ಉಳಿತಾಯ ಮಾಡಲು ದೊಡ್ಡ ಹುದ್ದೆ ಬೇಕೆ!
ಎಲ್ಲರಿಗೂ ತಾನೊಂದಿಷ್ಟು ಹಣವನ್ನು ಕೂಡಿ ಇಡಬೇಕು ಎನ್ನುವ ಕನಸು. ಕೂಡಿಟ್ಟ ಹಣದಿಂದ ತನ್ನ ಹೆಂಡತಿಗೆ ಚಿನ್ನ ಮಾಡಿಸೋಣ, ಮಕ್ಕಳ ಶಾಲೆಗೆ ಖರ್ಚು ಮಾಡೋಣ, ಮನೆ ಕಟ್ಟೋಣ, ಸ್ವಂತ ಉದ್ಯೋಗ ಮಾಡೊಣ ಹೀಗೆ ತರಾವರಿ ಯೋಜನೆಗಳು ಅವರ ಮುಂದೆ ಇರುತ್ತವೆ. ಹಾಗೆ ಉಳಿತಾಯ ಮಾಡಬೇಕು ಎಂದರೆ ಒಂದು ದುಡಿಮೆ ಇರಬೇಕು. ಆ ದುಡಿಮೆ ಉತ್ತಮದ್ದಾದರೆ ಹೆಚ್ಚಿಗೆ ಉಳಿಸಬಹುದು. ಅದಕ್ಕೆ ವಿದ್ಯೆ ಬೇಕು. ಅಥವಾ ಚಣಾಕ್ಷತನವಾದರೂ ಇರಬೇಕು. ಯಾವುದೋ ಒಂದು ಈತಿಯಲ್ಲಿ ದೊಡ್ಡ ಹುದ್ದೆಯ ನೌಕರಿಯೊಂದು ಗಿಟ್ಟಿಸಿಕೊಂಡರೆ ಕಂಡ ಕನಸಿಗೆ ಹಣ ಉಳಿಸಿ ನನಸಾಗಿಸಿಕೊಳ್ಳಬಹುದು ಎನ್ನುವುದು ಸಾಮಾನ್ಯ ಎಲ್ಲರ ಮನದಲ್ಲಿ ಇರುವಂತಹ ಯೋಚನೆ. ಕೆಲವೇ ಕೆಲವರು ಇದ್ದಷ್ಟರಲ್ಲಿ ತೃಪ್ತಿ ಪಟ್ಟು ಸರಾಗ ಜೀವನ ಸಾಗಿಸಿ ನಡೆದು ಬಿಡುತ್ತಾರೆ. ಅಂಥವರಿಗೆ ಜನ ‘ಅಯ್ಯೋ ಒಂದಷ್ಟು ಮೊದಲು ಉಳಿತಾಯ ಮಾಡಿದ್ದರೆ ಈಗ ಅವನ ಖರ್ಚಿಗೆ ಪರದಾಡುವಂತಾಗುತ್ತಿರಲಿಲ್ಲ’ ಎನ್ನುವ ಮಾತು ಕೂಡ ಕೇಳಿಸಿಕೊಳ್ಳಬೇಕಾಗುತ್ತದೆ. ಸ್ವಲ್ಪ ಉಳಿತಾಯ ಬೇಕು. ಆದರೆ ಉಳಿತಾಯವೇ ಬದುಕಾಗಿಬಿಡಬಾರದು.
ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಸತ್ಯಕಥೆ. ಆಕೆ ಐವತ್ತರ ಗಡಿಯಲ್ಲಿರುವ ಹೆಂಗಸು. ಮಾಸಿದ, ತೇಪೆ ಹಚ್ಚಿದ ಸೀರೆ ಉಟ್ಟುಕೊಂಡು ಭಿಕ್ಷೆ ಬೇಡುತ್ತ ಮನೆಮನೆ ತಿರುಗುವವಳು. ಭಿಕ್ಷೆ ಬೇಡುವವಳಾದರೂ ಪಟ್ಟಗೆ ತಲೆ ಬಾಚಿಕೊಂಡು, ಕೈ ತುಂಬಾ ಬಳೆ, ಹಣೆಯಲ್ಲಿ ದೊಡ್ಡ ಕುಂಕುಮ, ಕೊರಳಲ್ಲಿ ಪೊಣಿಸಿದ್ದ ಕರಿಮಣಿ ಸರ ಹಾಕಿ ಲಕ್ಷಣವಾಗಿ ಕಾಣುತ್ತಿದ್ದಳು. ಆಕೆ ಅಮ್ಮಾ ರೂಪಾಯಿ ಕೊಡಿ ಅಂತ ಹೇಳದ ವಿನಹ ಭಿಕ್ಷುಕಿ ಎಂದು ಗೊತ್ತಾಗುತ್ತಿರಲಿಲ್ಲ. ಕೆಲವರು ಹೈಟೆಕ್ ಭಿಕ್ಷುಕಿ ಇವಳು ಅಂತ ನಗಾಡುವವರು ಇದ್ದರು. ಆದರೆ ಆ ಹೆಂಗಸು ಎಲ್ಲರಲ್ಲೂ ಕೇಳುವುದು ಕೇವಲ ಐವತ್ತು ಪೈಸೆ ಮಾತ್ರ. ಅದಕ್ಕೂ ಹೆಚ್ಚಿಗೆ ಕೊಟ್ಟರೆ ಐವತ್ತು ಪೈಸೆ ಇಟ್ಟುಕೊಂಡು ಉಳಿದದ್ದು ತನ್ನಲ್ಲಿರುವ ದುಡ್ಡನ್ನು ಹೊಂದಿಸಿ ತಿರುಗಿ ಕೊಟ್ಟುಬಿಡುತ್ತಿದ್ದಳು. ಸ್ವಲ್ಪ ದಿನದ ನಂತರ ಐವತ್ತು ಪೈಸೆ ಭಿಕ್ಷುಕಿ ಎಂದೆ ಹೆಸರು ಪಡೆದಳು.
ಅವಳು ಒಂದು ದಿನ ನಮ್ಮೂರಿನ ಒಬ್ಬ ವ್ಯಾಪಾರಿ ಬಳಿ ಭಿಕ್ಷೆಗೆ ಹೋದಳು. ಅವನಲ್ಲಿಯೂ ಐವತ್ತು ಪೈಸೆಯೇ ತೆಗೆದುಕೊಂಡಿದ್ದಳು. ಆದರೆ ಆ ವ್ಯಾಪಾರಿ ಅವಳಿಗೆ ಬೇಕಂತಲೇ ಕೆಣಕಿದ. ‘ಏನಮ್ಮ ನೀನು ದಿನವೂ ಭಿಕ್ಷೆ ಬೇಡುತ್ತ ಸಲೀಸಾಗಿ ದುಡ್ಡು ಸಂಪಾದನೆ ಮಾಡುತ್ತಿಯಾ, ನಾವು ದುಡಿದು ಸಂಪಾದಿಸಬೇಕು. ನಾನು ದುಡಿದದ್ದು ನಿನಗೆ ಕೊಡಲಿಕ್ಕೆ ಅಂದುಕೊಂಡಿದ್ದೀಯಾ ಹೇಗೆ. ಒಂದೊಂದು ರೂಪಾಯಿ ಸಂಪಾದಿಸಲು ಎಷ್ಟು ಶ್ರಮವಿದೆ ಗೊತ್ತಾ? ದೊಡ್ಡ ನೌಕರಿ, ದೊಡ್ಡ ಜಮೀನು ಇದ್ದವರಿಗೆ ಒಂದಷ್ಟು ಹಣ ಕೂಡಿಡ್ತಾರೆ, ನಮ್ಮಂಥಹ ಬಡ ವ್ಯಾಪಾರಸ್ಥರು, ಬಡವರು ಎಲ್ಲಿಂದ ಹಣ ಕೂಡಿಡುವುದು, ನಿಮ್ಮಂಥವರಿಗೆ ಕೊಡುವುದು’ ಎಂದ. ಅವನ ಮಾತಿಗೆ ಆ ಹೆಂಗಸು ಕೂಡ ಅವನಿಗೆ ಉತ್ತರ ಕೊಟ್ಟಳು. ಕೂಡಿಡುವುದಕ್ಕೆ ದೊಡ್ಡ ಹುದ್ದೆ ಬೇಕೆ! ಮೊದಲು ಮನಸ್ಸನ್ನು ಕೂಡಿಸು ನಂತರ ಹಣ ಕೂಡಿಸು. ನೀನು ದುಡಿದದ್ದರಲ್ಲಿ ನಿತ್ಯ ಒಂದು ರೂಪಾಯಿ ಇಡು. ಮುನ್ನೂರ ಅರವತ್ತು ದಿನಕ್ಕೆ ಮುನ್ನೂರು ಅರವತ್ತು ರೂಪಾಯಿ ಆಯ್ತು. ನಿನಗೊಂದು ಹೊಸ ಅಂಗಿ ಪಂಚೆ ಬರುತ್ತೆ. ಅದು ನಿನ್ನ ಪಾಲಿಗೆ ನಿನಗೆ ಉಳಿದ ಲಾಭ. ಅದಕ್ಕೂ ಹೆಚ್ಚಿಗೆ ದುಡಿದು ಹೆಚ್ಚಿಗೆ ಉಳಿಸಿ ಹೆಂಡತಿಗೋ ಮಕ್ಕಳಿಗೋ ನನಗೆ ಭಿಕ್ಷೆಯೋ ಕೊಡುತ್ತಿಯಲ್ಲ ಅದು ಲಾಭದ ಮೊತ್ತ ಅಲ್ಲಯ್ಯ, ಧರ್ಮ ಕರ್ಮದ ಮೊತ್ತ. ನಿನ್ನ ಹೆಂಡತಿ ಮಕ್ಕಳಿಗೆ ಕೊಟ್ಟರೆ ಕರ್ತವ್ಯ ಪಾಲಿಸಿದಂತೆ, ಬಂಧುಬಾಂಧವರಿಗೆ ಕೊಟ್ಟರೆ ಧರ್ಮ ಪಾಲಕನಾದೆ. ನನ್ನಂಥವಳಿಗೆ ಕೊಟ್ಟರೆ ನಿನ್ನ ಯಾವುದ್ಯಾವುದೋ ಕರ್ಮ ತೊಳೆದುಕೊಂಡೆ. ಇದರಿಂದ ನಿನಗೆ ಪುಣ್ಯವೇ ಹೊರತು ನಷ್ಟವಲ್ಲ. ಪುಣ್ಯ ಸಂಪಾದನೆ ಕೂಡ ಲಾಭವೇ ಅಲ್ಲವೆ. ಲಾಭಕ್ಕೆ ದೊಡ್ಡ ಹುದ್ದೆ ಬೇಡ. ನಷ್ಟಕ್ಕೆ ಒಂದು ದುರ್ಬುದ್ಧಿ ನಡೆ ಸಾಕು. ನಾಳೆಯಿಂದ ನಿನ್ನ ಮನೆಗೆ ನಾನು ಬರುವುದಿಲ್ಲ’ ಎಂದು ನಡೆದುಬಿಟ್ಟಿದ್ದಳು.
ಅವಳು ಅಂದ ಮಾತಿನಲ್ಲಿ ಅದೆಷ್ಟು ಸತ್ಯವಿದೆ. ನಾವು ಹಣ ಕೂಡಿಡುವುದರ ಬಗ್ಗೆ ಮಾತ್ರ ಯೋಚಿಸುತ್ತೇವೆ. ಕೂಡಿಟ್ಟ ಹಣ ನಮಗೆಷ್ಟು ದಕ್ಕಿತು ಎನ್ನುವದು ಯೋಚಿಸುವುದೇ ಇಲ್ಲ. ದುಡಿದಿದ್ದೆಲ್ಲ ನಮ್ಮದೇ ಸ್ವತ್ತಾಗಿ ಉಳಿಯಲು ಎಲ್ಲಿ ಸಾಧ್ಯ. ನಾವು ಗಳಿಸಿದ್ದು ಒಳ್ಳೆಯದಕ್ಕೆ ಸೇರಿ ಅದು ನಮ್ಮಲ್ಲಿ ಸಂತೃಪ್ತಿ ಭಾವ, ಮಾತ್ರ ನಮ್ಮ ಸ್ವತ್ತು ಎನ್ನುವುದು ಮರೆತುಬಿಡುತ್ತೇವೆ.
