ದೇಶಾಭಿಮಾನದಲ್ಲಿ ರಣಚಂಡಿಯಾದ ಒನಕೆ ಓಬವ್ವ
ಭಾರತದಂತಹ ಪುಣ್ಯಭೂಮಿಯಲ್ಲಿ ಅದೆಷ್ಟೋ ಮಹಾನ್ ಚೇತನಗಳು ಅರಳಿ ಹೋಗಿವೆ. ತಮ್ಮ ಜೀವಿತಾವಧಿಯಲ್ಲಿ ತನ್ನ ದೇಶದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ. ತನು ಮನ ಧನಗಳಿಂದಷ್ಟೇ ಅಲ್ಲದೇ ತಮ್ಮ ಜೀವನವನ್ನೇ ಬಲಿದಾನ ಮಾಡಿದಂತಹ ವ್ಯಕ್ತಿತ್ವಗಳು ಬಾಳಿ ಹೋಗಿವೆ. ಇಂದಿಗೂ ನಮಗೆ ಆದರ್ಶವಾಗಿ ನಿಂತಿವೆ. ಅವರೆಲ್ಲರ ಜೀವನದಿಂದ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸಾಕಷ್ಟು ಪಾಠಗಳನ್ನು ಕಲಿಯಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಶತಶತಮಾನಗಳು ಕಳೆದರೂ ಇವತ್ತಿಗೂ ಅವರು ಹಚ್ಚಿದ ದೀಪ ಉರಿಯುತ್ತಲಿದೆ. ಅವರ ಹೆಸರು ಅಜರಾಮರವಾಗಿವೆ.
ಶಸ್ತ್ರಾಸ್ತ್ರಗಳ ತರಬೇತಿಯಿಲ್ಲದೇ ಕೇವಲ ಒಂದು ಒನಕೆಯಿಂದ ನೂರಾರು ಶತ್ರು ಸೈನ್ಯವನ್ನು ಬಡಿದುರುಳಿಸಿದವಳು ವೀರ ವನಿತೆ ಓಬವ್ವ. ಎದೆಯಲ್ಲಿನ ದೇಶಾಭಿಮಾನದ ಕಿಚ್ಚನ್ನು ಉರಿಸಿ ತನ್ನ ನಾಡನ್ನು ಕಾಪಾಡಿದವಳು ಪರಾಕ್ರಮಿ ಓಬವ್ವ.
ಚಿತ್ರದುರ್ಗ ಪಟ್ಟಣವು ಕರ್ನಾಟಕದಲ್ಲಿದೆ. ಎತ್ತರದ ಬೆಟ್ಟಗಳು ಮತ್ತು ಬಂಡೆಗಳಿಂದ ಸುತ್ತುವರಿದಿರುವ ಸುಂದರ ತಾಣ ಇದಾಗಿದೆ. ಅಲ್ಲೊಂದು ಸುಂದರವಾದ ಕೋಟೆಯು ಕೂಡ ಇದೆ. ಈ ಚಿತ್ರದುರ್ಗದ ಕೋಟೆ ಕಲ್ಲಿನಕೋಟೆ, ಉಕ್ಕಿನ ಕೋಟೆ, ಏಳು ಸುತ್ತಿನ ಕೋಟೆ ಎಂದೆಲ್ಲ ಹೆಸರುವಾಸಿಯಾಗಿದೆ. ಕೋಟೆಗಳಲ್ಲಿ 18 ಪುರಾತನ ದೇವಾಲಯಗಳನ್ನು ಕೂಡ ಕಾಣಬಹುದು. ಕೋಟೆಯು 35 ರಹಸ್ಯ ಪ್ರವೇಶ ದ್ವಾರಗಳನ್ನು ಹೊಂದಿದ್ದಲ್ಲದೇ ನಾಲ್ಕು