ನವೆಂಬರ್ 26 ಸರ್ವರಿಗೂ ಸಮಾನತೆ ನೀಡಿದ ದಿನ: ಕುನ್ನೂರ
ಲೋಕದರ್ಶನ ವರದಿ
ಶಿಗ್ಗಾವಿ : ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದೂ ಮರೆಯದ ಹಾಗೂ ಸರ್ವರಿಗೂ ಸಮಾನತೆ ನೀಡಿದ ದಿನವೆಂದರೆ ಅದು ನವೆಂಬರ್ 26ರಂದು ಭಾರತದ ಸಂಸತ್ತಿನಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ಸಂವಿಧಾನವು ಸ್ವಾತಂತ್ರ್ಯ ಭಾರತದ ಆಧುನಿಕ ಧರ್ಮಗ್ರಂಥವಾಗಿದೆ. ದೇಶದ ಜನರನ್ನು ಸಂವಿಧಾನ ಸಶಕ್ತಗೊಳಿಸುತ್ತದೆ. ಜನತೆಯ ಸಹಭಾಗಿತ್ವದೊಂದಿಗೆ ಸಂವಿಧಾನವನ್ನು ಬಲಗೊಳಿಸುವುದು ಹಾಗೂ ರಕ್ಷಿಸುವುದು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಕರ್ತವ್ಯವಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನಲ್ಲಿ ಏರಿ್ಡಸಲಾದ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಸಮಗ್ರತೆಯನ್ನು ಎತ್ತಿಹಿಡಿಯಬೇಕು ಸಂವಿಧಾನದ ಮೇಲಿನ ನಂಬಿಕೆ ಹಾಗೂ ಗೌರವ ಹೊಂದಿರಬೇಕು ಎಂದ ಅವರು ಸಂವಿಧಾನಬದ್ದ ಶಾಸನ ಸಭೆಗಳ ರಚನೆಗೆ ಕೊಡುಗೆ ನೀಡಿದ ಮಹನಿಯರನ್ನು ಸ್ಮರಿಸುವುದು ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಿಗ್ಗಾವಿಯ ಗೌರಮ್ಮ ಅಂಕಲಕೋಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯರಾದ ಡಾ. ಕುಮುದಾ ಅವರು ಸಂವಿಧಾನ ಪರಮೋಚ್ಛವಾದುದು ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು
ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಸಿ. ಹೂಗಾರ, ಮಹೇಶ ಲಕ್ಷ್ಮೇಶ್ವರ, ರುದ್ರಯ್ಯ ಆರ್. ಕೆ., ಅನ್ನಪೂರ್ಣಾ ಅಂಕಲಕೋಟಿ, ಕೆ. ಪಿ. ಪಾಟೀಲ ಪಾಲ್ಗೊಂಡಿದ್ದರು
ಪ್ರಾರಂಭದಲ್ಲಿ ಎಂ. ಎಸ್. ಕುರಂದವಾಡ ಸ್ವಾಗತಿಸಿದರು, ರಾಜ್ಯಶಾಸ್ತ್ರ ಉಪನ್ಯಾಸಕ ಕೆ ಬಸಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಪೀಠಿಕೆಯನ್ನು ಓದಿ ಪ್ರತಿಜ್ಞಾವಿಧಿ ಬೋಧಿಸಿದರು. ಗೀತಾ ಸಾಲ್ಮನಿ ನಿರೂಪಿಸಿದರು ಕೊನೆಯಲ್ಲಿ ಸುಮಿತ್ರಾ ರಾಮಾಪೂರಮಠ ವಂದಿಸಿದರು.