ಲೇಖನಗಳು

ದಿಟ್ಟನಡೆ ನುಡಿಯ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರು

ದಿಟ್ಟನಡೆ ನುಡಿಯ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರು

ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ, ತನ್ನ ದಿಟ್ಟ ನಡೆ, ನುಡಿಯಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಅಪರೂಪದ ಶರಣ ಶ್ರೀ ಅಂಬಿಗರ ಚೌಡಯ್ಯನವರು, ನಿಷ್ಠುರ ವಚನಗಳ ಮೂಲಕ ಶಿವಶರಣದಿಂದಲೇ “ವೀರಗಣಾಚಾರಿ ಎಂದು ಕರೆಯಿಸಿಕೊಂಡವರು, ಅವರು.  

ಅಂಬಿಗರ ಚೌಡಯ್ಯನವರು “ಅಂಬಿಗ, ಅಂಬಿಗ ಎಂದು ಕುಂದು ನುಡಿಯದಿರು, ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೆಯ ಹಾಯಿಸುವನೆಂಬ ಅಂಬಿಗರ ಚೌಡಯ್ಯ” ಎಂಬಂಥ ದಿಟ್ಟ ವಚನ ರಚಿಸಿ ತಾನು ಹುಟ್ಟಿದ ಜಾತಿಯ ಬಗ್ಗೆ ಆತ್ಮ ವಿಶ್ವಾಸ ಮೂಡಿಸಿದ ಈ ನಿಜಶರಣ ತನ್ನ ಕುರಿತು ಆತ್ಮ ವಿಶ್ವಾಸ ಹೊಂದಿದ ಧೀರ ವಚನಕಾರ, ಅಂಕಿತ ನಾಮವನ್ನಾಗಿ ತನ್ನ ವಚನಗಳಿಗೆ ತನ್ನ ಹೆಸರನ್ನೇ ಬಳಸಿದ ಏಕೈಕ ಶರಣ ಎನ್ನಬಹುದು. ತಾನು ಕಂಡ ಅನುಭವಗಳನ್ನು ವಚನಗಳ ಮೂಲಕ ಹೇಳಿ ಸಮಾಜದಲ್ಲಿರುವ ಮೂಡನಂಬಿಕೆ, ಕಂದಾಚಾರ, ಅಂಧ ಶ್ರದ್ಧೆಯನ್ನು ಹೋಗಲಾಡಿಸಲು ಶಮವಹಿಸಿದವರು. ಇವರ ವಚನಗಳ ಭಾಷೆ ಸರಳವಾಗಿದ್ದು ಜನಸಾಮಾನ್ಯರು ಅರಿಯಲು ಸಹಾಯಕವಾಗಿವೆ. ಅವುಗಳ ಕುರಿತು ಇಂದಿನ ಸಮಾಜದಲ್ಲಿ ಅರಿಯುವ ಪ್ರಯತ್ನ ಮಾಡಬೇಕಾಗಿದೆ. ಜನಸಾಮಾನ್ಯರಿಗೆ ತಲುಪಬೇಕಾಗಿವೆ. 

ಶರಣರು ತಮ್ಮ ಕಾಯಕವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಹೇಳಿರುವಂತೆ ಅಂಬಿಗರ ಚೌಡಯ್ಯನವರು ತಾವು ಮಾಡಿರುವ ಕಾಯಕವನ್ನು ಅಭಿಮಾನದಿಂದ ಹೇಳಿರುವರು, ಇತಿಹಾಸಕಾರರು ಅಭಿಪ್ರಾಯಪಡುವಂತೆ ಅಂಬಿಗರ ಚೌಡಯ್ಯ ಅಪರೂಪದ ಅಂಬಿಗ, ಅನುಭಾವಿ, ಅಂಬಿಗ, ತಡೆ ನೆಲೆಯಿಲ್ಲದ ಮಹಾನದಿಯ ಒಡಲಿಲ್ಲದ ಅಂಬಿಗ, ಹಿಡಿದು ಬಿಡುವ ಮನವ ಬೆಲೆಗೊಟ್ಟೊಡೆ ಮಹಾ ಹೊಳೆಯ ಕಡೆಗಾಣಿಸಿ ಹಾಯಿಸುವ ಅಂಬಿಗ, ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿರಿಸುವ ಅಂಬಿಗ, ಆತ್ಮವಿಶ್ವಾಸದ ಅಂಬಿಗ, ಅಂಬಿಗರ ಚೌಡಯ್ಯನಲ್ಲಿ ಅಪ್ರತಿಮ ಜ್ಞಾನ, ತರ್ಕಶಕ್ತಿ, ಆಧ್ಯಾತ್ಮ ಶಕ್ತಿಯು ಇತ್ತು.  

