ಮುದ್ದೇಬಿಹಾಳ ಜೆಡಿಎಸ್ ಅಭ್ಯರ್ಥಿ ಡಾ.ಸೋಲಾಪೂರ ಟಿಕೆಟ್ ಘೋಷಣೆ
ತಾಳಿಕೋಟಿ: ಮುಂಬರುವ ರಾಜ್ಯ ವಿಧಾನಸಭಾ 2023ರ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾ ದಳದ ಅಭ್ಯರ್ಥಿಯಾಗಿ ಡಾ. ಸಿ.ಎಸ್. ಸೋಲಾಪೂರಗೆ ಟಿಕೆಟ್ ಘೋಷಣೆಯಾಗಿದೆ.
ಪಕ್ಷವು ತನ್ನ 93 ಅಭ್ಯರ್ಥಿಗಳ ಟಿಕೆಟ್ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಡಾ. ಸೋಲಾಪೂರ ಇವರ ಹೆಸರು ಕೂಡ ಇದೆ. ಈ ಪಟ್ಟಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಅವರು ಸಹಿ ಹಾಕಿ ಅನುಮತಿ ನೀಡಿದ್ದಾರೆ, ಇದರಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಕ್ಕಿಂತ ಮೊದಲೇ ಪಟ್ಟಿ ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದೆ. ಮುದ್ದೇಬಿಹಾಳದಿಂದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ದಿಂದ ಮಾಜಿ ಸಚಿವ ಅಪ್ಪಾಜಿ ನಾಡಗೌಡ ಹಾಗೂ ಬಿಜೆಪಿಯಿಂದ ಹಾಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರ ಹೆಸರುಗಳು ಬಹುತೇಕ ಅಂತಿಮಗೊಳ್ಳಲಿವೆ ಎಂದು ಮೂಲಗಳು ತಿಳಿಸುತ್ತಿವೆ. ಎರಡೂ ಪಕ್ಷದಲ್ಲೂ ಕೆಲವು ಹೊಸಬರು ಟಿಕೆಟ್ ಕೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಡಾ. ಸಿ.ಎಸ್. ಸೋಲಾಪೂರ ಅವರು ಪಕ್ಷವನ್ನು ಕ್ಷೇತ್ರದಲ್ಲಿ ತಳಮಟ್ಟದಿಂದ ಸಂಘಟಿಸಲು ಈಗಾಗಲೇ ಸಾಕಷ್ಟು ಶ್ರಮಿಸುತ್ತಿದ್ದಾರೆ. ಪಕ್ಷ ಅವರನ್ನು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿಯೂ ಮಾಡಿದೆ.
ಈ ಭಾಗದ ಪ್ರಬಲ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಇವರು ಸೇರಿದ್ದು ಈ ಸಮುದಾಯದ ಮತದಾರರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಅವರು ಈಗಾಗಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು ಈ ಬಾರಿ ಯಾವ ಕಡೆಗೆ ವಾಲುತ್ತಾರೆಂಬುದು ಈ ಕ್ಷೇತ್ರದ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಲಿದೆ.