ನಕಲಿ ಎನ್ ಕೌಂಟರ್ ನಲ್ಲಿ ಮೂವರು ಕಾರ್ಮಿಕರ ಹತ್ಯೆ: ಮೇಜರ್ ತಪ್ಪಿತಸ್ಥ, ವಿಚಾರಣೆಗೆ ಸಮ್ಮತಿ
ಕಾಶ್ಮೀರ,
ಡಿಸೆಂಬರ್.25: ಈ ವರ್ಷದ ಜುಲೈ ತಿಂಗಳಲ್ಲಿ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ
ಪಡೆಗಳು ಭಯೋತ್ಪಾದಕರು ಎಂದು ಭಾವಿಸಿ ರಜೌರಿಯಲ್ಲಿ ಮೂವರು ಕಾರ್ಮಿಕರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ
ಮೇಜರ್ ಶ್ರೇಣಿಯ ಸೇನಾಧಿಕಾರಿಯೊಬ್ಬರು ಅಪರಾಧಿ ಎಂದು ಕಂಡುಬಂದಿದೆ
16 ವರ್ಷದ ಬಾಲಕ ಸೇರಿ ಈ ಮೂವರು ಕೆಲಸ ಹುಡುಕಿಕೊಂಡು ತಮ್ಮ ಊರಾದ ರಜೌರಿಯಿಂದ ಕಣಿವೆಗೆ ಹೋಗಿದ್ದರು. ಜುಲೈ 18 ರ ಮುಂಜಾನೆ ಶೋಪಿಯಾನ್ ಜಿಲ್ಲೆಯ ಅಮ್ಶಿಪೋರಾ ಎಂಬ ಹಳ್ಳಿಯಲ್ಲಿ ಅವರನ್ನು ಭದ್ರತಾ ಪಡೆ ಹತ್ಯೆ ಮಾಡಿತ್ತು.
"ಅಫ್ಸಾ 1990 ರ ಅಡಿಯಲ್ಲಿ ನೀಡಲಾಗಿರುವ ಅಧಿಕಾರಗಳನ್ನು ಭದ್ರತಾ ಪಡೆ ಮೀರಿದೆ" ಮತ್ತು ಸುಪ್ರೀಂ ಕೋರ್ಟ್ ಅನುಮೋದಿಸಿದ "ಸೈನ್ಯದ ಮುಖ್ಯಸ್ಥರು (ಸಿಒಎಎಸ್) ಮಾಡಬಹುದಾದ ಮತ್ತು ಮಾಡಬಾರದ" ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸೆಪ್ಟೆಂಬರ್ನಲ್ಲಿ ವಿಚಾರಣಾ ನ್ಯಾಯಾಲಯ ಹೇಳಿತ್ತು.
ಕಳೆದ ವಾರ ವಿಚಾರಣೆ ಪೂರ್ಣಗೊಂಡಿತ್ತು. ಮೇಜರ್ ಅನ್ನು ವಿವಿಧ ವಿಭಾಗಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಅದು ತೀರ್ಪು ನೀಡಿದೆ.
ಸಾಕ್ಷ್ಯಾಧಾರಗಳ ಸಾರಾಂಶದ ಶಿಫಾರಸುಗಳನ್ನು ಉತ್ತರ ಕಮಾಂಡ್ನ ಜಿಒಸಿ-ಇನ್-ಸಿ, ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರಿಗೆ ಕಳುಹಿಸಲಾಗಿದೆ. ಪ್ರಕ್ರಿಯೆಯ ಮುಂದಿನ ಹಂತವು ನ್ಯಾಯಾಲಯದ ವಿಚಾರಣೆಯನ್ನು ಅವಲಂಬಿಸಿದೆ.
“‘ ಸಾಕ್ಷ್ಯಗಳ ಸಾರಾಂಶ ’ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಪ್ರಕ್ರಿಯೆಗೆ ಮುಂದುವರಿಯಲು ಕಾನೂನು ಸಲಹೆಗಾರರೊಂದಿಗೆ ಸಮಾಲೋಚಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಜುಲೈ 18 ರ ಮುಂಜಾನೆ ಅಮ್ಶಿಪೋರಾದಲ್ಲಿ ಘಟನೆ ನಡೆದಿತ್ತು. 62 ರಾಷ್ಟ್ರೀಯ ರೈಫಲ್ಸ್ ನ ಮೇಜರ್ ಮತ್ತು ಇಬ್ಬರು ಸೈನಿಕರು ಮೊದಲು ಎನ್ಕೌಂಟರ್ ಆರಂಭಿಸಿದರು. ಮತ್ತು ನಂತರ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ತಂಡಗಳು ಅವರೊಂದಿಗೆ ಸೇರಿಕೊಂಡವು.
ಜುಲೈ 19 ರಂದು, 12 ಸೆಕ್ಟರ್ ಆರ್ ಆರ್ ಕಮಾಂಡರ್ ಸುದ್ದಿಗೋಷ್ಠಿ ನಡೆಸಿ, ಎನ್ ಕೌಂಟರ್ ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು. ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ 62 ಆರ್ ಆರ್ ಘಟಕಕ್ಕೆ "ನಿರ್ದಿಷ್ಟ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಅಮ್ಶಿಪೋರಾದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ತಿಳಿಸಿದ್ದರು.
ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲಾಯಿತು, ಬಳಿಕ ಗುಂಡಿನ ಚಕಮಕಿ ನಡೆಯಿತು. ಉಗ್ರರ ಅಡಗುತಾಣದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಐಇಡಿ ವಸ್ತುಗಳು ಲಭಿಸಿದ್ದವು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.