26ರಂದು ನೂತನ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ
ಬಳ್ಳಾರಿ 23: ಬಳ್ಳಾರಿಯ ತಾಳೂರು ರಸ್ತೆಯಲ್ಲಿ 121.9 ಕೋಟಿ ರೂ.ವೆಚ್ಚದಲ್ಲಿ ಜಿ+5 ಮಹಡಿಗಳ ನೂತನ ಸುಸಜ್ಜಿತ ಜಿಲ್ಲ ನ್ಯಾಯಾಲಯ ಸಂಕೀರ್ಣ ತಲೆಎತ್ತಿದೆ. ಸಕಲ ಸೌಕರ್ಯ ಒಳಗೊಂಡಿರುವ ಈ ನೂತನ ನ್ಯಾಯಾಲಯದ ಸಂಕೀರ್ಣ ಇದೇ ಜೂ.26ರಂದು ಲೋಕಾರ್ಪಣೆಗೊಳ್ಳಲಿದೆ.
ಕರ್ನಾಟಕ ಹೈಕೋಟ್ ಮುಖ್ಯ ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ಥಿ ಅವರು ಜೂ.26ರಂದು ಬೆಳಗ್ಗೆ 11ಕ್ಕೆ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿಗಳಾದ ಆರ್.ದೇವದಾಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ನಟರಾಜನ್, ಸಣ್ಣ ನೀರಾವರಿ, ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆಯ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರಗೌಡ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಬಿ.ಎಚ್.ಅನಿಲಕುಮಾರ್, ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರಾದ ಕೆ.ಕೋಟೇಶ್ವರರಾವ್,ಜೆ.ಎಂ.ಅನಿಲಕುಮಾರ್ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್.ಪುಷ್ಪಾಂಜಲಿದೇವಿ, ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷರಾದ ಕೆ.ಯರಿ್ರಗೌಡ,ಸಂಘದ ಕಾರ್ಯದರ್ಶಿ ಬಿ.ರವೀಂದ್ರನಾಥ,ಸಂಘದ ಉಪಾಧ್ಯಕ್ಷರಾದ ಎಂ.ನಾಗರಾಜ ನಾಯಕ್, ಸಂಘದ ಜಂಟಿ ಕಾರ್ಯದರ್ಶಿ ತ್ರೀವೇಣಿ ಪತ್ತಾರ್, ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜನಿಯರ್ ಎಸ್.ಎಚ್.ಪೂಜಾರಿ, ಸಂಘದ ಖಜಾಂಚಿ ಕೆ.ಎನ್.ಈರೇಶ ಸೇರಿದಂತೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳು,ಬಳ್ಳಾರಿ ವಕೀಲರ ಸಂಘದ ಕಾರ್ಯಕಾರಿ ಸದಸ್ಯರು,ಸದಸ್ಯರು ಉಪಸ್ಥಿತರಿರಲಿದ್ದಾರೆ.
2017 ನವೆಂಬರ್ 21ರಿಂದ ಕಾಮಗಾರಿ ಆರಂಭವಾಗಿದ್ದು,20625 ಚದರ್ ಮೀಟರ್ ವಿಶಾಲ ವಿಸ್ತೀರ್ಣದಲ್ಲಿ ನೆಲಮಹಡಿ ಸೇರಿದಂತೆ ಒಟ್ಟು 6 ಮಹಡಿಗಳಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ತಲೆಎತ್ತಿದೆ. 5 ಮಹಡಿಗಳಲ್ಲಿ 19 ಕೋರ್ಟ್ ಹಾಲ್ಗಳು ನಿರ್ಮಿಸಲಾಗಿದ್ದು, ಅದಕ್ಕೆ ಹೊಂದಿಕೊಂಡಂತೆ ನ್ಯಾಯಾಧೀಶರ ಕೊಠಡಿಗಳು, ಬೃಹತ್ ಕಾನ್ಪರೆನ್ಸ್ ಹಾಲ್, ಕಂಪ್ಯೂಟರ್ ಕೊಠಡಿಗಳು,ಟೈಪಿಂಗ್ ಪೂಲ್, ಸಾಕ್ಷಿಗಳ ಕಾಯುವಿಕೆ ಕೊಠಡಿ,ಲಾಕ್ಅಪ್ ರೂಮ್ಸ್, ಸಣ್ಣ ಜೈಲುಗಳು ಸಹ ಈ ನ್ಯಾಯಾಲಯ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ. ಕಚೇರಿ ಸಿಬ್ಬಂದಿಗಳ ಕೊಠಡಿಗಳು ಮತ್ತು ಶೌಚಾಲಯಗಳು ನಿರ್ಮಿಸಲಾಗಿದೆ.
