ತಾಳಿಕೋಟಿ

ಹೊಸ ಇತಿಹಾಸ ಬರೆಯಲಿದೆ ಮುದ್ದೇಬಿಹಾಳ ಮತಕ್ಷೇತ್ರ?

ಹೊಸ ಇತಿಹಾಸ ಬರೆಯಲಿದೆ ಮುದ್ದೇಬಿಹಾಳ ಮತಕ್ಷೇತ್ರ?

ಸಂಜಯಸಿಂಗ್ ರಜಪೂತ

ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರ ವಿಜಯಪುರ ಜಿಲ್ಲೆಯ 8 ವಿಧಾನ ಸಭೆ ಕ್ಷೇತ್ರಗಳಲ್ಲಿ ಈ ಬಾರಿ ಅತಿ ಹೆಚ್ಚು ಕುತೂಹಲ ಕೆರಳಿಸಿದ ಹಾಗೂ ಭಾರಿ ಜಿದ್ದಾ ಜಿದ್ದಿನ ಕ್ಷೇತ್ರವಾಗಿದೆ ಎಂದೆನಿಸುತ್ತಿದೆ.

2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಕಾಂಗ್ರೆಸ್ನ ಹಿರಿಯ ರಾಜಕಾರಣಿ ಅಪ್ಪಾಜಿ ನಾಡಗೌಡರನ್ನು ಪರಾಭವಗೊಳಿಸಿ ಪಕ್ಷಕ್ಕೆ ಐತಿಹಾಸಿಕವಾದ ಗೆಲುವು ತಂದುಕೊಟ್ಟರು. ಈ ಬಾರಿ ಮತ್ತೇ ಈ ಇಬ್ಬರು ದಿಗ್ಗಜ ನಾಯಕರು ಅಖಾಡಾದಲ್ಲಿ ಮುಖಾಮುಖಿಯಾಗಲು ಸರ್ವಸನ್ನದ್ಧರಾಗಿದ್ದಾರೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗಿವೆ. ಯಾರ ಕೈ ಮೇಲಾಗುತ್ತದೆ ಎಂದು ಈಗಲೇ ಹೇಳಲು ಅಸಾಧ್ಯವಾಗಿದೆಯಾದರೂ ಇಲ್ಲಿಯವರೆಗಿನ ಸಮೀಕ್ಷೆಗಳು ನಡಹಳ್ಳಿ ಅವರು ಸೇಫ್ ಎಂದು ಹೇಳುತ್ತಿವೆ.

ಜೆಡಿಎಸ್ನಿಂದ ಡಾ. ಸಿ.ಎಸ್. ಸೋಲಾಪೂರ ಅಭ್ಯರ್ಥಿ  ಎಂದು ಈಗಾಗಲೇ ಘೋಷಣೆಯಾಗಿದೆ. ಆದರೆ ಜೆಡಿಎಸ್ ತ್ರಿಕೋನ ಸ್ಪರ್ಧೆಯನ್ನು ನೀಡುವಷ್ಟು ಸಶಕ್ತವಾಗಿಲ್ಲ. ಸಂಘಟನೆ ದುರ್ಬಲವಾಗಿರುವದರಿಂದ ಇಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯ ನೇರ ಸ್ಪರ್ಧೆಯ ಸಾಧ್ಯತೆಗಳೇ ಹೆಚ್ಚಾಗಿವೆ.

ಕಾಂಗ್ರೆಸ್ನ ಮಾಜಿ ಸಚಿವ ಅಪ್ಪಾಜಿ ನಾಡಗೌಡರು ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿ ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆಂದು ಅವರ ದಿಟ್ಟ ಮಾತುಗಳಿಂದ ಸ್ಪಷ್ಟವಾಗುತ್ತಿದೆ ತಮ್ಮ 40 ವರ್ಷಗಳ ರಾಜಕೀಯ ಅನುಭವವನ್ನು ಒರೆಗೆ ಹಚ್ಚುತ್ತಿದ್ದು ಬಿಜೆಪಿ ಕೆಲವು ಅತೃಪ್ತ ಮುಖಂಡರು ನಡಹಳ್ಳಿಯವರೊಂದಿಗಿನ ತೀವ್ರ ಭಿನ್ನಾಭಿಪ್ರಾಯದಿಂದಾಗಿ ಬಹಿರಂಗವಾಗಿ ಅವರನ್ನು ಬೆಂಬಲಿಸುತ್ತಿರುವುದು ಇದಕ್ಕಿಂತಲೂ ಮುಖ್ಯವಾಗಿ ನಡಹಳ್ಳಿ ಸಹೋದರ ಶಾಂತಗೌಡ ನಡಹಳ್ಳಿ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನಾಡಗೌಡರಿಗೆ ಆನೆಬಲ ಬಂದಂತಾಗಿದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಪೂರಕವಾಗಿರುವ ವಾತಾವರಣವು ಅವರಿಗೆ ಪ್ಲಸ್ ಆಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿವೆ.

