ಬಾಲಿವುಡ್ ನಟಿ ಕಂಗನಾ ವಿರುದ್ಧ ಜಾಮೀನುರಹಿತ ವಾರೆಂಟ್
ಮುಂಬೈ, ಮಾ.1: ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಮತ್ತೊಂದು ಕಂಟಕ ಎದುರಾಗಿದೆ.
ರಾಣಾವತ್ ವಿರುದ್ಧ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈಯ ಅಂಧೇರಿ ಮೆಟ್ರೋಪಾಲಿಟನ್ ಮಾಜಿಸ್ಟ್ರೇಟ್ ನ್ಯಾಯಾಲಯವೊಂದು ಸೋಮವಾರ ನಟಿ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ವಾರೆಂಟ್ ಹೊರಡಿಸಲಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಳಿಕ ರಿಪಬ್ಲಿಕ್ ಟಿವಿಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ನಟಿ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ನವೆಂಬರ್ ತಿಂಗಳಲ್ಲಿ ಅಖ್ತರ್ ಅವರು ವಕೀಲ ಜೈ ಭಾರದ್ವಾಜ್ ಮೂಲಕ ಭಾರತೀಯ ದಂಡ ಸಂಹಿತೆ 499 ಮತ್ತು 500 ಸೆಕ್ಷನ್ ಗಳಡಿ ಖಾಸಗಿ ದೂರು ದಾಖಲಿಸಿದ್ದರು.
ಸೋಮವಾರ ಅಖ್ತರ್ ಪರ ವಕೀಲರಾದ ವೃಂದಾ ಗ್ರೋವರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬುದು ತಿಳಿದಿದ್ದರೂ ನಟಿ ಇಂದು ಹಾಜರಾಗಿಲ್ಲ. ಮಾತ್ರವಲ್ಲ ಈ ಸಂಬಂಧ ಯಾವುದೇ ಅರ್ಜಿಯನ್ನೂ ಹಾಕಿಲ್ಲ ಎಂದು ವೃಂದಾ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ ನಟಿ ಪರ ವಕೀಲ ಇದನ್ನು ತಳ್ಳಿ ಹಾಕಿ, ತಮ್ಮ ಕಕ್ಷಿದಾರರು ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ವಾದ –ವಿವಾದ ಆಲಿಸಿದ ಬಳಿಕ ನ್ಯಾಯಾಧೀಶ ಆರ್.ಆರ್. ಖಾನ್ ಅವರು ನಟಿ ಕಂಗಾನಾ ವಿರುದ್ಧ ಜಾಮೀನುರಹಿತ ವಾರಂಟ್ ನ ಆದೇಶ ಹೊರಡಿಸಿದರು.