ಮುಂಡರಗಿ

ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಶಸ್ತಿ

ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ  ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಶಸ್ತಿ

ಮುಂಡರಗಿ 06: ತಾಲೂಕು ಆಸ್ಪತ್ರೆಯಲ್ಲಿನ ಸುಸಜ್ಜಿತ ಹೆರಿಗೆ ಕೊಠಡಿ ಹಾಗೂ ಹೆರಿಗೆ ಶಸ್ತ್ರಚಿಕಿತ್ಸೆಯನ್ನು ಪರಿಗಣಿಸಿ, ಲಕ್ಷ್ಯ ಮೌಲ್ಯಮಾಪನದಡಿಯಲ್ಲಿ ಅತ್ಯುತ್ತಮ ತಾಲೂಕು ಆಸ್ಪತ್ರ್ರೆಯನ್ನಾಗಿ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿ ಇದಕ್ಕೆ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ನೀಡಿ ಗೌರವಿಸಲಾಗಿದೆ ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಹೇಳಿದರು. 

ಪಟ್ಟಣದ ತಾಲೂಕು ಅಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ಮುಂಡರಗಿ ತಾಲೂಕು ಆಸ್ಪತ್ರೆಯು ಮುಂಬರುತ್ತಿರುವ ದಿನಮಾನಗಳು ಕಳೆದಂತೆ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಂಪೂರ್ಣ ಬೆಂಬಲ ಹಾಗೂ ಸಹಕಾರದಿಂದ ಇಂತಹ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತ ಪ್ರಶಸ್ತಿ ಲಭಿಸಲು ಸಹಕಾರಿಯಾಗಿದೆ. ಈ ಲಕ್ಷ್ಯಾ ತಂಡದಿಂದ ನಮ್ಮ ಆಸ್ಪತ್ರೆಯನ್ನು ಕಳೆದ ವರ್ಷ ಅಕ್ಟೋಬರ್ 27ರಂದು ಮೌಲ್ಯಮಾಪನ ಮಾಡಲಾಗಿತ್ತು. ನಂತರ ಡಿಸೆಂಬರ ತಿಂಗಳಿನಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕನ್ನು ಈ ಲಕ್ಷ್ಯಾ ಅವಾರ್ಡಗೆ ಆಯ್ಕೆ ಮಾಡಲಾಯಿತು. ಈ ಅವಾರ್ಡನಿಂದ ನನಗೆ ತುಂಬಾ ಸಂತೋಷವಾಯಿತು. 

ಆರೋಗ್ಯ ರಕ್ಷಾ ಸಮಿತಿಯಿಂದ ಈ ಹಿಂದೆ ಒಂದು ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ಎಲ್ಲರಿಗೂ ಲಕ್ಷ್ಯಾ ಅವಾರ್ಡ ಕುರಿತು ಮಾಹಿತಿ ನೀಡಿದ್ದೇನೆ. ಈ ಅವಾರ್ಡದಿಂದ ನಮ್ಮ ಆಸ್ಪತ್ರೆಗೆ ಪ್ರತಿ ವರ್ಷ 4 ಲಕ್ಷ ಅನುದಾನ ಬರುತ್ತದೆ. ಅದನ್ನು ಬಳಕೆ ಮಾಡುವಲ್ಲಿ ನಮ್ಮ ಆರೋಗ್ಯ ರಕ್ಷಾ ಸಮಿತಿಯೊಂದಿಗೆ ಚರ್ಚಿಸಿ ಆ ಅನುದಾನವನ್ನು ಬಳಕೆ ಮಾಡುವಲ್ಲಿ ಇರುವ ರೀತಿ ನೀತಿಗಳನ್ನು ಪಾಲಿಸಲಾಗುವುದು ಎಂದು ಮಾಹಿತಿ ನೀಡಿದರು.  

ಅಲ್ಲದೇ ನಮ್ಮ ಆಸ್ಪತ್ರೆಯು ಉತ್ತಮ ಸೇವೆಗಳನ್ನು ನೀಡುತ್ತಿದೆ ಎಂಬ ಕಾರಣಕ್ಕೆ  ಜನೇವರಿ 26 ರಂದು ಗದಗ ಜಿಲ್ಲೆಯಲ್ಲಿ ಮುಂಡರಗಿ ತಾಲೂಕು ಆಸ್ಪತ್ರೆ ಉತ್ತಮ ಆಸ್ಪತ್ರೆಯೆಂದು ರಾಜ್ಯ ಸರ್ಕಾರವೂ ಕೂಡಾ ಗೌರವವನ್ನು ಸೂಚಿಸಿದೆ. ಆಡಳಿತ ಮಂಡಳಿಯ ಸರ್ವ ಪದಾಧಿಕಾರಿಗಳ ಸಹಕಾರದಿಂದ ಉತ್ತಮವಾದ ಅಡಳಿತವನ್ನು ಹಾಗೂ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರವೂ ಕೂಡ ಅನಿವಾರ್ಯತೆ ಇರುತ್ತದೆ. ಹಾಗೂ ಈ ಆಸ್ಪತ್ರೆಯಲ್ಲಿ ಸಾರ್ವಜನಿಕ ಶೌಚಾಲಯದ ಸೌಲಭ್ಯ ಒದಗಿಸಬೇಕೆಂದು ಇತ್ತೀಚಿಗೆ ನಡೆದ ಜನತಾ ದರ್ಶನ ಕಾರ್ಯಕ್ರಮಮದಲ್ಲಿ ಸಚಿವರ ಸಮ್ಮುಖದಲ್ಲಿ ಸಾರ್ವಜನಿಕರಿಂದ ಪ್ರಶ್ನೆ ಕೇಳಲಾಗಿತ್ತು. ಈ ಕುರಿತು ಆ ಪ್ರಶ್ನೆಯನ್ನು ಪರಿಗಣಿಸಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಅವರು ಆದೇಶಿಸಿದ ನಂತರ ಕ್ರಮಕೈಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 


ಸುದ್ದಿ ಓದಿ