ಸಾವಿನ ಹೊಸ್ತಿಲ ಸಂವೇದನೆಗಳ ಅನಾವರಣ "ಮರಣ "ಮೃದಂಗ"
ಇತ್ತೀಚೆಗೆ ರಂಗಸಂಪದ ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ರಂಗಸಂಪದ ಅಧ್ಯಕ್ಷರ ಅಹ್ವಾನದ ಮೇರೆಗೆ ಮ್ರರಣ ಮೃದಂಗ ನಾಟಕ ನೋಡಲು ಹೋದೆ.
ರಾಜೇಂದ್ರ ಕಾರಂತರ ಮರಣಮೃದಂಗ ನಾಟಕವನ್ನು ರಂಗಸಂಪದ ಹವ್ಯಾಸಿ ತಂಡವು ನಗರದ ಲೋಕಮಾನ್ಯ ಮಂದಿರದಲ್ಲಿ ಯಶಸ್ವಿಯಾಗಿ ಪ್ರಯೋಗಿಸಿತು.
ಈ ನಾಟಕದ ನಿರ್ದೇಶನ ಡಾ.ಅರವಿಂದ ಕುಲಕರ್ಣಿ ಅವರದು ಇವರು ಪ್ರತಿಬಾವಂತ ರಂಗನಿರ್ದೇಶಕ ಹಾಗೂ ನಾಟಕಕಾರರು. 50ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಈ ವರೆಗೆ ನಾಲ್ಕು ನಾಟಕಗಳನ್ನು ನಿರ್ದೇ ಶಿಸಿದ್ದು, ನಾಡಿನ ವಿವಿದಡೆ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದಿವೆ. ಇತ್ತೀಚೆಗೆ ಇವರಿಗೆ ಧಾರವಾಡದ ಸ್ನೇಹ ಪ್ರತಿಷ್ಠಾನವು ಇವರ ರಂಗಭೂಮಿಯ ಜೀವಮಾನ ಸಾಧನೆಗಾಗಿ "ಆಜೀವಮಾನ ಸಾಧನಾ ರಂಗ ಪ್ರಶಸ್ತಿ"ಯನ್ನು ನೀಡಿ ಗೌರವಿಸಿದೆ.
ನಾಟಕ ಪ್ರಾರಂಭವಾಗುವದೇ ಎರಡು ಮುಖ್ಯ ಪಾತ್ರಗಳಾದ ಒಬ್ಬ ಕ್ಯಾನ್ಸರ್ ರೋಗಿ ಮಾಜಿ ಸಿ.ಎಂ ನರಸಿಂಹರಾವ್ ಹಾಗೂ ಅವನ ಬಾಲ್ಯ ಮಿತ್ರ ಬರಮ್ಯಾನಿಂದ, ಈ ಎರಡು ಪಾತ್ರಗಳು ಪ್ರಾರಂಭದಿಂದ ಅಂತ್ಯದವರೆಗೂ ಸ್ಟೇಜಿನ ಮೇಲೆ ರಾರಾಜಿಸುತ್ತವೆ.
ಸಾವು ಮನೆ ಬಾಗಿಲನ್ನು ಬಡಿದು ಮನುಷ್ಯ ತಾನೆಷ್ಟು ಅಸಹಾಯಕ ಎಂಬ ಸತ್ಯದ ಅರಿವಾಗುವ ದುರಹಂಕಾರಿ ಹಾಗೂ ರಾಜಕೀಯ ನಾಯಕನ ಸಾವಿನ ಹೊಸ್ತಿಲಿನ ಸಂವೇದನೆಗಳ ಅನಾವರಣವೆ "ಮರಣಮೃದಂಗ" ನಾಟಕದ ಕಥಾವಸ್ತು.
ವ್ಯಕ್ತಿ ಬದುಕಿದ ಬದುಕಿನ ಕ್ಷಣಗಳನ್ನು, ಸಂಬಂಧಗಳನ್ನು, ಸಮಾಜದ ಕಷ್ಟ-ಸುಖಗಳನ್ನು ಬಿಡಿಸಿ ಹೇಳಬೇಕೆಂಬ ತುಡಿದ ಪ್ರತಿ ಪಾತ್ರದ ಅಭಿನಯದಲ್ಲಿ ಎದ್ದು ಕಾಣುತ್ತಿತ್ತು. ಚುರುಕು ಸಂಭಾಷಣೆ, ಆಳವಾದ ಅರ್ಥ ಬರಮ್ಯಾನ ತಿಳಿಹಾಸ್ಯ ತುಂಟತನ ಪ್ರೇಕ್ಷಕರಿಗೆ ಮುದನೀಡಿತು.
ಸಾವಿನ ಅಂಚಿನಲ್ಲಿರುವ ನರಸಿಂಹರಾವ್ ವ್ಹೀಲ್ ಚೇರ್ ಮೇಲೆ ಕುಳಿತು ಬರಮ್ಯಾನಿಗೆ ಬೈಯುತ್ತ ಸಾವಿನ ಭಯ ನಿನಗೇನು ಗೊತ್ತು ? ಎಂಟು ತಿಂಗಳಾಯ್ತು ನಿದ್ದೆ ಮಾಡಿ.. ದೇಹದೊಳಗೆಲ್ಲ ಹುಳು ಕೊರಿತರೋ ಹಾಗೆ ಅನ್ನಿಸುತ್ತೆ. ಯಾರೋ ಏಕದಂ ಕಪ್ಪು ಮುಸುಗನ್ನು ಮುಖಕ್ಕೆ ಹಾಕಿ ಕುತ್ತಿಗೆಗೆ ನೇಣು ಹಗ್ಗ ಹಾಕ್ತರೋ ಹಾಗೆ ಅನಿಸುತ್ತೆ. ಯಾರೋ.. ಪ್ರತಿ ಕ್ಷಣ ಕಣ್ಣಿನ ರೆಪ್ಪೆ ಆಚೆ ನಿಂತು ನಾನು ಕಣ್ಣು ಮುಚ್ಚೋದನ್ನೆ ಕಾಯ್ತಿರೋ ಹಾಗೆ ಅನಿಸುತ್ತೆ... ಹಾಗೂ .. ಹೀಗೂ.. ಕಣ್ಣು ಮುಚ್ಚಿದ್ರೆ... ಎಂದೆನ್ನುವಾಗ, ಪ್ರೇಕ್ಷಕರಿಗೆ ನರಸಿಂಹರಾವ್ ಮೇಲೆ ಪಾಪ ಎನಿಸಿದ್ದು ನಿಜ. ಅದು ಮನುಷ್ಯತ್ವದ ಸಹಜ ಸ್ವಭಾವ. ಆದರೆ ಅಧಿಕಾರದ ಲಲಾಸೆಗೆ ಅವನಿಂದ ಅನ್ಯಾಯಕ್ಕೆ ಒಳಗಾದವರು, ಕೊಲೆಯಾದವರನ್ನು ಬರಮ್ಯಾ ಪಾತ್ರದಾರಿ ಸಾರಿದಾಗ, ಕುಳಿತ ಪ್ರೇಕ್ಷಕರಿಗೆ ಕೋಪವು ಬಂದದ್ದು ಅಷ್ಟೇ ಸತ್ಯ. ನರಸಿಂಹರಾವ್ ಪಾತ್ರಧಾರಿ ಅರವಿಂದ ಪಾಟೀಲ ಒಬ್ಬ ಪ್ರತಿಭಾನ್ವಿತ ಕಲಾವಿದ ಅಭಿನಯ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇವರ ಮನೋಜ್ಞ ಅಭಿನಯ ಪರಿಪಕ್ವತೆಗೆ ಸಾಕ್ಷಿಯಾಯಿತು.
