ಬಳ್ಳಾರಿ

ಮಾನವಕುಲದ ನಾಶವನ್ನು ಯಾರು ತಡೆಯಲಾರರು: ಗೋವಿಂದಚಾರ್ಯ

ಮಾನವಕುಲದ ನಾಶವನ್ನು ಯಾರು ತಡೆಯಲಾರರು: ಗೋವಿಂದಚಾರ್ಯ

ಬಳ್ಳಾರಿ 27: ಕಳೆದ ಐದು ನೂರು ವರ್ಷಗಳಿಂದ ನಮ್ಮ ದೇಶದಲ್ಲಾದ ಅಭಿವೃದ್ಧಿಯು ಸಂಪೂರ್ಣವಾಗಿ ಮಾನವಕೇಂದ್ರಿತವಾದ್ದರಿಂದ ತಿರುಪತಿ, ಕೇದಾರನಾಥದಲ್ಲಾದಂತಹ ಅವಘಡಗಳು ಸಂಭವಿಸುತ್ತವೆ, ಈಗಲಾದರೂ ಸಮಾಜ ಎಚ್ಚೆತ್ತು ಪ್ರಕೃತಿ ಕೇಂದ್ರಿತ ವಿಕಾಸಕ್ಕೆ ಒತ್ತುಕೊಡದಿದ್ದರೆ ಮಾನವಕುಲದ ನಾಶವನ್ನು ಯಾರು ತಡೆಯಲಾರರು ಎಂದು ದೇಶದ ಹಿರಿಯ ಚಿಂತಕ ಕೆ.ಎನ್‌.ಗೋವಿಂದಚಾರ್ಯರು ನುಡಿದರು. ಅವರು ನಿನ್ನೆ ಸಂಜೆ ರಂಗತೋರಣ, ವಿವೇಕ ತೋರಣ, ವಿಕಾಸ ಅಕಾಡೆಮಿಗಳು ಸಂಯುಕ್ತವಾಗಿ ನಗರದ ರಾಘವ ಕಲಾಮಂದಿರದಲ್ಲಿ ಆಯೋಜಿಸಿದ್ದ ವಿವೇಕ ಮಂಟಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 

ಜನರು ರಾಜಕೀಯ ಅಧಿಕಾರ ಮತ್ತು ಶ್ರೀಮಂತಿಕೆಗೆ ಗೌರವಕೊಡುವುದನ್ನು ಬಿಟ್ಟು ಪರಿಶ್ರಮ, ಪ್ರಾಮಾಣಿಕತೆಗೆ ಗೌರವ ಕೊಡಲಾರಂಭಿಸುವರೋ ಆಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಜನರು ಸರ್ಕಾರವನ್ನು ಮಾತ್ರ ಅವಲಂಭಿಸದೆ ಸಮಾಜದ ಅಂತಃ ಶಕ್ತಿಯನ್ನು ಗುರುತಿಸಿ ಕಾರ್ಯ ಪ್ರವೃತ್ತರಾದಾಗ ಮಾತ್ರ ನಿಜವಾದ ಬದಲಾವಣೆ ಮತ್ತು ವಿಕಾಸ ಸಾಧ್ಯ ಎಂದರು. 

ನಗರದ ಹಿರಿಯ ದಂತ ವೈದ್ಯ ಡಾ.ವೈ. ಶೇಷಗಿರಿರಾವ್ ಅಧ್ಯಕ್ಷತೆವಹಿಸಿ ಮಾತನಾಡಿದರು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿದರು. ವಿವೇಕ ತೋರಣದ ಕಾರ್ಯದರ್ಶಿ ಡಾ. ಕೃಷ್ಣ ರವರು ವಂದಿಸಿದರು. ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಅಡವಿಸ್ವಾಮಿ ನಿರೂಪಿಸಿದರು. ಆರಂಭದಲ್ಲಿ ಜಡೇಶ ಮತ್ತು ತಂಡದವರು ಜಾನಪದ ಗೀತಗಾಯನವನ್ನು ಪ್ರಸ್ತುತಪಡಿಸಿದರು. 


ಸುದ್ದಿ ಓದಿ