ಅಂಬಿಗರ ಚೌಡಯ್ಯನವರ ಜನನ, ತಂದೆತಾಯಿಗಳಹಾಗೂ ಆತ ಬಾಲ್ಯ ಸ್ಥಳಗಳ ಕುರಿತು ಇತಿಹಾಸಕಾರರಲ್ಲಿ ಒಮ್ಮತ ಮೂಡಿ ಬಂದಿಲ್ಲ. ಉಪಲಬ್ಧ ಸಾಹಿತ್ಯದ ಪ್ರಕಾರ ತಿಳಿಯುವ ಪ್ರಯತ್ನ ಮಾಡಬಹುದು. ಶರಣ ಧರ್ಮವನ್ನು ಎತ್ತಿ ಹಿಡಿದಿರುವ ಇವರ ಬಗ್ಗೆ ಅಂದಿನ ಸಾಹಿತ್ಯಕಾರರು, ಇತಿಹಾಸಕಾರರು ಮೌನವಾಗಿರುವದು ಆಶ್ಚರ್ಯಕರವಾದ ಸಂಗತಿಯಾಗಿದೆ.  

ಆದರೆ ಗುರುರಾಜ ಚಾರಿತ್ರ್ಯದ ಬಸವಾದಿ ಶಿವಶರಣರ ಪ್ರಮಥರಲ್ಲಿ ಇವರ ಹೆಸರಿದೆ. ಮಹಾ ಕವಿ ಷಡಕ್ಷರಿಯ ವೃಷಬೇಂದ್ರ ವಿಜಯದಲ್ಲಿ, ರಸ-ಋಷಿಮುಪ್ಪಿನ ಷಡಕ್ಷರಿ ಸೇರಿದಂತೆ  ಮೊದಲಾದವರ ತತ್ವ ಪದಗಳಲ್ಲಿ ಇವರ ಹೆಸರು ಬಂದಿದೆ. ಘನಲಿಂಗದೇವನ (ಸು-1480) ವಚನದಲ್ಲಿ ಹಾಗೂ ಮಹಾಲಿಂಗ ವಿರಚಿತ ಗುರುಭೋದಾಮೃತ ಗ್ರಂಥದಲ್ಲಿಯೂ ಅಂಬಿಗರ ಚೌಡಯ್ಯನವರ ಬಗ್ಗೆ ಉಲ್ಲೇಖವಿದೆ. ಕರ್ನಾಟಕ ಕವಿ ಚರಿತ್ರೆಕಾರರು ಅಂಬಿಗರ ಚೌಡಯ್ಯನವರ ಕಾಲ ಸುಮಾರು 1160 ಎಂದು ಹೇಳಿರುವರು. ಹೀಗಾಗಿ ಇಂದಿಗೆ 858 ನೇಯ ಜಯಂತಿ ಎಂದು ಪರಿಗಣಿಸಬಹುದಾಗಿದೆ. ಇವರ 297 ವಚನಗಳು ದೊರಕಿವೆ. ಅವುಗಳೆಲ್ಲ ಸಮಾಜ ಚಿಂತನೆಯಿಂದ ಮೂಡಿಬಂದಿವೆ. ಇವರ ವಚನಗಳನ್ನು ಗಮನಿಸಿದರೆ ಅವರೊಬ್ಬ ಬಂಡಾಯದ ಶರಣ ಎಂದೆನಿಸುವರು. ಅವರ ವಚನಗಳಲ್ಲಿ ಸದಾ ಸಮಾಜದ ಚಿಂತನೆ, ಒಳಿತು ಕಾಣಬಹುದು.  