ಬೆಂಕಿ ನಂದಿಸುವ ಸಾಧನಗಳು(ಫೈರ್),ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗಾಗಿ ನಾಲ್ಕು ಲಿಫ್ಟ್ಗಳು ಹಾಗೂ ನ್ಯಾಯಾಧೀಶರಿಗಾಗಿ ಒಂದು ಲಿಫ್ಟ್ ಸೇರಿದಂತೆ 5 ಲಿಫ್ಟ್ಗಳ ವ್ಯವಸ್ಥೆಯನ್ನು ಈ ನ್ಯಾಯಾಲಯ ಸಂಕೀರ್ಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
100 ಕೆಎಲ್ಡಿ ಸಾಮರ್ಥ್ಯದ ಸಿವೇಜ್ ಟ್ರೀಟ್ಮೆಂಟ್ ಪ್ಲಾಂಟ್(ಶೌಚಾಲಯ,ಚರಂಡಿ ಹಾಗೂ ಬಳಸಿದ ನೀರಿನ ಮರುಬಳಕೆ ಮಾಡುವ ಘಟಕ), 6ಲಕ್ಷ ಲೀಟರ್ ಸಾಮರ್ಥ್ಯದ ಒಳಚರಂಡಿ ಸಂಪ್ ನಿರ್ಮಾಣ, 1ಸಾವಿರ ಕೆ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಎಕ್ಸಪ್ರೆಸ್ ಲೈನ್ ಸಂಪರ್ಕ ಹಾಗೂ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ನ್ಯಾಯಾಲಯ ಸಂಕೀರ್ಣದಲ್ಲಿ ಕಲ್ಪಿಸಲಾಗಿದೆ.
ನೆಟವರ್ಕಿಂಗ್ ಸಿಸ್ಟಮ್, ಇಂಟರ್ನಲ್ ಮತ್ತು ಎಕ್ಸಟರ್ನಲ್ ಎಲೆಕ್ಟ್ರಿಫಿಕೇಶನ್ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಇಂಟರ್ನಲ್ ರಸ್ತೆಗಳನ್ನು ಈ ಆವರಣದಲ್ಲಿ ನಿರ್ಮಿಸಲಾಗಿದೆ.
ನೆಲಮಹಡಿಯಲ್ಲಿ ಕೇಂದ್ರೀಕೃತ ರಿಕಾರ್ಡ್ ರೂಂ, ಪ್ರಾಪರ್ಟಿ ರೂಂ,ಇ-ಸೇವಾ ಕೌಂಟರ್, ಹೆಲ್ಪ್ಡೆಸ್ಕ್, ನ್ಯಾಯಾಲಯ ಸೇವಾ ಕೇಂದ್ರ, ವಿಡಿಯೋ ಕಾನ್ಪರೆನ್ಸ್ ಕ್ಯಾಬಿನ್, ಶೌಚಾಲಯ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಬಳ್ಳಾರಿಯ ಪ್ರಮುಖ ಆಕರ್ಷಣೀಯ ಕಟ್ಟಡಗಳಲ್ಲಿ ಒಂದಾಗಿ ಗಮನಸೆಳೆಯುತ್ತಿದೆ.