ಪೆಟ್ರೋಲ್ ಸುರಿದು ಯುವತಿ ಕೊಲೆ: ಮಹಿಳಾ ಸಂಘಟನೆಯಿಂದ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ 07: ಮರ್ಯಾದೆ ಹೆಸರಿನ ಮತ್ತು ಕೋಮುದ್ವೇಷ ರಾಜಕಾರಣಕ್ಕೆ ಬಲಿಯಾದ ಮತ್ತು ಅತ್ಯಾಚಾರ ಪ್ರಯತ್ನಕ್ಕೆ ಪ್ರತಿರೋಧ ಒಡ್ಡಿದ ಯಾದಗಿರಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಅಮಾನವೀಯ ಪ್ರಕರಣಗಳ ವಿರುದ್ಧ ಪ್ಟಣದ ಬಸವೇಶ್ವರ ಪುತ್ಥಳಿ ಬಳಿ ಗುರುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿಯಿಂದ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಿ.ಸರೋಜ ಮಾತನಾಡಿ ಬೆಳಗಾಂನಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿಸಿದನೆಂಬ ಕಾರಣಕ್ಕೆ ಶ್ರೀ ರಾಮಸೇನೆ ಹಿಂದೂಸ್ಥಾನ್ ಸಂಘಟನೆ ಕಾರ್ಯಕರ್ತರು, ಅವರೊಂದಿಗೆ ಯುವತಿಯ ತಂದೆ ಸಹ ಕೈಜೋಡಿಸುವ ಮೂಲಕ ಮರ್ಯಾದೆ ಹೆಸರಿನಲ್ಲಿ ಹುಡುಗನನ್ನು ಕೊಲೆ ಮಾಡಲಾಗಿದೆ. ಇದು ಖಂಡನೀಯ ವಿಚಾರವಾಗಿದೆ, ನಮ್ಮ ಸಂವಿಧಾನ ದೇಶದ ಎಲ್ಲ ಜನರಿಗೆ ಅನ್ವಯವಾಗುವಂತಹ ಮೂಲಭೂತ ಹಕ್ಕುಗಳನ್ನು ಮತ್ತು ಅದನ್ನು ಪಾಲಿಸಲು ಅಗತ್ಯವಾದ ಕರ್ತವ್ಯಗಳನ್ನು ನೀಡಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಯುವಜನರು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳ ಬೇಕಾದರೆ ಜಾತಿ, ಧರ್ಮಗಳ ಹೆಸರಿನಲ್ಲಿ ನೈತಿಕ ಪೋಲಿಸ್ಗಿರಿಯ ದೌರ್ಜನ್ಯ ಮತ್ತು ಮರ್ಯಾದ ಹೆಸರಿನಲ್ಲಿ ಯುವಕ ಯುವತಿಯರ ಕೊಲೆಗಳನ್ನು ಕಾಣುತ್ತೇವೆ. ಇನ್ನೊಂದು ಕಡೆಯಲ್ಲಿ ಆಳುವ ಸರ್ಕಾರಗಳು ಯುವ ಜನರ ಅಯ್ಕೆಯ ಹಕ್ಕನ್ನು ಖಾತ್ರಿಗೊಳಿಸುವ ಬದಲಾಗಿ ಅಯ್ಕೆಯ ಹಕ್ಕನ್ನು ಮೊಟಕುಗೊಳಿಸುವ ಕಾನೂನು ತರಲು ಮುಂದಾಗಿದೆ. ಇಂತಹ ಸರ್ಕಾರದ ನೀತಿಗಳಿಂದಾಗಿ ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿ ತಾನೇ ತಾನಾಗಿ ಲಭಿಸಬೇಕಾದ ಆಯ್ಕೆಯ ಹಕ್ಕಿನಿಂದ ವಂಚಿತರಾಗುತ್ತಿದ್ದೇವೆ. ಈ ವಂಚಿತರ ಗುಂಪಿನಲ್ಲಿ ಮೊದಲ ಸಾಲಿನಲ್ಲಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಬಲಿಯಾಗುತ್ತಾರೆ. ಯುವ ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಕೇಂದ್ರ ರಾಜ್ಯ ಸರ್ಕಾರಗಳ ಕರ್ತವ್ಯ. ಇಂತಹ ಕೊಲೆಗಳನ್ನು ತಡೆಗಟ್ಟಲು ರಾಜ್ಯದಲ್ಲಿ ನಡೆದಿರುವ ಮರ್ಯಾದೆಯ ಹೆಸರಿನ ಹತ್ಯೆಗಳ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅದನ್ನು ನಿಷೇಧಿಸುವ ಕಾನೂನು ತರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.
ಸಂವಿಧಾನ ಅಂತರ್ರ್ಧರ್ಮೀಯ, ಅಂರ್ತಜಾತಿಯ ವಿವಾಹಿತರಿಗೆ ಸರಿಯಾದ ರಕ್ಷಣೆ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು. ಮತ್ತು ವಿಶೇಷ ವಿವಾಹ ಕಾಯ್ದೆಯನ್ನು ಬಲ ಪಡಿಸಬೇಕು. ಸಂವಿಧಾನ ಬದ್ಧ ಆಯ್ಕೆ ಹಕ್ಕುಗಳ ಕುರಿತು ಪ್ರಚಾರ ನೀಡಬೇಕು. ಮಹಿಳೆಯರಿಗೆ, ದಲಿತರಿಗೆ ಅಲ್ಪ ಸಂಖ್ಯಾತರಿಗೆ ಘನತೆಯ ಬದುಕನ್ನು ಖಾತ್ರಿಗೊಳಿಸಬೇಕು. ಬೆಳಗಾಂನಲ್ಲಿ ಯುವಕನನ್ನು ಕೊಂದ ಅರೋಪಿಗಳನನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.