ತ್ಯಾಗ, ವಿಶ್ವಾಸ ಪ್ರಾಮಾಣಿಕತೆ ಪದಗಳು ಅರ್ಥವನ್ನು ಕಳೆದುಕೊಂಡಿರುವ ಈ ಕಾಲಘಟ್ಟದಲ್ಲಿ ಸ್ವಾರ್ಥ ಬದುಕು ಇದು ದಿವಾಳಿತನವಲ್ಲದೇ ಮತ್ತೇನು ? ಮರಣ ಶೈಯ್ಯೆಯ ಮೇಲೆ ಮಲಗಿ ಸಾವು ಈಗಲೋ ಆಗಲೋ ಎಂಬತಿರುವಾಗ ಬದುಕಲು ಹೋರಾಡುವ ರಾಜಕೀಯ ವ್ಯಕ್ತಿಯ ಹೋರಾಟದ ರೋಚಕ ಕತೆ, ಸಾವಿನ ಭಯದಿಂದ ಬದಲಾಗುವ ಸಂಬಂಧಗಳು ಬೇರೊಂದು ಲೋಕಕ್ಕೆ ಕೊಂಡಯ್ಯುತ್ತ ನಾಟಕ ಗಂಭೀರವಾಗುತ್ತದೆ.
ಆಗಾಗ ತನ್ನ ಕುಹಕ ಚುಚ್ಚು ನುಡಿಗಳಿಂದ ನರಸಿಂಹರಾವ್ನಿಗೆ ಉಗಿಯುತ್ತಿದ್ದ ಬರಮ್ಯಾನ ಪಾತ್ರ ನಾಟಕದುದ್ದಕ್ಕೂ ಪ್ರೇಕ್ಷರಿಗೆ ಕಚಗುಳಿ ಇಟ್ಟಿತು. ಬರಮ್ಯಾನ ಪಾತ್ರದಾರಿ ಪ್ರಸಾದ ಕಾರಜೋಳ ಅವರ ಸಹಜ ಅಭಿನಯ ಅವರಲ್ಲಿರುವ ನಟನ ಪರಿಪಕ್ವತೆಯನ್ನು ಸಾರುತ್ತಿತ್ತು.
ನರಸಿಂಹರಾವ್ನ ಮಗ ಸಿ.ಎಂ ಪಾತ್ರದಾರಿ ತಂದೆಗೆ ಯಾಕೆ ಹೇಳಿ ಕಳಿಸಿದ್ದು ? ಅಸೆಂಬ್ಲಿ ನಡೀತಿದೆ ಎಂದಾಗ ಅಧಿಕಾರದ ಗತ್ತಿನಿಂದ ತಾಯಿ, ತಂದೆ ಎಂಬುದನ್ನೆ ಮರೆತು ರಾಕ್ಷಸತ್ವವನ್ನ ಬೆಳೆಸಿಕೊಂಡು, ಹಣ, ಅಧಿಕಾರವೆ ಸರ್ವಸ್ವ ಎನ್ನುವ ಗತ್ತು ಗಾಂಭಿರ್ಯ ಸಿ.ಎಂ.ಪಾತ್ರದಾರಿ ಯೋಗೇಶ ದೇಶಪಾಂಡೆ ಅಭಿನಯದಲ್ಲಿ ಎದ್ದು ಕಾಣುತ್ತಿತ್ತು. ಯಾವ ಸಂಬಂಧಗಳು ನನಗೆ ಮುಖ್ಯ ಅಲ್ಲ.
ನನ್ನ ನೆರಳನ್ನೆ ನಾನು ನಂಬಲ್ಲ ನೀವೆ ಹೇಳ್ತಿದ್ದ ಮಾತು ಎಂದು ತಂದೆಗೆ ಅಂದಾಗ.. ಹಿರೀಯರು ಮಾಡುವ ತಪ್ಪುಗಳನ್ನೆ ಅನುಕರಿಸುವ ಇಂದಿನ ಯುವ ಪೀಳಿಗೆಗೆ ಹಿರಿಯರು ಸಂಸ್ಕಾರವನ್ನು ಎಷ್ಟರಮಟ್ಟಿಗೆ ನೀಡುತ್ತಿದ್ದೇವೆ ಎಂದೆನಿಸಿತು. ಸಿ.ಎಂ.ಪಾತ್ರಧಾರಿ ಯೋಗೇಶ ದೇಶಪಾಂಡೆ ಪ್ರತಿಭಾನ್ವಿತ ಕಲಾವಿದನಾಗಿದ್ದು, ಅಭಿನಯವನ್ನು ಕರಗತ ಮೊಡಿಕೊಳ್ಳುತ್ತಿದ್ದು, ಈತನಿಗೆ ರಂಗಭೂಮಿಯಲ್ಲಿ ಭವಿಷ್ಯವಿದೆ.