ಅದೃಶ್ಯ ಪ್ರವೇಶ ದ್ವಾರಗಳು, 50 ಗೋದಾಮುಗಳನ್ನು ಹೊಂದಿದೆ. ಕೋಟೆಯ ಉದ್ದ ಸುಮಾರು ಎಂಟು ಕಿಲೋಮೀಟರ್ ಇದೆ. ಹತ್ತನೆಯ ಶತಮಾನದಲ್ಲಿ ಕೋಟೆಯನ್ನು ಕಟ್ಟಲು ಪ್ರಾರಂಭಿಸಿದ್ದು 18ನೇ ಶತಮಾನದಲ್ಲಿ ಪಾಳೆಗಾರರ ಆಳ್ವಿಕೆಯಲ್ಲಿ ಪೂರ್ಣಗೊಂಡಿತು. ನಾಯಕ ರಾಜವಂಶವು 1550 ರಿಂದ 1800ರ ನಡುವೆ ಸುಮಾರು 250 ವರ್ಷಗಳ ಕಾಲ ಈ ಚಿತ್ರದುರ್ಗವನ್ನು ಆಳಿತು. 1700 ರ ದಶಕದ ಉತ್ತರಾರ್ಧದಲ್ಲಿ ನಗರದ ಮಾಲೀಕತ್ವವು ಎರಡು ಮಹಾನ್ ಶಕ್ತಿಗಳ ನಡುವೆ ಸಮಸ್ಯೆಯಾಯಿತು. ಮೈಸೂರಿನಲ್ಲಿ ಹೈದರಾಲಿಯ ಆಳ್ವಿಕೆ ಇದ್ದರೆ ಚಿತ್ರದುರ್ಗದಲ್ಲಿ ಮದಕರಿ ನಾಯಕನ ಆಳ್ವಿಕೆ ಇತ್ತು. ಹೈದರನಿಗೆ ಚಿತ್ರದುರ್ಗವನ್ನು ವಶಪಡಿಸಿಕೊಳ್ಳಬೇಕೆಂಬ ಇರಾದೆ ಉಂಟಾಯಿತು. ಆದರೆ ಏಳು ಸುತ್ತಿನ ಕೋಟೆಯನ್ನು ಭೇದಿಸಬಹುದಾದರೂ ಹೇಗೆ?, ವಶಪಡಿಸಿ ಕೊಳ್ಳುವುದಾದರೂ ಹೇಗೆ ಎಂಬ ಸಮಸ್ಯೆ ಉಂಟಾಯಿತು. ಅದಕ್ಕಾಗಿ ಹೈದರಾಲಿ ತನ್ನ ಗೂಢಚಾರ ನೊಬ್ಬನನ್ನು ಚಿತ್ರದುರ್ಗಕ್ಕೆ ಕಳುಹಿಸಿದನು. ಆತನು ಅಭೇಧ್ಯವಾದ ಕೋಟೆಯ ರಹಸ್ಯ ಮಾರ್ಗ ಏನಾದರೂ ಇದೆಯೇ ಎಂದು ಹುಡುಕಲು ಆರಂಭಿಸಿದನು. ಆಗ ಮೊಸರು ಗಡಿಗೆ ಹೊತ್ತುಕೊಂಡ ಮಹಿಳೆ ಒಬ್ಬಳು ದುರ್ಗಮ ಗುಡ್ಡ ಪ್ರದೇಶದಲ್ಲಿ ವೇಗವಾಗಿ ನಡೆದು ಬರುತ್ತಾ ಒಮ್ಮೆಲೇ ಕಾಣದಂತಾದಳು. ಅದನ್ನು ಅವಲೋಕಿಸಿದ ಗೂಢಚಾರ ಆಮಾರ್ಗದಲ್ಲಿಯೇ ನಡೆದು ಬರುತ್ತಾ ಒಂದು ಕಳ್ಳ ಗಿಂಡಿಯನ್ನು ಕಂಡನು. ಕಳ್ಳ ಗಿಂಡಿಯು ಕೋಟೆಗೆ ಹೋಗಿ ತಲುಪುತ್ತಿತ್ತು. ಆ ರಹಸ್ಯ ಮಾರ್ಗದ ಕುರಿತು ಹೈದರಾಲಿಗೆ ವಿವರಿಸಿದಾಗ ಹೈದರಾಲಿ ತನ್ನ ಸೈನಿಕರನ್ನು ಕಳುಹಿಸಿದನು.