12ನೇ ಶತಮಾನ ಬಸವಾದಿ ಶಿವಶರಣರ ಕ್ರಾಂತಿಗೆ ಹೆಸರಾದದ್ದು. ಸಕಲ ಜೀವ ರಾಶಿಗಳಿಗೆ ಲೇಸನ್ನೆ ಬಯಸಿದ ಶರಣರಿಗೆ “ಅನುಭವ ಮಂಟಪ” ಆಧ್ಯಾತ್ಮಿಕ ಸಾಧನೆಗೆ ದಾರೀದೀಪವಾಯಿತು. ಸರ್ವ ಶರಣ-ಶರಣಿಯರಿಗೆ ಅನುಭವ ಚಿಂತನೆ ಮಾಡಲು ವೇದಿಕೆಯಾಯಿತು. ಜಾತಿ-ಧರ್ಮ, ವರ್ಣರಹಿತ, ಯಾವುದೆ ಬೇದ ಭಾವವಿಲ್ಲದ ಆದರ್ಶ ಚಿಂತನೆ ಸಮಾಜ ನಿರ್ಮಾಣಕ್ಕೆ ಅಂದು ಸಂಕಲ್ಪ ಮಾಡಲಾಗಿತ್ತು. ವಿಶ್ವ ವ್ಯಾಪ್ತಿಯಲ್ಲಿ ಅನ್ವಯವಾಗುವ ಕಾಯಕವೇ ಕೈಲಾಸ ಎಂಬ ನೀತಿ ಹೊರಹೊಮ್ಮಿತು. ಅಂದು ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿತ್ತು. ಜಾತಿ ವ್ಯವಸ್ಥೆ, ಸಾಮಾಜಿಕ ಮೂಢನಂಬಿಕೆಗಳ ವಿರೋಧಿಸಿ ಹೋರಾಡಲು ಪ್ರೇರೆಪಿಸಿತು. ಅಂದಿನ ಶರಣ ಸಮೂಹ ಕಾಯಕದಲ್ಲಿ ಬೇದ ಭಾವವೆನಿಸದೆ ಉದಾತ್ತ ಮಾರ್ಗದರ್ಶಿ ಜೀವನ ನಡೆಸಿತು. ವಿವಿಧ ಕಾಯಕದಲ್ಲಿ ನಿರತರಾಗಿರುವ ಶರಣರು ವಚನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಅವರಲ್ಲಿ ಅಂಬಿಗ ಕೆಲಸ ನಿರ್ವಹಿಸಿರುವ ಶರಣ ಶ್ರೀ ಅಂಬಿಗರ ಚೌಡಯ್ಯನವರು ಓರ್ವರು. ಅನುಭವ ಮಂಟಪದಲ್ಲಿ ಶರಣ ಸಮೂಹಕ್ಕೆಲ್ಲ ಸರಿ ಸಮಾನ ಸ್ಥಾನ ದೊರೆಯಿತು. ಇತಿಹಾಸಕಾರರು ಅಭಿಪ್ರಾಯ ಹೊಂದಿರುವಂತೆ ಶ್ರೀ ಅಂಬಿಗರ ಚೌಡಯ್ಯನವರು ಶರಣ ಸಾಹಿತ್ಯದಲ್ಲಿ ಮೆರೆಯುವ ಧೀಮಂತ ವ್ಯಕ್ತಿ, ಬಸವಣ್ಣವರ ಸಮಕಾಲಿನವರೆಂದು ಪರಂಪರೆಯ ನಂಬುಗೆ ಇದೆ ಆದರೂ 13 ನೇಯ ಶತಮಾನದ ಶಿವದೇವ ಒಡೆಯರರ ಶಿಷ್ಯರೆಂದು ಕೆಲವರು ಅಭಿಪ್ರಾಯ ಪಡುವರು. ದೊರಕಿರುವ ಕೆಲ ಶಾಸನಗಳು ಇವಕ್ಕೆ ಆಧಾರವಾಗಿವೆ. ಅಂಬಿಗರ ಚೌಡಯ್ಯನವರು ತಮ್ಮ ಗುರು ಶಿವದೇವ ಒಡೆಯರರಿಗೆ ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡ ದಾನಾಪೂರವನ್ನು