ಹಿರಿಯರು ಹೇಳಿರುವಂತೆ ಮಾನವನು ಮೀನಿನಂತೆ ಈಜುವುದನ್ನು ಕಲಿತ, ಹಕ್ಕಿಯಂತೆ ಹಾರುವುದನ್ನು ಕಲಿತ ಆದರೆ ಮಾನವ ಮಾನವನಂತೆ ಬದುಕಲು ಕಲಿಯಲಿಲ್ಲ. ಕೊಳ್ಳುಬಾಕ ಸಂಸ್ಕೃತಿ ಸಮಾಜದಲ್ಲಿ ಬದುಕುತ್ತಿರುವ ನಾವು ಹಣವೇ ಸಂಬಂಧಕ್ಕಿಂತ ಮುಖ್ಯ ಎಂಬುದನ್ನು ಭಾವಿಸಿ ಮಕ್ಕಳಲ್ಲೂ ಅದನ್ನು ಬಿತ್ತುತ್ತಿದ್ದೇವೆ.
ಮಾನವೀಯ ಸಂಬಂಧಗಳು ಕೂಡ ಕೇವಲ ವ್ಯಾಪಾರದ ವಸ್ತುಗಳಾಗಿಯೇ ಹೊರಹೊಮ್ಮುತ್ತಿವೆ. ಭಾವನಾತ್ಮಕ ಸಂಬಂಧಗಳೂ ವ್ಯವಹಾರಿಕಗೊಳ್ಳುತ್ತಿವೆ. 'ಕುರುಡು ಕಾಂಚಾಣ' ಕುಣಿಯುತಲಿತ್ತು ಕಾಲಿಗೆ ಬಿದ್ದವರನ್ನು ತುಳಿಯುತಲಿತ್ತು ಬೇಂದ್ರೆಯವರ ಈ ನುಡಿಗಳು 'ಸಾರ್ವಕಾಲಿಕ ಸತ್ಯ ವನ್ನು ಸಾರುತ್ತವೆ. ಅಧಿಕಾರದದ ದಾಹದಿಂದ ಸಮಾಜ ಹಾಳಾಗುತ್ತಿದೆ.
ನರಸಿಂಹರಾವ್ನ ಪಾತ್ರದ ತಲ್ಲಣಗಳನ್ನು ಅವಲೋಕಿಸಿದಾಗ, ಆಸ್ತಿ ವ್ಯಾಮೋಹ, ಕೀರ್ತಿ ಶನಿ, ಅಧಿಕಾರದಲ್ಲಿ ದೊಡ್ಡ ಹೆಸರು ಮಾಡುವುದು, ಸಮಾಜದಲ್ಲಿ ಪ್ರತಿಷ್ಠಿತವಾಗಿ ಬದುಕುವುದು ಹೀಗೆ ನಾನಾ ಉದ್ದೇಶಗಳೊಂದಿಗೆ ಬದುಕು ಸಾಗಿಸುತ್ತಿರುವಾಗ ಮನುಷ್ಯನಿಗೆ ಸಂಬಂಧಗಳನ್ನು ನಿಭಾಯಿಸುವ ತಾಳ್ಮೆಯಾದರೂ ಎಲ್ಲಿದೆ ಅಲ್ಲವೆ ? ಎಂದೆನಿಸಿತು.
ಮಾನವ ಚಂದ್ರ, ಅಂತರಿಕ್ಷದ ಜೊತೆ ಸಂಬಂಧಗಳನ್ನು ಬೆಳೆಸಲು ಯತ್ನಿಸುತ್ತಿರುವನು. ಆದರೆ ಭೂಮಿಯ ಮೇಲಿನ ಸಂಬಂಧವನ್ನು ಮರೆಯುತ್ತಿರುವನು. ಇದು ಎಂಥ ವಿಪರ್ಯಾಸ.
