ನಿರೂಪಕಿ ದಿವ್ಯ ಆಲೂರು ಅಭಿನಯ, ಗಾಯನದ "ಕನ್ನಿಕೇರಿ ಹುಡುಗಿ" ವಿಡಿಯೋ ಸಾಂಗ್ ಬಿಡುಗಡೆ
ಬೆಂಗಳೂರು, ನ.02 ಕಳೆದ ಹಲವು ವರ್ಷಗಳಿಂದ ಚಿತ್ರರಂಗ ಹಾಗೂ ಸಾಂಸ್ಕೃತಿಕ ರಂಗದ ಹಲವು ಕಾರ್ಯಕ್ರಮಗಳ ನಿರೂಪಕಿಯಾಗಿರುವ ದಿವ್ಯ ಆಲೂರು "ಕನ್ನಿಕೇರಿ ಹುಡುಗಿ" ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದ್ದಾರೆ.
ಮೂಲ ಜನಪದ ಹಾಡನ್ನು ಇಂದಿನ ಯುವಜನತೆಯ ಮನಸ್ಸಿಗೆ ಹಿಡಿಸುವ ಹಾಗೆ ನಿರ್ಮಿಸಿದ್ದಾರೆ. ಈ ಹಾಡನ್ನು ಅವರೆ ಸ್ವತ ಹಾಡಿ, ಅಭಿನಯಿಸಿರುವುದು ವಿಶೇಷ. ಇತ್ತೀಚೆಗೆ ನಡೆದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ನಾನು ಖ್ಯಾತ ಜಾನಪದ ಗಾಯಕ ಹಾಗೂ ಸಾಹಿತಿ ಆಲೂರು ನಾಗಪ್ಪ ಅವರ ಪುತ್ರಿ. ಮೊದಲಿನಿಂದಲೂ ಗಾಯನದಲ್ಲಿ ಆಸಕ್ತಿ. ಚಿಕ್ಕಂದಿನಲ್ಲಿ ಅಪ್ಪನೊಂದಿಗೆ ಹಾಡುತ್ತಿದ್ದೆ. ಜನಪದದಲ್ಲಿ ಡಿಗ್ರಿ ಸಹ ಮಾಡಿದ್ದೇನೆ. ನಂತರ ನಿರೂಪಣೆಯ ಒತ್ತಡದಿಂದ ಗಾಯನದ ಬಗ್ಗೆ ಗಮನ ನೀಡಲಿಲ್ಲ. ಈ ವಿಷಯವನ್ನು ನನ್ನ ಪತಿ ಆದರ್ಶ್ ಬಳಿ ಹೇಳಿದೆ. ಅವರು ನನ್ನ ತಂದೆಯವರು ಜನಪ್ರಿಯಗೊಳಿಸಿದ "ಕನ್ನಿಕೇರಿ ಹುಡುಗಿ" ಹಾಡನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸೋಣ ಹಾಡು ಎಂದು ಪ್ರೋತ್ಸಾಹಿಸಿದರು. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ ಎಂದರು.
ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದು, ರಾಜಶೇಖರ್ ಛಾಯಾಗ್ರಹಣ ಹಾಗೂ ವಿಶ್ವ ಸಂಕಲನ ಈ ವಿಡಿಯೋ ಸಾಂಗ್ ಗಿದೆ. ಬಿಲಿವ್ ಸಂಸ್ಥೆ ಪ್ರದೀಪ್ ಅವರ ಉಪಕಾರ ಮರೆಯಲಾಗದು. ನನ್ನ ತಂದೆ ಆಲೂರು ನಾಗಪ್ಪ, ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್ ಗೌಡ ಹಾಗೂ ಕನ್ನಡವೇ ಸತ್ಯ ರಂಗಣ್ಣ ಅವರು ಇಲ್ಲಿಗೆ ಆಗಮಿಸಿ, ಶುಭ ಹಾರೈಸಿದರು.
ದಿವ್ಯ ಅವರ ಈ ಪ್ರಯತ್ನಕ್ಕೆ ಆದಿಚುಂಚನಗಿರಿ ಶ್ರೀಗಳು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂತಾದ ಗಣ್ಯರು ಶಭ ಕೋರಿದ್ದಾರೆ.