ಇನ್ನೊಂದು ಕಡೆ ಎ.ಎಸ್. ಪಾಟೀಲ (ನಡಹಳ್ಳಿ) ಚುನಾವಣಾ ತಂತ್ರಗಾರಿಕೆಗೆ ನಿಸ್ಸೀಮನಾದ ವೃತ್ತಿಪರ ರಾಜಕಾರಣಿ. ಎಂಥಹ ಪ್ರತಿಕೂಲ ಪರಿಸ್ಥಿಯಿದ್ದರೂ ಅದನ್ನು ಸಮರ್ಥವಾಗಿ ಎದುರಿಸಿ ದಡ ಸೇರಬಹುದಾದ ಚಾಣಾಕ್ಷ ನಾಯಕ ಇದು ಅವರ ರಾಜಕಾರಣ ಟ್ರ್ಯಾಕ್ ರಿಕಾರ್ಡ್  ಹೇಳುತ್ತದೆ ಸೋಲನ್ನು ಒಪ್ಪಿಕೊಳ್ಳದ ಜಾಯಮಾನದವರಲ್ಲ. ಪಾದರಸದಂಥಹ ರಾಜಕೀಯ ಕ್ರಿಯಾಶೀಲತೆ, ದೂರದೃಷ್ಠಿ ಸಂದರ್ಭಕ್ಕೆ ಅನುಸಾರವಾಗಿ ತೆಗೆದುಕೊಳ್ಳುವ ಸರಿಯಾದ ನಿರ್ಣಯಗಳು, ಅವರನ್ನು ರಾಜಕೀಯವಾಗಿ ಇಲ್ಲಿಯತನಕ ತಂದು ನಿಲ್ಲಿಸಿವೆ. ತನಗೆ ಸಿಕ್ಕ ಈ 5 ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ ಆತ್ಮವಿಶ್ವಾಸದ ಜೊತೆಗೆ ತಾನು ನಿರಂತರವಾಗಿ ಮಾಡುತ್ತಾ ಬಂದಿರುವ ಜನಸೇವಾ ಕಾರ್ಯಗಳು ಅದರಲ್ಲೂ ಕರೋನಾ ಸಂದರ್ಭದಲ್ಲಿ ತೋರಿದ ಜನಪರ ಕಾಳಜಿ, ತನ್ನ ಕೈ ಬಿಡಲಾರದೆಂಬ ವಿಶ್ವಾಸ ಅವರಲ್ಲಿದೆ ಎಂದೆನಿಸುತ್ತಿದೆ.

ಅವರ ಕೆಲಸಗಳಿಂದ ಮತದಾರರು ಫುಲ್ಖುಷ್ ಆಗಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಕೆಲವು ಮುಖಂಡರಲ್ಲಿರುವ ಅಸಮಾಧಾನ ಅವರಿಗೆ ಮೈನಸ್ ಆಗಲಿದೆ ಆದರೂ ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದಾರೆಂದು ಪಕ್ಷದ ಮೂಲಗಳು ಹೇಳುತ್ತವೆ.

ಅದೇನೆ ಇರಲಿ ಈ ಬಾರಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಭಾರಿ ಬಿಗ್ ಫೈಟ್ ಆಗುವುದಂತೂ ಖಚಿತ. ಇಲ್ಲಿ ಒಂದು ಥರಾ 20-20 ಕ್ರಿಕೆಟ್ ಮ್ಯಾಚ್ನಂತೆ ಚುನಾವಣೆ ಆಗುವ ಸಾಧ್ಯತೆಗಳಿವೆ. ಈ ಚುನಾವಣೆ ಕೇವಲ ಒಬ್ಬರ ಫಲಿತಾಂಶವನ್ನು ಮಾತ್ರ ನೀಡದೆ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಬಹುದಾಗಿದೆ 

ಸುದ್ದಿ ಓದಿ