ಚಿತ್ರದುರ್ಗದ ನಿವಾಸಿ ಕಹಳೆ ಮುದ್ದ ಹನುಮ ಎಂಬವನು ಕಾವಲುಗಾರನಾಗಿದ್ದನು. ಆತನ ಹೆಂಡತಿಯೇ ಓಬವ್ವ. ಆತ ಊಟಕ್ಕೆಂದು ಮನೆಗೆ ಬಂದಾಗ ಮನೆಯಲ್ಲಿ ಕುಡಿಯಲು ನೀರು ಇರಲಿಲ್ಲ. ಕಹಳೆ ಮುದ್ದ ಹನುಮನ ಪತ್ನಿ ಓಬವ್ವ ಪತಿಗೆ ಊಟಕ್ಕೆ ನೀಡಿ ತಾನು ನೀರು ತರಲು ನಡೆದಳು. ಆದರೆ ಅವಳು ಆ ಕಳ್ಳಗಿಂಡಿಯ ಹತ್ತಿರ ಬಂದಾಗ ಒಳಗಿನಿಂದ ಪಿಸು ಮಾತು ಕೇಳಿ ಬಂದಿತು. ತನ್ನ ರಾಜ್ಯಕ್ಕೆ ಬಂದೊದಗಿದ ಸಂಕಟದ ಅರಿವು ಓಬವ್ವಳಿಗಾಯಿತು. ತಕ್ಷಣವೇ ಕಾರ್ಯೋನ್ಮುಖಳಾದ ಓಬವ್ವ ಮನೆಗೆ ದೌಡಾಯಿಸಿ ಬಂದಳು. ತನ್ನ ಪತಿ ಊಟ ಮಾಡುವುದರಲ್ಲಿ ಮಗ್ನನಾಗಿದ್ದನ್ನು ಕಂಡು ಅವನಿಗೆ ತೊಂದರೆ ಆಗದಂತೆ ಸಾವಕಾಶವಾಗಿ ಮನೆಯಲ್ಲಿಯ ಒನಕೆಯೊಂದನ್ನು ತೆಗೆದುಕೊಂಡು ಆ ಕಳ್ಳ ಗಿಂಡಿಯ ಹತ್ತಿರ ಬಂದಳು. ಮತ್ತು ವೀರಗಚ್ಚೆಯನ್ನು ಹಾಕಿ ಸೆರಗನ್ನು ಬಿಗಿದು ಕಟ್ಟಿದಳು. ಅಷ್ಟರಲ್ಲಿ ಹೈದರಾಲಿಯ ಸೈನಿಕ ನೊಬ್ಬನ ಮುಖ ಏದುರಿಸಿರು ಬಿಡುತ್ತಾ ಕಳ್ಳ ಗಿಂಡಿಯಿಂದ ಹೊರಬರುವುದು ಕಂಡಿತು. ತಕ್ಷಣವೇ ದೇವರನ್ನು ಮನದಲ್ಲಿ ನೆನೆದು, ತನ್ನ ಕೈಯಲ್ಲಿಯ ಒನಕೆಯಿಂದ ಆ ವೈರಿ ಸೈನಿಕನ ತಲೆಗೆ ಪೆಟ್ಟು ಹಾಕಿದಳು. ತಕ್ಷಣವೇ ಆ ಪಟ್ಟಿನಿಂದ ಮೃತದೇಹಿಯಾದ ಸೈನಿಕನನ್ನು ಪಕ್ಕಕ್ಕೆ ಎಳೆದು ಹಾಕಿದಳು. ಹೀಗೆ ಅವಿಶ್ರಾಂತವಾಗಿ ಒಂದರ ನಂತರ ಮತ್ತೊಂದು ಎಂಬಂತೆ ನೂರಾರು ವೈರಿ ಸೈನಿಕರನ್ನು ಯಮ ಸದನಕ್ಕೆ ಅಟ್ಟಿದಳು. ಮನೆಯಲ್ಲಿ ಊಟಕ್ಕೆ ಕುಳಿತ ಪತಿ ಕಹಳೆ ಮುದ್ದ ಹನುಮ ಎಷ್ಟೊತ್ತಾದರೂ ತನ್ನ ಪತ್ನಿ ಓಬವ್ವ ನೀರು ತರಲೆಂದು ಹೋದವಳು ಮರಳಿ ಬಾರದಿರಲು ತಾನು ಬೇಗನೇ ತನ್ನ ಕಾಯಕಕ್ಕೆ ವಾಪಸಾದನು. ಅಲ್ಲಿ ಬಂದು ನೋಡಿದಾಗ ಏನಾಶ್ಚರ್ಯ!! ತನ್ನ ಪತ್ನಿ ಓಬವ್ವ ರಣಚಂಡಿ ಆಗಿದ್ದಾಳೆ!! ನೂರಾರು ವೈರಿ ಸೈನಿಕರನ್ನು ಸದೆ ಬಡಿದು ಅವರ ಹೆಣಗಳ ಗುಡ್ಡೆ ಹಾಕಿದ್ದಾಳೆ!! ರಕ್ತದ ಕಾಲುವೆಯೇ ಹರಿದಂತಾಗಿದೆ!! ತಲೆಯಿಂದ ಪಾದದವರೆಗೂ ರಕ್ತ ಸಿಕ್ತಳಾಗಿದ್ದಾಳೆ. ತನ್ನ ಪತಿ ಬಂದದ್ದನ್ನು ಗಮನಿಸದೆ ಆತನೂ ವೈರಿ ಪಡೆಯವ ಇರಬೇಕೆಂದು