ದಾನವನ್ನಾಗಿ ನೀಡಿದರಂತೆ. ಅಂದು ಆ ಗ್ರಾಮ ಶಿವಪುರ (ಚಂದಾಪೂರ-ನರಶಿಪುರ)ವಾಗಿತ್ತು. ಅದು ಅಂಬಿಗರ ಚೌಡಯ್ಯನವರ ಜನ್ಮ ಸ್ಥಳವಾಗಿದೆ. ದಾನ ನೀಡಿದ ಕಾರಣಕ್ಕಾಗಿ ಚೌಡ ದಾನಾಪೂರವಾಗಿದೆ. ಅಂಬಿಗರ ಚೌಡಯ್ಯನವರು ಶಿವದೇವರಂತ ಮಹಾನ್ ತಪಸ್ವಿಗಳು ಸಿದ್ಧಿ ಪಡೆದ ಸಿದ್ಧಪುರುಷರು, ಲಿಂಗಪೂಜಾ ನಿಷ್ಠರಾದ ಅವರಿಗೆ ಶಿಷ್ಯರಾಗಿ ಅಪಾರವಾದ ತತ್ವಜ್ಞಾನ ಹೊಂದಿದ್ದರು. ಅನುಭಾವಿಯಾದರು ಆಚಾರ-ವಿಚಾರಗಳ ಸುಂದರ ಸಮನ್ವಯದಿಂದಾಗಿ ಅನುಭವ ಮಂಟಪದ ಇತರ ಶಿವಶರಣರಂತೆ ಕಲ್ಯಾಣದಲ್ಲಿ ಕೆಲ ಸಮಯ ಕಳೆದಿರಬಹುದು. ಕೊನಗೆ ಸಂಚಾರ ಮಾಡುತ್ತಾ ಬಂದು ಚೌಡಯ್ಯ ದಾನಾಪೂರದಲ್ಲಿಯೇ ಲಿಂಗೈಕ್ಯರಾಗಿರುವರು. ಅವರ ಸ್ಮಾರಕವಾಗಿ ನದಿಯಲ್ಲಿ ಮುಳುಗಿದ ದಿಬ್ಬವಿದೆ. ಸುಂದರವಾದ ಸ್ಮಾರಕವಿದೆ. ಪ್ರತಿವರ್ಷ ಮಕರ ಸಂಕ್ರಮಣದ ದಿನ ಜಾತ್ರೆ ಜರಗುತ್ತದೆ. (ಜನೇವರಿ-15) ಅಂಬಿಗರ ಚೌಡಯ್ಯನವರಲ್ಲದೆ ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲಿ ಮುಸುಟಿಯ ಚೌಡಯ್ಯ, ಬಹುರೂಪಿ ಚೌಡಯ್ಯ, ಸುರಗಿಯ ಚೌಡಯ್ಯ ಎಂಬ ಹೆಸರಿನ ಶರಣರು ಆಗಿ ಹೋಗಿರುವರು. ಇವರಲ್ಲಿ ಬಹುರೂಪಿ ಚೌಡಯ್ಯನು ವಚನಗಳನ್ನು ರಚಿಸಿರುವರು. ಶಂಕರ ಲಿಂಗವೆಂಬ ಕವಿಯು ಇವರ ಬಗ್ಗೆ ರಗಳೆಯನ್ನು ಬರೆದಿರುವರು. ಸುರಗಿಯ ಚೌಡಯ್ಯ, ಮುಸುಡಿಯ ಚೌಡಯ್ಯನವರ ಬಗೆಗೆ ಮಹಾಕವಿ ಹರಿಹರನು ರಗಳೆಗಳನ್ನು ಬರೆದಿರುವರು. ಸುರಗಿಯ ಚೌಡಯ್ಯ ಲೀಲಾಮೂರ್ತಿಯಾಗಿದ್ದು ಸತ್ತ ಎತ್ತನ್ನು ಹುಗಿದ 15 ವರ್ಷಗಳ ತರುವಾಯ ಬದುಕಿಸಿದ ಮಹಾಮಹಿಮನು ಕಲ್ಲು ಎತ್ತಿಗೆ ಕಬ್ಬು ತಿನಿಸಿದ ಪವಾಡ ಪುರುಷವೆಂದು ತಿಳಿದು ಬರುತ್ತದೆ. ಆದರೆ ಅಂಬಿಗರ ಚೌಡಯ್ಯನವರು ಇವರಿಗಿಂತ ಬೇರೆಯವರು.  

