ಲೇಖನಗಳು

ಡಾ. ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ನಿಸರ್ಗ

ಡಾ. ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ನಿಸರ್ಗ

ನಿಸರ್ಗದ ವಿಸ್ಮಯದ ಸಂಚಯ ಅದಮ್ಯ ಸಮ್ಮೋಹನ ಶಕ್ತಿಯ ನಿಸರ್ಗ ಕವಿಗಳನ್ನು ಚುಂಬನದಂತೆ ಸೆಳೆಯುತ್ತೇವೆ. ಮಾಗಿ, ಮಳೆ, ವಸಂತ, ಬಾನು-ಬುವಿ, ಬೆಳಕು ಬೆಳದಿಂಗಳು, ನಕ್ಷತ್ರ, ಹೂವು ಜಿನದತ್ತರ ಕವಿತೆಗಳನ್ನು ಅರಳಿಸಿವೆ. ಕವಿ ಹಲವು ರೂಪಗಳಲ್ಲಿ ರವಿಯನ್ನು ಕಾಣುವುದು. ಅದ್ಭುತ ಜಗದ ಚಿತ್ರಗಳಿಗೆ ಬಣ್ಣ ತುಂಬುವ ಚಿತ್ರಗಾರ ರವಿ ದೇವದತ್ತ; ಆ ರವಿಯನ್ನೇ ತನ್ನ ಶಬ್ಧಗಳಲ್ಲಿ ಬಂಧಿಸಿದ ಕವಿ ಜಿನದತ್ತ ಇವರಿಗೆ ಹೂವು ಹೂವುಗಳಲ್ಲಿ ಭಗವಂತನ ಹಲವು  ಮುಖಗಳನ್ನು ದರ್ಶಿಸುವ ನಿಸರ್ಗೊಪಾಸನೆ ಅರ್ಥವೆನಿಸುತ್ತದೆ. 

“ಮೋಟು ಮರ 

ಬಿಗಿತಿತ್ತು 

ಮೌನಕ್ಕೆ ಮುಗುಳೊಡೆದು ಮಾತಾಡಿತು 

ಎರಡೆಲೆಯ ಚಿಗುರು 

ಮರದ ಕನಸನು ಕಂಡು 

ಮೈಮುರಿದು ಎದ್ದು 

ಎದೆಯುದ್ದ ಬೆಳೆದು ರೆಂಬೆ ಕೊಂಬೆಗಳಲ್ಲಿ ಕೈಯೆತ್ತಿ 

ಮುಗಿಲಿನೆಡೆಗೆ ಮೊಗವೆತ್ತಿ 

ಕೈ ಮುಗಿಯುತ್ತಿದೆ ನಭಕೆ 

ತಾ ಪಡೆದ ಭಾಗ್ಯಕ್ಕೆ” 

ಯುಗಾದಿಯಲ್ಲಿ ಎಲೆಯ ಚಿಗುರಿನ ವರ್ಣನೆ ಈ ಕವನದಲ್ಲಿ ತುಂಬ ಸೊಗಸಾಗಿ ಮೂಡಿ ಬಂದಿದೆ. ಎಲೆ ಚಿಗುರು ಮುಗಿಲಿಗೆ ಕೈಮುಗಿಯುತ್ತಿರೆ ಎಂದು ಉಪಮೆ ಅರ್ಥಪೂರ್ಣವಾಗಿದೆ. ಹೊಸ ವರ್ಷದ ಮೊದಲನೆ ಹಬ್ಬ ಯುಗಾದಿಗೆ ಹೊಸ ಚಿಗುರು ರೆಂಬೆ ಕೊಂಬೆಗಳಾಗಿ ಬೆಳೆದು ನಿಂತಿರುತ್ತವೆ ಎಂದು ಹೇಳುತ್ತಾರೆ. 

ಪ್ರಕೃತಿಯ ಗೆಳೆತನ, ಆಕೃತಿಯ ಒಗೆತನ, ಕೆಲವು ಕಡೆ ನಿಗಿ ನಿಗಿ ಕೆಂಡ, ಚುರು ಚುರು ಹೊಗೆ, ಉನ್ಮಾದ, ಕುದಿತ, ಬೆಳಕು, ಅರುವಿನ ಆಟ, ವಿಧಿಯ ಸರಸಾಟ, ಸಾಧನೆಯ ಶಿಖರ ಎಚ್ಚರಿಕೆಯ ನಿದ್ದೆ ಏನಿದೆ ಏನಿಲ್ಲ ಅದೊಂದು ಮಹಾಗರ್ಭತವಾಗಿದೆ. 

“ಇದೆನ್ನ ಅನುಭವ ಸಮುದ್ರ 

ಗೊತ್ತಿದೆಯ ಇದರ ಆಳ-ಅಗಲ 

ಎಷ್ಟೊಂದು 

ನದಿ ಹಳ್ಳ ತೊರೆಗಳಿವೆ. 

ಈ ಕಡಲ ಒಡಲೊಳಗೆನ್ನುವ ಲೆಕ್ಕ 

ಒಂದೊಂದು ಅಲೆಯಲ್ಲಿ ಅಡಗಿದೆ. 

ಇದೇ ಸಮುದ್ರ”.  

