ರಂಭಾಪುರಿ ಮಹಾಪೀಠದಲ್ಲಿ ಸಂಗೀತ ಸೌರಭ
ರಂಭಾಪುರಿ 01: ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಇತ್ತೀಚೆಗೆ ‘ಸಂಗೀತ ಸೌರಭ’ ಕಾರ್ಯಕ್ರಮ ಜರುಗಿತು.
ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಿದ ಈ ಸಂಗೀತ ಸೌರಭವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಗದಗಿನ ಗಾನ ಗಂಧರ್ವ ಪಂ. ರಾಜಗುರು ಗುರುಸ್ವಾಮಿ ಕಲಕೇರಿಯವರು ನಡೆಸಿಕೊಟ್ಟರು.
ಬಿಹಾರಿ ರಾಗ ತ್ರಿತಾಳದೊಂದಿಗೆ ಚನ್ನಬಸವಣ್ಣನವರ ‘ವೀರಶೈವ ಮತ ಸಂಪನ್ನರಾದ ಗುರುಗಣದ ಪಾದೋದಕ.. . . ....ವಚನದೊಂದಿಗೆ ಸಂಗೀತ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಗುರುಸ್ವಾಮಿ ಕಲಕೇರಿಯವರ ಸಂಗೀತವೆಂದರೆ ಅಲ್ಲ್ಲೊಂದು ವೈಶಿಷ್ಠ್ಯತೆ ಇರುತ್ತದೆ. ಗೀತೆಗಳನ್ನು ವಚನಗಳನ್ನು ಪ್ರಸ್ತುತಪಡಿಸುವಾಗ ಅದರ ವಿವರಣೆ ನೀಡುತ್ತ ಹೋಗುತ್ತಾರೆ. ವಚನವನ್ನು ಹಾಡಿದ ನಂತರದಲ್ಲಿ ತಮ್ಮದೇ ರಚನೆಗಳಾದ ‘ ಜಗಜನರು ಗುರುಸ್ಥಲದ ಕರುಳರು’ ಗೀತೆಯನ್ನು ಕಾಫಿ ರಾಗದಲ್ಲಿ ಕವಾಲಿ ತಾಳದೊಂದಿಗೆ, ‘ಶತಮಾನ ಯುಗಮಾನ ಉರುಳಿದಾಗ ಅನಂತ’ ಗೀತೆಯನ್ನು ದೀಪಚಾರಿ ತಾಳದೊಂದಿಗೆ ನಾರಾಯಣಿ ರಾಗದಲ್ಲಿ ಹಾಡಿದರು. ಇನ್ನೊಂದು ಜನಪ್ರಿಯ ಗೀತೆ ‘ಸನ್ನಿಧಿಯ ನಾ ಕಂಡೆ ಮಹಾ ಸನ್ನಿಧಾನವ ನಾಕಂಡೆ’ ಹಾಡನ್ನು ಕಮಾಲ ರಾಗದಲ್ಲಿ ದಾದರಾ ತಾಳದಲ್ಲಿ ಪ್ರಸ್ತುತ ಪಡಿಸಿದರು. ಒಂದು ಘಂಟೆಗೂ ಹೆಚ್ಚು ಕಾಲ ತಮ್ಮ ಕಂಠ ಸಿರಿಯೊಂದಿಗೆ ಶ್ರೋತೃಗಳನ್ನು ಸಂಗೀತ ಲೋಕದಲ್ಲಿ ತೇಲಾಡುವಂತೆ ಮಾಡಿದರು. ಇವರ ಸಂಗೀತಕ್ಕೆ ಗದಗಿನ ಖ್ಯಾತ ತಬಲಾ ವಾದಕರಾದ ಶರಣಕುಮಾರ ಧುತ್ತರಗಿ ತಬಲಾ ಸಾಥ ನೀಡಿದರು. ಗವಾಯಿಗಳಾದ ಗುರುಲಿಂಗಯ್ಯ ಹಿತ್ತಲಶಿರೂರ ಹಾರ್ಮೊನಿಯಂ ಸಾಥ ನೀಡಿದರು.
ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಸೇರಿದಂತೆ ಶಿರಕೋಳ, ಸುಳ್ಳ, ಮಳಲಿ, ಎಸಳೂರು, ಹರಪನಹಳ್ಳಿ, ಕಲಾದಗಿ, ಭೇರುಗಂಡಿ, ಚನ್ನಗಿರಿ, ಅಮ್ಮಿನಭಾವಿ, ಹಂಪಿ ಸಾವಿರದೇವರ ಮಠ, ಶ್ರೀನಿವಾಸ ಸರಡಗಿ ಮಠಗಳ ಶಿವಾಚಾರ್ಯರು ಸಂಗೀತ ಸೌರಭ ಕಾರ್ಯಕ್ರಮವನ್ನು ಕೇಳಿ ಆನಂದಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.