ಇವರು ವೈಚಾರಿಕ ಪ್ರಜ್ಞೆಯ ಜಿಜ್ಞಾಸು, ಸ್ವತಂತ್ರ ಮನೋಭಾವ, ಮನೋಧರ್ಮ ಬೆಳೆಯಿಸಿಕೊಂಡವರು. ಇವರ ವಚನಗಳ ವೈಶಿಷ್ಠವೇ ಬೇರೆಯಾಗಿವೆ. ಅವರ ವಚನಗಳು ದಿಟ್ಟ ವ್ಯಕ್ತಿತ್ವ ಹೊಂದಿವೆ. ತನ್ನ ಸುತ್ತ ಮುತ್ತಲಿನ ಸಮಾಜ ಕ್ರಿಯಾಶೀಲವಾಗಬೇಕು, ಸುಧಾರಣೆಯಾಗಬೇಕು. ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ವಂಚನೆ, ಮೋಸ, ಶೋಷಣೆ, ಅಜ್ಞಾನ, ಮೂಢನಂಬಿಕೆ, ಅರ್ಥವಿಲ್ಲದ ಆಚರಣೆಗಳು ನಿಲ್ಲಬೇಕೆಂಬ ಆಸೆಯ ಹೊಂದಿವೆ. ತನ್ನಂತೆ ಇತರರು ಈ ವ್ಯವಸ್ಥೆಯ ವಿರುದ್ಧ ಬಂಡಾಯ ಮಾಡುವದನ್ನು ನೀರೀಕ್ಷಿಸುತ್ತಾರೆ ಅದು ಆಗದಿದ್ದಾಗ ಸಿಡಿದೇಳುವರು. ಕೆರಳಿ ಮಾತಿನಲ್ಲಿ ಬೆಂಕಿಯ ಉಂಡಿಯನ್ನೇ ಉಗುಳುವರು.ಉದಾಹರಣೆಯಾಗಿ ಅವರ ವಚನದ ಬಂಡಾಯದ ಮಾದರಿಯನ್ನು ಇಲ್ಲಿ ಕಾಣಬಹುದು. 