ಜಿನದತ್ತರ ಈ ಸಾಲುಗಳು ಅವರ ಬದುಕಿನ ಭವ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಕೆರೆ ಹಳ್ಳಗಳು ಮೈದೆರೆದರೆ ಅಲ್ಲಿ ಗೊರಜೆ ಚಿಪ್ಪುಗಳು ಕಾಣಸಿಗುತ್ತವೆ. ವಾರಿಧಿ ಮೈದರೆದರೆ ಅಲ್ಲಿ ಮುತ್ತು ರತ್ನಗಳು ಕಾಣಬೇಕಲ್ಲ. 

“ಬೆಳಕು 

ಮೊಳಕೆಯೊಡೆದಿದೆ 

ಚಿಗುರು ಪಡೆದು ಬೆಳೆದಿದೆ 

ಬೆಳಕಿನೊಂದು ವೃಕ್ಷವಾಗಿ ನೆಲ ಮುಗಿಲನು ತಬ್ಬಿದೆ 

ಬೆಳಕಿನ ಬೆಳೆ 

ಬೆಳೆದು ನಿಂತು 

ಭೂಲೋಕನು ಹಬ್ಬಿದೆ”. 

ಬೆಳಕಿನ ಬಗೆಗಿನ ದೇಸಾಯಿ ಅವರು ಕಲ್ಪನೆ ಅಪೂರ್ವವಾಗಿದೆ. ಅಂತೆಯೇ ಜಿನದತ್ತ ದೇಸಾಯಿ ಅವರು ನಿಸರ್ಗ ಕವಿಯಷ್ಟೇ ಅಲ್ಲ ಅವರನ್ನು ಬೆಳಕಿನ ಕವಿ ಎನ್ನಬಹುದಾಗಿದೆ. ಕತ್ತಲಿನ ಬದುಕನ್ನು ಬೆಳಕಿನ ಕಡೆಗೆ ಸಾಗಿದ್ದಾರೆ. ಅಮೂರ್ತದಿಂದ ಮೂರ್ತದ ಕಡೆಗೆ ಬೆಳಕನ್ನು ಮೊಳಕೆಯೊಡೆದು ಎಲ್ಲರ ಮನಗಾನುವಂತೆ ಚಿತ್ರಿತವಾಗಿದ್ದಾರೆ. ಮನುಷ್ಯನ ಬದುಕು ಸಹ ಒಂದು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಬೆಳಕನ್ನು ಚೆಲ್ಲಬೇಕು. ಎಲ್ಲರಿಗೂ ಮಾರ್ಗದರ್ಶಕರಾಗಿ ಮಾದರಿಯಾಗಿ ಬಹಳಷ್ಟು ಎತ್ತರಕ್ಕೆ ಬೆಳೆದು ನಿಲ್ಲಬೇಕು. ಸೂರ‌್ಯನಂತೆ ಪ್ರಕಾಶಮಾನವಾಗಿ ಬೆಳಕನ್ನು ಹಬ್ಬಿಸಬೇಕು ಎಂದು ವಿವರಿಸುತ್ತಾರೆ. 

“ಪರಿಮಳವೇ ಮೊಳೆತು 

ಚಿಗಿತು 

ಲತೆಯಾಗಿ 

ಹೂಬಿಟ್ಟು ಹಾಗೆ 

ಘಮ ಘಮಿಸುತಿದೆ ಪುಷ್ಪ 

ಇಳೆಯ ಸೌಭಾಗ್ಯ ಪಕಳೆ ಪಡೆದಂತೆ” 

ಜಿನದತ್ತರ ಹಲವಾರು ಕವನಗಳಲ್ಲಿ, ಹನಿಗವನಗಳಲ್ಲಿ ನಿಸರ್ಗ ಬಹುಬಗೆಯಾಗಿ ಚಿತ್ರಣಗೊಡಿದೆ. ಪರಿಮಳವು ಬೀರುತ್ತಾ ತನ್ನ ಬಳ್ಳಿಯಿಂದ ಬಳ್ಳಿಗೆ ಹಬ್ಬುತ್ತಾ ತನ್ನ ಸುಗಂಧ ಪರಿಮಳವನ್ನು ಘಮ ಘಮಿಸುತ್ತದೆ. ಪುಷ್ಪಗಳು ತನ್ನ ಒಂದೊಂದು ಪಕಳೆಯಿಂದ ಬೀರುತ್ತದೆ. ಮಾನವರು ತನ್ನ ಬಳ್ಳಿಯನ್ನು ಬೆಳೆಸುವುದರ ಜೊತೆಗೆ ಎಲ್ಲರ ಮನವನ್ನು ಗೆಲ್ಲುವ ಮನೋಭಾವನೆಯನ್ನು ಹೊಂದಿಕೊಂಡಿರುಬೇಕೆಂದು ವಿವರಿಸುತ್ತಾರೆ. 

ಇಂದು ಹಿರಿಯ ಕವಿ ಡಾ. ಜಿನದತ್ತ ದೇಸಾಯಿವರ ಹುಟ್ಟು ಹಬ್ಬ. 91ರಲ್ಲಿ ಪಾದಾರೆ​‍್ಣ ಮಾಡುತ್ತಿರುವ ಹಿರಿಯ ಕವಿಯನ್ನು ಹೃದಯಪೂರ್ವಕ ಅಭಿನಂದಿಸಿ ಲೇಖನ ಮುಗಿಸುತ್ತೇನೆ. 

- ಅನುರಾಧಾ ಅಶೋಕ ಕಂಚಿ 

    ಮೊ. 9481562233 


-0-0-0- 


ಸುದ್ದಿ ಓದಿ