನಿಕ್ಕೊಪ್ಪ, ಬಿಜೆಪಿ ಪ್ರಮುಖರು ಹಾಗೂ ಹಾವೇರಿ, ಗದಗ, ಧಾರವಾಡದಿಂದ ಆಗಮಿಸಿದ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳ ಬಿಜೆಪಿ ಬೆಂಬಲಿತ ಸದ್ಯಸರು ಭಾಗವಹಿಸಿದ್ದರು, ಶಶಿದರ್ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.