ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ
ಒಟ್ಟು 3672 ಪ್ರಕರಣಗಳು ರಾಜೀ ಸಂಧಾನ; ಒಟ್ಟು 28,18,86,847 ರೂ.ಗಳ ಮೊತ್ತ ಪರಿಹಾರ
ಬಳ್ಳಾರಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಫೆಬ್ರವರಿ 11 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 3672 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ್ ಜೆ.ಬಾಳಿ ಅವರು ತಿಳಿಸಿದರು.
ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಲೋಕ್ ಅದಾಲತ್ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪುಷ್ಪಾಂಜಲಿ ದೇವಿ ಅವರ ಮಾರ್ಗದರ್ಶನದಲ್ಲಿ ಒಟ್ಟು 32 ಪೀಠಗಳನ್ನು ಸ್ಥಾಪಿಸಲಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 9657 ಪ್ರಕರಣಗಳು ವಿಚಾರಣೆಯಾಗಿವೆ. ಇದರಲ್ಲಿ ವಿಚಾರಣೆ ಹಂತದಲ್ಲಿರುವ ಧಾವೆಗಳು, ವ್ಯಾಜ್ಯಪೂರ್ವ ಧಾವೆಗಳು ಮತ್ತು ಇತರೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಸದರಿ ಲೋಕ್ ಅದಾಲತ್ನಲ್ಲಿ ಒಟ್ಟು 3672 ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮಾಡಿಸಲಾಯಿತು. ಅವುಗಳಿಂದ 28,18,86,847 ರೂ.ಗಳ ಮೊತ್ತವನ್ನು ಪರಿಹಾರ ಕೊಡಿಸಲಾಗಿದೆ.
ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 251 ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು 40, ಹಣ ವಸೂಲಾತಿ ಪ್ರಕರಣಗಳಲ್ಲಿ 42, ಮೋಟಾರು ವಾಹನ ಅಪಘಾತ ಸಂಬಂಧಿಸಿದಂತೆ 120 ಪ್ರಕರಣಗಳು, ಪಾಲು ವಿಭಜನೆ ಪ್ರಕರಣಗಳು 67 ಮತ್ತು 28 ಮೋಟಾರು ವಾಹನ ಕಾಯ್ದೆ ಅಮಲು ಜಾರಿ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಿಳಿಸಿದರು.
ಅದಾಲತ್ನಲ್ಲಿ ಲೋಕ್ ಅದಾಲತ್ ಪೀಠದಲ್ಲಿ 11 ಜೋಡಿ ದಂಪತಿಗಳ ವಿವಾಹ ವಿಚ್ಛೇದಿತ ಪ್ರಕರಣಗಳನ್ನು ತೆಗೆದುಕೊಂದು ಯಶಸ್ವಿಯಾಗಿ ರಾಜೀ ಸಂದಾನದ ಮೂಲಕ ಒಂದುಗೂಡಿಸಲಾಗಿದೆ. ಅದಾಲತ್ನಲ್ಲಿ ಸಾರ್ವಜನಿಕರು ತಮ್ಮ ವ್ಯಾಜ್ಯಗಳು ಮತ್ತು ಇತರೆ ರಾಜಿ ಆಗಬಲ್ಲ ಪ್ರಕರಣಗಳನ್ನು ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಂಡರು. ಲೋಕ ಅದಾಲತ್ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅರ್ಜಿದಾರರ ಪರ ವಕೀಲರು, ಕಕ್ಷಿದಾರರು ಭಾಗವಹಿಸಿ ರಾಷ್ಟ್ರೀಯ ಲೋಕ್ ಅದಾಲತ್ನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.