ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಚಡಚಣ 23 : ತಾಲೂಕಿನ ಶಿಕ್ಷಕರ ಸೊಸೈಟಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಘಟಕ ಚಡಚಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದ ತಾಲೂಕಿನ ಎಲ್ಲಾ ನೂತನ ಪದಾಧಿಕಾರಿಗಳು ಇಂದು ಅಧೀಕೃತವಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಚಡಚಣ ಶಿಕ್ಷಕರ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಎಸ್. ಎಸ್. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯು ಬೆಳೆದು ಬಂದ ದಾರಿ ಹಾಗೂ ಶಿಕ್ಷಕರ ಹಿತರಕ್ಷಣೆಗಾಗಿ ಸಂಘಟನೆ ಮಾಡಿರುವ ಹೋರಾಟಗಳು ಅನನ್ಯ ಎಂದು ವಿವರಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎ. ಎಸ್. ಸೊನ್ನಗಿ ಮಾತನಾಡಿ, ಶಿಕ್ಷಕ ಸಂಘಟನೆಯ ಸಾಧನೆಗಳು ಮತ್ತು ಮುಂದಿನ ಜವಾಬ್ದಾರಿಗಳ ಕುರಿತು ತಿಳಿಸುತ್ತಾ, ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿ ಸಂಘಟನೆಯ ಜವಾಬ್ದಾರಿ ನೀಡಿದ ತಾಲೂಕಿನ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ನೌಕರರ ಸಂಘದ ಚಡಚಣ ತಾಲೂಕು ಘಟಕದ ಅಧ್ಯಕ್ಷ ಬಿ. ಎಸ್. ಮಜ್ಜಗಿ ಅವರು ನೂತನವಾಗಿ ಅಧಿಕಾರ ವಹಿಸಿಕೊಂಡ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಮುಂಬರುವ ದಿನಗಳಲ್ಲಿ ಸಂಘಟನೆಯು ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ನೂರಾರು ಶಿಕ್ಷಕರು ಹಾಗೂ ಗಣ್ಯರು ಇದ್ದರು. ಶಿಕ್ಷಕ ಸತೀಶ ಬಗಲಿ ಸ್ವಾಗತಿಸಿದರು. ಡಿ. ಎಸ್. ಬಗಲಿ ನಿರೂಪಿಸಿದರು.