ಬಳ್ಳಾರಿ

ಅಲೆಮಾರಿ ಸಮುದಾಯಗಳು ಅಪಾಯದಲ್ಲಿವೆ: ಶಿವಕುಮಾರ್ ಆತಂಕ

ಅಲೆಮಾರಿ ಸಮುದಾಯಗಳು ಅಪಾಯದಲ್ಲಿವೆ: ಶಿವಕುಮಾರ್ ಆತಂಕ

ಲೋಕದರ್ಶನ ವರದಿ 

ಬಳ್ಳಾರಿ 25: ಸ್ವಾತಂತ್ರ್ಯ ಕಳೆದು 75ವರ್ಷ ಕಳೆದರೂ ಇಂದಿಗೂ ಅಲೆಮಾರಿ ಸಮುದಾಯಗಳ ಕುಟುಂಬಗಳ ತಲೆಗೆ ಸೂರು ಇಲ್ಲ, ಶಿಕ್ಷಣ, ಆರೋಗ್ಯ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು ಅಪಾಯದ ಸ್ಥಿತಿಯನ್ನು ಅನುಭವಿಸುತ್ತಿವೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.  

ಇಲ್ಲಿನ ಗಾಂಧಿ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ ಜನಾಂಗವನ್ನು ಸಂಘಟಿಸಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಅಲೆಮಾರಿ ಜನಾಂಗದವರ ಕುಂದುಕೊರತೆಗಳ ಚರ್ಚೆ ಹಾಗೂ ಪ್ರಗತಿ ಪರೀಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪುರುಷರಷ್ಟೇ ಮಹಿಳೆಯರು ಸಹ ಸಂಘಟಿತರಾಗಬೇಕು. ಸಾಕ್ಷರತೆಯ ಪ್ರಮಾಣದ ಹೆಚ್ಚಳಕ್ಕೆ ಶ್ರಮಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಸದಾಶಯದಂತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಐಕ್ಯತೆ ಕೊರತೆಯಿಂದ ಅಲೆಮಾರಿ ಸಮುದಾಯಗಳು ಸಂಘಟಿತರಾಗುತ್ತಿಲ್ಲ. ಕೆಲವರು ಅಧಿಕಾರದ ಆಸೆಗೆ ಮಾತ್ರ ಸಮಾಜದ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಷಾದದ ಸಂಗತಿ ಎಂದ ಅವರು, ನಿಜವಾದ ಸಮಾಜ ಕಟ್ಟುವಲ್ಲಿ ಮುಂದೆ ಬರುವವರ ಕಾಲೆಳೆಯುವ ಗುಣ ಸರಿಯಲ್ಲ. ಒಕ್ಕಲಿಗರು ಮತ್ತು ವೀರಶೈವರಲ್ಲಿ ಸಾಕಷ್ಟು ಒಗ್ಗಟ್ಟು ಇದೆ. ಅವರು ಕೇಳದೇ ಇದ್ದರೂ ಸರ್ಕಾರಗಳು ನೂರಾರು ಕೋಟಿ ರೂ.ಅನುದಾನ ಬಿಡುಗಡೆ ಮಾಡುತ್ತವೆ. ಅಲೆಮಾರಿ ಸಂಘಟನೆಗಳು ಸರ್ಕಾರಕ್ಕೆ ಅದೆಷ್ಟೇ ಗೋಗರೆದರೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಲೆಮಾರಿ ಸಮಾಜಗಳ ಸಾಧಕ-ಬಾಧಕಗಳ ಕುರಿತು ಮುಂದಿನ ಜನೆವರಿಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆತಿಥ್ಯದಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮ ಆಯೋಜಿಸುವ ಗುರಿ ಇದೆ. ಜನೆವರಿಯಲ್ಲಿ ಬಳ್ಳಾರಿಯಿಂದಲೇ ಕ್ರಾಂತಿ ಮೂಡಿಸಲು ಎಲ್ಲ ಅಲೆಮಾರಿಗಳು ಸನ್ನದ್ಧರಾಗಬೇಕೆಂದು ಕರೆ ನೀಡಿದರು.  

ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಮಾತನಾಡಿ, ಅಲೆಮಾರಿಗಳು ಒಗ್ಗಟ್ಟಾಗಬೇಕು. ಇಲ್ಲಿನ ಕೊಳಚೆ ಪ್ರದೇಶವೊಂದರಲ್ಲಿ ಅಲೆಮಾರಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿತ್ತು. ದಲಿತ ಮುಖಂಡರಾದ ಮುಂಡ್ರಿಗಿ ನಾಗರಾಜ್ ಅವರು ಅಲೆಮಾರಿಗಳ ನೆರವಿಗೆ ನಿಂತು, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಯಾಗಿರುವ ಮುಂಡ್ರಿಗಿ ನಾಗರಾಜ್ ಅವರು ಅಂದು ಮಧ್ಯಸ್ಥಿಕೆ ವಹಿಸದೇ ಇದ್ದಿದ್ದರೆ ಮಹಿಳೆಯರ ಮೇಲೆ ದೌರ್ಜನ್ಯ ಇನ್ನಷ್ಟು ಹೆಚ್ಚಳವಾಗುತ್ತಿತ್ತು ಎಂದರು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಸಂಘಟನೆ ವಿಸ್ತರಣೆಯಾಗಬೇಕು. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಅಲೆಮಾರಿ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬರಬೇಕು  ಎಂದು ಸಲಹೆ ನೀಡಿದರು.  

ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಸೀತಾರಾಮ್ ಮಾತನಾಡಿ, ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಮಹಿಲಾ ಘಟಕಕ್ಕೆ ನನ್ನನ್ನು ಅಧ್ಯಕ್ಷೆಯನ್ನಾಗಿ ನಿಯುಕ್ತಿಗೊಳಿಸಿರುವುದು ಸಂತೋಷವಾಗಿದ್ದರೂ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. ಮಹಾಸಭಾದ ಪದಾಧಿಕಾರಿಗಳು ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುವೆ ಎಂದರು.  

ಶಿಕ್ಷಕ ರಂಗಸ್ವಾಮಿ, ವಕೀಲರಾದ ರಾಮಸ್ವಾಮಿ ಮತ್ತಿತರರು ಮಾತನಾಡಿದರು. ಬಳಿಕ ಮಹಿಳಾ ಘಟಕದ ಪದಾಧಿಕಾರಿಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷೆಯಾಗಿ ಮೋಕಾ ಗ್ರಾಮದ ಚೆನ್ನದಾಸರ ಮುನಿಯಮ್ಮ, ಕಾರ್ಯಾಧ್ಯಕ್ಷೆಯಾಗಿ ಸುಡುಗಾಡುಸಿದ್ಧ ಜನಾಂಗದ ಚಂದ್ರಿಕಾ, ಪ್ರಧಾನ ಕಾರ್ಯದರ್ಶಿಯಾಗಿ ಕೊರಚಕೊರಮ ಸಮುದಾಯದ ಕೆ.ಸುನೀತಾ, ಉಪಾಧ್ಯಕ್ಷರಾಗಿ ಸಿಳ್ಳೆಕ್ಯಾತ ಜನಾಂಗದ ಸಿ.ಜಯಲಕ್ಷ್ಮಿ ಹಾಗೂ ಚೆನ್ನದಾಸರ ಶಿವಗಂಗಮ್ಮ ಮತ್ತು ಖಜಾಂಚಿಯನ್ನಾಗಿ ಬುಡ್ಗ ಜಂಗಮ ಸಮುದಾಯದ ಸುಂಕಮ್ಮ ಅವರನ್ನು ನೂತನವಾಗಿ ಆಯ್ಕೆ ಮಾಡಲಾಯಿತು.  

ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಮಣಪ್ಪ ಭಜಂತ್ರಿ, ಜಿಲ್ಲಾ ಪದಾಧಿಕಾರಿಗಳಾದ ಮಹೇಶ್ ಕುಮಾರ್, ಮೋಕಾ ರಾಮಣ್ಣ, ರಂಗಯ್ಯ ಸಿಡಿಗಿನಮೊಳ, ದುರ್ಗಾವಾಹಿನಿ, ಸಿದ್ಧಯ್ಯ ತೆಕ್ಕಲಕೋಟೆ, ಸಿಂಧಿಗೇರಿ ಎರಿಸ್ವಾಮಿ ಮತ್ತು ಚಂದ್ರಹಾಸ ಇನ್ನಿತರರು ಇದ್ದರು.  

ಸಭೆಯಲ್ಲಿ ಅಲೆಮಾರಿ ಸಮುದಾಯದ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಮೋಕಾ ಮತ್ತು ಸಂಡೂರು ತಾಲೂಕಿನ ನೂರಾರು ಜನರು ಭಾಗವಹಿದ್ದರು. 


ಸುದ್ದಿ ಓದಿ