ಅವನ ಮೇಲೂ ಒನಕೆಯನ್ನು ಎತ್ತಿದಾಗ ಆತ ಓಬವ್ವಳಿಗೆ ಆಕೆಯ ಪತಿ ಇದ್ದೇನೆ ಎಂಬುದನ್ನು ತಿಳಿಸಿ ಹೇಳಿದಾಗ ಸುಮ್ಮನಾದಳು. ಯಾವುದೇ ಯುದ್ಧ ತರಬೇತಿಯಿಲ್ಲದೆ ಕೇವಲ ಕೇವಲ ತನ್ನ ದೇಶಪ್ರೇಮವೇ ಸ್ಥಾಯೀಭಾವವಾಗಿ, ಕಂಡು ವೈರಿ ಸೈನ್ಯವನ್ನು ಬಡಿ ದುರಳಿಸಿದವಳು ಓಬವ್ವ. ಪ್ರಸಂಗ ಬಂದರೆ ಎಂಥ ಕಾರ್ಯಕ್ಕೂ ತಾನು ಸಿದ್ಧಳು ಎಂಬುದನ್ನು ತೋರಿಸಿದ ಶೂರ ಧೀರ ಮಹಿಳೆ ಓಬವ್ವ. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಎತ್ತಿ ತೋರಿಸಿದಾಕೆ ಈಕೆ. ಆಕೆಯ ಪತಿ ಕಹಳೆ ಮುದ್ದ ಹನುಮ ಕಾವಲುಗಾರ ತಕ್ಷಣವೇ ಕಹಳೆ ಯನ್ನು ಊದಿ ಮದಕರಿ ನಾಯಕನ ಸೈನ್ಯಕ್ಕೆ ಮುತ್ತಿಕ್ಕಲು ಬಂದ ವೈರಿ ಸೈನ್ಯ ಪಡೆಯ ಕುರಿತು ಜಾಹೀರುಪಡಿಸಿದ. ತಕ್ಷಣವೇ ಅಸಂಖ್ಯ ಸೈನಿಕರು ಬಂದು ವೈರಿ ಪಡೆಯನ್ನು ಸೋಲಿಸಿ ಕಳಿಸಿದರು. ಆದರೆ ದುರ್ದೈವ ವಶಾತ್ ಒಬ್ಬ ವೈರಿ ಸೈನಿಕನು ಹಿಂದಿನಿಂದ ಬಂದು ಓಬವ್ವಳ ಬೆನ್ನಿಗೆ ಚೂರಿ ಹಾಕಿದನು. ಆಗ ವೀರ ವನಿತೆ ಓಬವ್ವ ಆ ರಕ್ತದ ಮಡುವಿನಲ್ಲಿಯೇ ವೀರ ಗತಿಯನ್ನು ಹೊಂದಿದಳು.
ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಇಂತಹ ಅನೇಕ ವೀರ ವನಿತೆಯರು ದೇಶಾಭಿಮಾನಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಐತಿಹಾಸಿಕ ಪುಟಗಳಲ್ಲಿ ತಮ್ಮದೇ ವ್ಯಕ್ತಿತ್ವದ ಛಾಪನ್ನು ಮೂಡಿಸಿದ್ದಾರೆ. ನಮ್ಮ ಮುಂದಿನ ಪೀಳಿಗೆ ಇಂಥವರ ಕುರಿತು ಅರಿಯಬೇಕಾದದ್ದು ಅವಶ್ಯಕವಾಗಿದೆ. ದೇಶಾಭಿಮಾನದ ಕಿಚ್ಚು ಹಚ್ಚುವ ಇಂತಹ ಪ್ರಕರಣಗಳು ಸಾವಿರಾರು ಇವೆ. ಯಾವುದೇ ಪದವಿಗಾಗಲೀ, ಪಟ್ಟಕ್ಕಾಗಲಿ ಅಪೇಕ್ಷೆ ಪಡದೇ ಕೇವಲ ದೇಶದ ಉನ್ನತಿ, ಸೌಖ್ಯಕ್ಕಾಗಿ ಪ್ರಾಣ ಬಲಿದಾನ ಮಾಡಿದ್ದಾರೆ ಎಂದರೆ ಸುಳ್ಳಲ್ಲ.ಓಬವ್ವಳ ಕಥೆಯನ್ನು ಹಾಡಾಗಿಸಿ, ಕಥೆಯಾಗಿ ಜೀವಂತವಾಗಿಟ್ಟಿರುವಲ್ಲಿ ಜನಪದೀಯರಪಾತ್ರ ಬಹುದೊಡ್ಡದು ಎಂಬುದು ಕೂಡ ಅಷ್ಟೇ ಖರೆ. ಓಬವ್ವ ಜನಮಾನಸದಲ್ಲಿ ಇಂದಿಗೂ ಅಮರಳಾಗಿಹಳು.
- ದೀಪಿಕಾ ಚಾಟೆ
ಬೆಳಗಾವಿ
- * * * -