ಕುಲ ಹೀನ ಶಿಷ್ಯಂಗೆ ಅನುಗ್ರಹ ಮಾಡಿ,  

ತಿರುಗಿ ಅವನ ಮನೆಯಲ್ಲಿ ಉಣಬಾರದೆಂದು- 

ಅಕ್ಕಿ-ಕಣಕವ ತಕ್ಕೊಂಡು ಹೋಗುವ ಗುರುವಿನ ಕಂಡರೆ  

ಕೆಡವಿ ಹಾಕಿ ಮೂಗನೇ ಕೊಯ್ದು ಇಟ್ಟಂಗಿಯ ಕಲ್ಲಿಲೆತ್ತಿಕ್ಕಿ   

ಸಾಸಿವೆ ಹಿಟ್ಟನು ತಳಿದು ಮೇಲೆ ಲಿಂಬೆಯ ಹುಳಿ ಹಿಂಡಿ  

ಪಡವಲಗಾಳಿಗೆ ಹಿಡಿ ಎಂದಾತ ನಮ್ಮ-ಅಂಬಿಗರ ಚೌಡಯ್ಯ.  

ಭಕ್ತ ಭಕ್ತರಲ್ಲಿ ಬೇದಭಾವವೆನಿಸಬಾರದು. ಭಕ್ತರೆಲ್ಲರೂ ಒಂದೇ ಅವರು ಯಾವುದೇ ಜಾತಿಯವರು ಯಾವುದೇ ಪಂಥದವರಿದ್ದರೂ ಒಂದೇ ಎಂದೇ ತಿಳಿಯಬೇಕು ಆದರೆ ಅದು ಬಿಟ್ಟು ಕುಲಹೀನನಾಗಿರುವಂಥ ಶಿಷ್ಯನಿಗೆ ಅನುಗ್ರಹಿಸಿ ಅವನಲ್ಲಿಯ ಹೀನತೆಯನ್ನು ಹೋಗಲಾಡಿಸಿದ ಬಳಿಕ ಅವನ ಮನೆಯೊಳಗೆ ಅಂದರೆ ಅನುಗ್ರಹ ಪಡೆದ ಕುಲಹೀನ ಶಿಷ್ಯನ ಮನೆಯಲ್ಲಿ, ಆತನಿಗೆ ಅನುಗ್ರಹ ನೀಡಿದ ಗುರುವೇ ಊಟ ಮಾಡಲು ಮನಸ್ಸು ಮಾಡದೆ ಆಹಾರ ಧಾನ್ಯಗಳನ್ನು ಮನೆಗೆ ತೆಗೆದುಕೊಂಡು ಹೋಗುವಂಥವನು ನಿಜವಾದ ಗುರುವಾಗಲಾರ ಅವನೊಬ್ಬ ಕಳ್ಳ ದರೋಡೆಕೋರನೆನಿಸಿಕೊಳ್ಳವನು. ಅಂಥವನನ್ನು ನೆಲಕ್ಕೆ ಹಾಕಿ ಕೆಡವಿ ಆತನ ಮೂಗನ್ನು ಕೊಯ್ದು ಆ ಕೊಯ್ದ ಗಾಯದ ಮೇಲೆ ಇಟ್ಟಂಗಿಯನ್ನು ಬಲವಾಗಿ ತಿಕ್ಕಿ ಅದರ ಮೇಲೆ ಸಾಸಿವೆಯ ಹಿಟ್ಟು ಉದುರಿಸಿ, ಅದರ ಮೇಲೆ ನಿಂಬೆ ಹಣ್ಣಿನ ಹುಳಿಯನ್ನು ಹಿಂಡಿ ಪಶ್ಚಿಮ ದಿಕ್ಕಿನ ಗಾಳಿಗೆ ಮುಖಮಾಡಿನಿಲ್ಲಿಸಬೇಕು.ಶಿಷ್ಯ ಶಿಷ್ಯರಲ್ಲಿ ಬೇದ ಭಾವ ಎನಿಸಿದ ಗುರುವನ್ನು ಕ್ರೂರವಾಗಿ ಶಿಕ್ಷಿಸಬೇಕೆಂದು ಅಂಬಿಗರ ಚೌಡಯ್ಯನವರ ದಿಟ್ಟ ನುಡಿ, ಪೂಜೆ ಪುನಸ್ಕಾರ ವಿಷಯದಲ್ಲಿ ಶಿಷ್ಯರನ್ನು ಶೋಷಿಸುವ ಗುರುವನ್ನು ಖಂಡಿಸಿದ ವಚನ ಇದು. ಈ ವಚನದಲ್ಲಿ ವ್ಯವಸ್ಥೆಯ ವಿರುದ್ಧ ಚೌಡಯ್ಯನವರ ಆಕ್ರೋಶವನ್ನು ಗಮನಿಸಬಹುದು ಇಂಥಹ ಹಲವು ವಚನಗಳಲ್ಲಿ ಆತನ ಆಕ್ರೋಶವನ್ನು ಅರಿಯಬಹುದಾಗಿದೆ.    

