ನೇಪಾಳ ಸಂಸತ್ ವಿಸರ್ಜನೆಗೆ ಪ್ರಧಾನಿ ಓಲಿ ಶಿಫಾರಸು
ಕಠ್ಮಂಡು, ಡಿ 20: ನೇಪಾಳ ಸಂಸತ್ ಅನ್ನು ವಿಸರ್ಜಿಸಲು ಭಾನುವಾರ ಬೆಳಿಗ್ಗೆ ನಡೆದ ತುರ್ತು ಸಚಿವ ಸಂಪುಟದ ಸಭೆಯಲ್ಲಿ ಪ್ರಧಾನಿ ಕೆ ಪಿ ಶರ್ಮಾ ಓಲಿ ಶಿಫಾರಸ್ಸು ಮಾಡಿದ್ದಾರೆ. ‘ಸಂಸತ್ ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.’ ಎಂದು ಇಂಧನ ಸಚಿವ ಬರ್ಷ್ಮಾನ್ ಪುನ್ ಹೇಳಿಕೆಯನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ವರದಿಗಳಂತೆ, ಶಿಫಾರಸ್ಸನ್ನು ಇದೀಗ ಅಧ್ಯಕ್ಷರಾದ ಬಿದ್ಯಾದೇವಿ ಭಂಡಾರಿ ಅವರ ಒಪ್ಪಿಗೆ ಮತ್ತು ಜಾರಿಗಾಗಿ ಕಳುಹಿಸಲಾಗಿದೆ.
ಪ್ರಧಾನಿ ಓಲಿ ಮತ್ತು ಹಿರಿಯ ನಾಯಕ ಪುಷ್ಪ ಕಮಾಲ್ ಧಹಾಲ್ ನಡುವಿನ ವಿವಾದವು ಸಾಂವಿಧಾನಿಕ ಮಂಡಳಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ಪ್ರಮುಖ ಅಂಶವಾಗಿದೆ.ಮಂಗಳವಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾದ ಹೊಸ ನಿಬಂಧನೆಯಲ್ಲಿ, ಸಾಂವಿಧಾನಿಕ ಮಂಡಳಿಯ ಸಭೆಯಲ್ಲ್ಲಿ ಸ್ಪೀಕರ್ ಮತ್ತು ಪ್ರತಿಪಕ್ಷ ನಾಯಕರ ಉಪಸ್ಥಿತಿ ಅಗತ್ಯವಿಲ್ಲ ಎಂದು ಹೇಳಲಾಗಿದೆ. ದಹಾಲ್ ಅವರು ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲು ಒತ್ತಾಯಿಸಿದ್ದರೆ, ಇದನ್ನು ಪ್ರಧಾನಿ ಓಲಿ ನಿರಾಕರಿಸಿದ್ದಾರೆ. ಈ ನಿರಾಕರಣೆ ಮೂಲಕ ಓಲಿ ಕಠಿಣ ಕ್ರಮಕ್ಕೆ ಮುಂದಾಗಬಹುದೆಂಬ ಊಹಾಪೋಹಗಳು ದಹಾಲ್ ಬಣದಲ್ಲಿ ಎದ್ದಿದ್ದವು.ಗಮನ ಹರಿಸಬಹುದಾದ ಸಂಗತಿ ಎಂದರೆ, ಶನಿವಾರ ಪ್ರಧಾನಿ ಓಲಿ ದಹಾಲ್ ಅವರನ್ನು ಭೇಟಿಯಾಗಿ ಬಿಕ್ಕಟ್ಟು ಶಮನದ ಬಗ್ಗೆ ಚರ್ಚಿಸಿದ್ದರು. ಇಂದಿನ ಕ್ರಮ ಗಮನಿಸಿದರೆ ಈ ಸಭೆಯಿಂದ ಯಾವುದೇ ಫಲಶ್ರುತಿ ದೊರೆತಿಲ್ಲ.