ಬಹುಭಾಷಾ ನಟಿ ಚಿತ್ರಾ ನಿಧನ
ಚೆನ್ನೈ/ಬೆಂಗಳೂರು, ಆಗಸ್ಟ್ 21 ದಕ್ಷಿಣ ಭಾರತದ ಜನಪ್ರಿಯ ನಟಿ ಚಿತ್ರಾ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಚೆನ್ನೈನ ಸಾಲಿಗ್ರಾಮಂನಲ್ಲಿ ವಾಸಿಸುತ್ತಿದ್ದರ ಅವರು. ಇಂದು ಮುಂಜಾನೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಚಿತ್ರಾ ಅಕಾಲಿಕ ನಿಧನಕ್ಕೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಹಲವಾರು ನಟ, ನಟಿಯರು ಕಂಬನಿ ಮಿಡಿದಿದ್ದಾರೆ.
ಮೂಲತಃ ಕೇರಳದವರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾಗಳು ಹಾಗೂ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ಕನ್ನಡದ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್ ವಿಜಯ್’ ಸೇರಿದಂತೆ ಕೆಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು.
ಕಮಲ್ ಹಾಸನ್ ಅಭಿನಯದ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಅವರು ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಎಣ್ಣೆ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸಿ ಜನಪ್ರಿಯಾಗಿದ್ದರಿಂದ ನಲ್ಲೆನೈ’ ಚಿತ್ರಾ ಎಂದು ಕೂಡ ಕರೆಯಲಾಗುತ್ತಿತ್ತು. ಮಲಯಾಳಂನಲ್ಲಿ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಅಟ್ಟಕಳಶಂ’. ಆ ಚಿತ್ರದಲ್ಲಿ ಮೋಹನ್ ಲಾಲ್ ಮತ್ತು ಪ್ರೇಮ್ ನಜಿರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಚಿತ್ರಾಗೆ ಸಿಕ್ಕಿತ್ತು. ಮಾಲಿವುಡ್ನ ಮತ್ತೋರ್ವ ಸ್ಟಾರ್ ನಟ ಮಮ್ಮೂಟ್ಟಿ ಜೊತೆಗೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ವಿಜಯ್ ರಾಘವನ್ ಜೊತೆ 1990ರಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಸಿನಿಮಾಗಳಿಂದ ದೂರು ಉಳಿದು ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಿದರು. ಇದೀಗ ಪತಿ ಮತ್ತು ಮಗಳು ಮಹಾಲಕ್ಷ್ಮೀ ಅವರನ್ನು ಚಿತ್ರಾ ಅಗಲಿದ್ದಾರೆ.