ಇದೇ ರೀತಿ ಮತ್ತೊಬ್ಬ ಭಿಕ್ಷುಕ ಬಸ್ಟಾಂಡಿನಲ್ಲಿ ಬೇಡುತ್ತಿದ್ದ. ಅವನು ಬಸ್ಸಿಗೆ ಎಂದು ನಿಂತವರ ಬಳಿ ಮಾತ್ರ ಬೇಡುತ್ತಿದ್ದ. ಇವನ್ನು ಕಂಡಾಗ ಆ ಹೆಂಗಸಿನ ನೆನಪಾಗಿತ್ತು. ಭಿಕ್ಷೆ ಬೇಡುವವರಲ್ಲೂ ಒಂದು ನಿಯಮವಿದೆ ಎಂದುಆಕೆ ತಿಳಿಸಿಕೊಟ್ಟಿದ್ದಳು. ಇವನದ್ದು ಮತ್ತೊಂದು ರೀತಿ. ಅವನು ಬೇಡಿದ ಭಿಕ್ಷೆ ಎಷ್ಟಾಗಬಹುದು ಎನ್ನುವ ಲೆಕ್ಕ ನಾವು ಸ್ನೇಹಿತರೆಲ್ಲ ಮಾತಾಡಿಕೊಂಡಿದ್ದು ಇದ್ದು. ಶಾಲೆ-ಕಾಲೇಜು ಹೋಗುವ ನಮ್ಮಂಥಹ ಮಕ್ಕಳನ್ನು ಮಾತ್ರ ಬೇಡುವುದಿಲ್ಲವಲ್ಲ ಎನ್ನುವ ಸಮಾಧಾನವೂ ಇತ್ತು. ಹಾಗಿರುವಾಗ ಒಂದು ದಿನ ಕಾಲೇಜಿನಿಂದ ತಿರುಗಿ ಬಸ್ಸಿಗೆ ಬಂದು ಊರಲ್ಲಿ ಇಳಿಯುವಾಗ ನಾಲ್ಕಾರು ಪೋಲಿಸರು ಬಸ್ಟಾಂಡಿನಲ್ಲಿದ್ದರು. ಯಾಕೆ ಎಂದು ವಿಚಾರಿಸಿದಾಗ ಭಿಕ್ಷೆ ಬೇಡುವುದು ತಪ್ಪು, ಹಾಗೆ ಭಿಕ್ಷೆ ಬೇಡಬಾರದು ಎನ್ನುವ ಜಾಗ್ರತಿಯನ್ನು ಭಿಕ್ಷೆ ಬೇಡುವವರಿಗೆ ಮೂಡಿಸುವ ಕೆಲಸವಾಗುತ್ತಿದೆ. ಈ ಭಿಕ್ಷುಕನಿಗೆ ಈಗಾಗಲೇ ಸಾಕಷ್ಟು ಸಲ ವಾರ್ನಿಂಗ್ ಮಾಡಿದ್ರು ಮತ್ತೆ ಬಸ್ಟಾಂಡ್ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ. ಅದಕ್ಕಾಗಿ ಯಾರೋ ಇವನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ ಎನ್ನುವುದು ತಿಳಿಯಿತು. ಇಷ್ಟು ತಿಳಿದ ಮೇಲೆ ನಾವು ಸ್ನೇಹಿತರು ಅಲ್ಲಿ ನಿಲ್ಲದೆ ಮನೆಯತ್ತ ನಡೆದುಬಿಟ್ಟಿದ್ದೇವು. ಮಾರನೇ ದಿನ ಪತ್ರಿಕೆಯಲ್ಲಿ ಆ ಭಿಕ್ಷುಕನ ಪೋಟೊ ಸಹಿತ ವರದಿ ಬಂದಿತ್ತು. ಭಿಕ್ಷುಕ ಕನ್ನಡ ಶಾಲೆಯ ಕಟ್ಟೆಯ ಮೇಲೆ ರಾತ್ರಿ ಮಲಗುತ್ತಿದ್ದ. ಹಗಲು ಶಾಲೆಯ ಹಿಂಬದಿ ಇರುವ ಒಂದು ಮರದ ಮೇಲೆ ಅವನ ಹಾಸಿಗೆಯನ್ನು ಇಡುತ್ತಿದ್ದ. ಪೋಲಿಸರು ಅವನ ಹಾಸಿಗೆಯನ್ನು ಪರೀಶೀಲಿಸಿದಾಗ ಬರೋಬ್ಬರಿ ಎರಡು ಲಕ್ಷಕ್ಕೂ ಹೆಚ್ಚಿನ ಹಣ ಸಿಕ್ಕಿದೆ. ಕೆಲವು ನೋಟುಗಳು ಹರಿದು ಹೋಗಿವೆ ಎಂದಿತ್ತು.
ಆ ಭಿಕ್ಷುಕನಿಗೆ ನಿತ್ಯದ ಭಿಕ್ಷೆಯಿಂದ ಸಾಕಷ್ಟು ಹಣ ಉಳಿಯುತಿತ್ತು. ಉಳಿದ ಹಣ ಕೂಡಿ ಹಾಕಿದ್ದ. ಬ್ಯಾಂಕಿನಲ್ಲಿ ಇಡುವ ವ್ಯವಸ್ಥೆಯೂ ಗೊತ್ತಿಲ್ಲ. ಅಥವಾ ತನಗೆಂದು ಒಂದೊಳ್ಳೆ ಬಟ್ಟೆ ತೆಗೆದುಕೊಳ್ಳಬೇಕು ಎನ್ನುವದು ತಿಳಿದಿಲ್ಲ. ಹೆಚ್ಚಿನದ್ದನ್ನು ಕೂಡಿಟ್ಟ. ಹಾಗೆ ಕೂಡಿಟ್ಟಿದ್ದರ ಲಾಭವೇನು? ಮನುಷ್ಯ ಒಂದಷ್ಟು ಗಳಿಸಲು ದೊಡ್ಡ ಹುದ್ದೆಯೇ ಬೇಕೆಂದೆನಿಲ್ಲ ಎಂದು ಕೂಡ ಇಲ್ಲಿ ಗೊತ್ತಾಗುತ್ತದೆ. ಆದರೆ ದೊಡ್ಡವನಿರಲಿ, ಬಡವನಿರಲಿ ಉಳಿಸಿದ ಹಣವನ್ನು ಯಾವುದಕ್ಕೆ ವ್ಯಯ ಮಾಡಬೇಕು ಎನ್ನುವದು ಗೊತ್ತಿಲ್ಲದೇ ಹೋದರೆ ಆ ಉಳಿತಾಯ ಮಾಡಿಯೂ ಪ್ರಯೋಜನವಿಲ್ಲದೇ ಬೇರೆಯವರ ಪಾಲಾಗಿ ಹೋಗುವುದು. ದುಡಿದದ್ದರಲ್ಲಿ ಉಳಿತಾಯ ಇರಬೇಕು, ಉಳಿತಾಯ ಮಿತವಾಗಿರಬೇಕು, ಸತ್ಪಾತ್ರಕ್ಕೆ ಆ ಉಳಿತಾಯ ಲಭ್ಯವಾಗಬೇಕು. ಅಷ್ಟಾದರೆ ಮಾತ್ರ ಉಳಿತಾಯಕ್ಕೊಂದು ಬೆಲೆ ಸಿಗುವುದು.
- * * * -