ಅಂಬಿಗರ ಚೌಡಯ್ಯನವರ ವಚನಗಳ ಮೂಲಕ ಅವರ ವ್ಯಕ್ತಿತ್ವ ಹೇಳಬೇಕೆಂದರೆ ಅವರೊಬ್ಬ ಕಟ್ಟಾ ಶಿವಭಕ್ತ, ನಿಷ್ಟುರುವಾದಿ ಆದರೂ ಗುಡಿ-ಗುಂಡಾರಗಳಲ್ಲಿ, ತೀರ್ಥ ಕ್ಷೇತ್ರಗಳಲ್ಲಿ ಏನಾದರೂ ಸರಿ ದೇಹ ದಂಡಿಸಿಯಾದರೂ ದೇವರನ್ನು ಕಾಣುತ್ತೇವೆಂಬುವವರಿಗೆ ನೀವು ನಿಮ್ಮ ಅಂತರಾತ್ಮ ಒಳಹೊಕ್ಕು ನೋಡಿರೆನ್ನುವರು.  

ಪರಶಿವನ ಅಂಶ ಪ್ರತಿಯೊಬ್ಬರಲ್ಲಿಯೂ ಇದ್ದರೂ ಅದನ್ನು ತಿಳಿಯದೇ ಬೇರೆ ಬೇರೆ ಕಡೆ ಹುಡುಕುವರನ್ನು ಜಾಗೃತಗೊಳಿಸಿ ನಿನ್ನಲ್ಲಿಯೇ ದೇವರನ್ನು ಕಾಣು ಎಂದು ಜಾಗೃತಗೊಳಿಸುವರು. ಅವರು ವಚನದಲ್ಲಿ ಬಳಸಿದ ಭಾಷೆ ಒರಟುತನವನ್ನು ಹೊಂದಿದ್ದರೂ “ಚಿಂತನೆಯ ಅಂಶಗಳಿವೆ” ಇವರಷ್ಟು ನಿಷ್ಠುರ ಕಠೋರವಾಗಿ, ವ್ಯಂಗವಾಗಿ, ವ್ಯಗ್ರವಾಗಿ ಟೀಕಿಸಿದ ಶರಣರು ಇಲ್ಲವೇ ಇಲ್ಲ ಎನ್ನಬಹುದು ಜನ ಜೀವನದಿಂದ ಬಂದ ಸುಂದರ ದೃಷ್ಟಾಂತಗಳಿಗೆ ಹೇಳಿರುವ ವಿಷಯದ ವಚನಗಳು ಅರ್ಥಪೂರ್ಣವಾಗಿವೆ. ಸಾಮಾಜಿಕ ಕಳಕಳಿ, ಬೆಳಕು ಬೀರುವ ಸಾಮರ್ಥ್ಯವನ್ನು ಹೊಂದಿವೆ. ನುಡಿದಂತೆ ನಡೆ ಇದೇ ಜನ್ಮ ಕಡೆ ಎಂಬ ನೀತಿಗೆ ನಿದರ್ಶನಗಳಾಗಿವೆ. ಅವರ ವಚನಗಳಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಆಡಂಬರ ಜೀವನದ ಆಲಸಿಗಳನ್ನು ಬಡೆದೆಬ್ಬಿಸಿವೆ. ದಿಟ್ಟ-ಗಟ್ಟಿ ನುಡಿಯಲಿವೆ. ಮಾನವನಿಗೆ ಮಹಾಮಾನವನಾಗುವ ನಿಟ್ಟಿನಲ್ಲಿ ದಾರಿ ತೋರುವ ದಾರೀದೀಪಗಳಾಗಿವೆ. ಹೀಗಾಗಿ ಅಂಬಿಗರ ಚೌಡಯ್ಯನವರ ವಚನಗಳು ವಚನ ಸಾಹಿತ್ಯದಲ್ಲಿ ಮಹತ್ವದ ಸ್ಥಾನಪಡೆದಿವೆ. ಇಂದಿಗೂ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿವೆ. ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ಪ್ರಸ್ತುತವಾಗಿವೆ. ನಾಡಿನ ಸಮಸ್ತ ಮಹಾಜನತೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಹಾರ್ದಿಕ ಶುಭಾಶಯಗಳು. 

- ಬಸವರಾಜ ಫಕೀರಪ್ಪ ಸುಣಗಾರ 

ಸಾಹಿತಿಗಳು, ಬೆಳಗಾವಿ 

- * * * - 

  

   


ಸುದ್ದಿ ಓದಿ