ಮನುಷ್ಯ ತಾನು, ತನ್ನದು ಎಂಬ ಸಂಕುಚಿತ ಭಾವ ಬೆಳೆಸಿಕೊಂಡು, ಎಲ್ಲವು ತನಗೊಬ್ಬನಿಗೆ ಇರಲಿ ಇತರರಿಗೆ, ಸಮಾಜಕ್ಕೆ, ದೇಶಕ್ಕೆ, ಜಗತ್ತಿಗೆ ಏನಾದರೆ ತನಗೇನು ? ಎಂಬ ಮನೋಭಾವ ಬೆಳೆಸಿಕೊಂಡು ಸಾಗುತ್ತಿದ್ದಾನೆ. ಇದು ಬೇಸರದ ಸಂಗತಿ.
ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿ, ಸಹ ರೋಗಿ ನರಸಿಂಹರಾವನಿಗೆ.. ಒಂದ ದಿನ ಒಬ್ರಿಗೆ ಕೆಟ್ಟದ್ದನ್ನು ಬಯಸಲಿಲ್ಲ. ಕೆಟ್ಟದ್ದು ಮಾತಾಡಲಿಲ್ಲ. ಕೆಟ್ಟ ಯೋಚ್ನೆ ಕೂಡ ಮಾಡಿದವನಲ್ಲ. ಅಂತಾದ್ರಲ್ಲಿ ಏನ್ ತಪ್ಪಿಗೆ ಶಿಕ್ಷೆ ಅಂತ ಈ ಕ್ಯಾನ್ಸರ್ ಕಾಯಿಲೆ ಕೊಟ್ಟ. ಕೋಟಿಗಟ್ಲೆ ಫ್ರಾಡ್ ಮಡಿದೋರು ಆರಾಮವಾಗಿ ಓಡಾಡಿಕೊಂಡಿದ್ದಾರೆ...
ಬಡವರ ಹೊಟ್ಟೆ ಮೇಲೆ ಹೊಡೆದು ದುಡ್ಡು ಮಡಿಕೊಂಡೋರು ಆರಾಮಾಗೇ ಇದ್ದಾರೆ. ಯಾಕೆ ಸರ್ ಹುಟ್ಟಿಸಬೇಕು ಹೀಗೆಲ್ಲ- ದೇವರು ಅಂದ್ರೆ ತಾರತಮ್ಮೆ ಇಲ್ಲದೋನು.. ಅವನೇ ಹೀಗೆ ರಾಜಕೀಯ ಮಾಡಿದ್ರೆ ಅವನ್ಯಾಕೆ ದೇವ್ರು ಅಂತ ಕರಿಬೇಕು ? ಎಂದು ಕ್ಯಾನ್ಸರ್ ರೋಗಿ ಯುವಕನ ಪಾತ್ರದಾರಿ ಮಾಜಿ ಸಿ.ಎಂ.ನರಸಿಂಹರಾವ್ನಿಗೆ ಹೇಳುವಾಗ.. ವಿಧಿಯಾಟಕ್ಕೆ ಸಿಲುಕಿದ ಯುವಕನ ಕನಸು ನುಚ್ಚುನೂರಾಗುತ್ತಿರುವದನ್ನ ಕಣ್ಣಮುಂದೆ ಕಟ್ಟಿದಂತಿತ್ತು ಕ್ಯಾನ್ಸರ್ ರೋಗಿ ಅಂತರಾ ಕುಲಕರ್ಣಿ ಅವಳ ಸಹಜ ಅಭಿನಯ ಪ್ರೇಕ್ಷಕರ ಕಣ್ಣಲ್ಲಿ ನೀರು ಬರಿಸಿತು.
ನಟಕಕ್ಕೆ ಹಿನ್ನೆಲೆ ಸಂಗೀತ ಶ್ರೀಪತಿ ಮಂಜನಬೈಲು ಅವರದಾಗಿದ್ದು, ವಿಶೇಷ ಮೆರಗನ್ನು ನೀಡಿದೆ. ನಾಟಕದಲ್ಲಿಯ ಸನ್ನಿವೇಶಗಳಿಗೆ ಸಂದರ್ಭಕ್ಕನುಗುಣವಾಗಿ ಹೆಣೆಯಲಾಗಿದೆ. ಹಾಡುಗಳು ಆಯಾ ಸನ್ನಿವೇಶಗಳ ಕಥೆಯನ್ನು ಹೇಳುತ್ತವೆ. ಉಳಿದಂತೆ ಧ್ವನಿ ಬೆಳಕು, ವಸ್ತ್ರ ವಿನ್ಯಾಸ ರಂಗ ವಿನ್ಯಾಸ ಮನ ಸೆಳೆಯಿತು.
ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯ ನಡೆಯುವ ಹೆಚ್ಚಿನ ಸನ್ನಿವೇಶಗಳು ಮನಮುಟ್ಟುವಂತೆ ಅನಾವರಣಗೊಳಿಸಿದ ಅರವಿಂದರು ಕನಿಷ್ಠ ಪರಿಕರಗಳನ್ನು ರಂಗಸಜ್ಜಿಕೆಯಲ್ಲಿ ಉಪಯೋಗಿಸಿಕೊಂಡಿದ್ದಾರೆ.
ಕು.ಅಂತರಾ ಕುಲಕರ್ಣಿ ಗಾಯಕಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಡಾಕ್ಟರ್ ಆಗಿ ರುದ್ರೇಶ ಹಿರೇಮಠ, ಸಿ.ಎಂ. ಹೆಂಡತಿಯಾಗಿ ಪದ್ಮಾ ಕುಲಕರ್ಣಿ, ನರ್ಸ ಆಗಿ ಪೂಜಾ ಕಾರಜೋಳ, ವಾಹನ ಚಾಲಕನಾಗಿ ಪ್ರಶಾಂತ, ರೈತ ಮತ್ತು ಡ್ರಗ್ ಆಫೀಸರ್ ಆಗಿ ವಿನೋದ ಸಂಪಣ್ಣವರ, ತಂದೆಯಾಗಿ ಆರ್.ವಿ.ಭಟ್ ಮಗನಾಗಿ ಅಶೋಕ ಕುಲಕರ್ಣಿ , ಪ್ರೆಸ್ ರಿಪೋರ್ಟರ್ ಆಗಿ ಪ್ರೀತಿ ಕುಲಕರ್ಣಿ, ಯುವ ಸಿ.ಎಂ ಆಗಿ ಯೋಗೇಶ ದೇಶಪಾಂಡೆ, ಅಭಿನಯ ಚನ್ನಾಗಿತ್ತು.
ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ ನಾಟಕಗಳು ಸಮಾಜದಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರತಿಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ಈ ನಾಟಕ ಹೃದಯಸ್ಪರ್ಷಿಯಾಗಿದ್ದು ರಂಜನೆ ಮತ್ತು ತಿಳುವಳಿಕೆ ಎರಡನ್ನು ಕೊಡುತ್ತದೆ. ನಾಟಕದ ಮಧ್ಯ ಬರಮ್ಯಾನ ಚುಚ್ಚುನುಡಿ ಕಚಗುಳಿ ಇಡುವಲ್ಲಿ ಸಫಲವಾಗಿದೆ. ಸಮಕಾಲಿನ ರಾಜಕೀಯ ಹಾಗೂ ಸಾಮಾಜಿಕ ಬದುಕಿನ ತಲ್ಲಣಗಳ ಅನಾವರಣಗೊಳಿಸುವಲ್ಲಿ ರಂಗಸಂಪದ ಎಲ್ಲ ನಟರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ನಾಟಕ ಎನ್ನುವದು ಒಂದು ಕಥೆ. ಅದು ಸಂಭಾಷಣೆ ರೂಪದಲ್ಲಿರುತ್ತದೆ. ಮಾತು ಮತ್ತು ಅಭಿನಯಗಳಲ್ಲಿ ಅದು ಹೊರಹೊಮ್ಮುತ್ತದೆ. ಪ್ರೇಕ್ಷಕರನ್ನು ಉದ್ದೇಶಿಸಿರುತ್ತದೆ. ಇದೆಲ್ಲ ಸಮರ್ಪಕವಾಗಿ ನಡೆಯಬೇಕಾದರೆ ಒಂದು ಮಾರ್ಗದರ್ಶನದ ಅಗತ್ಯವಿರುತ್ತದೆ. ಆ ಮಾರ್ಗದರ್ಶನ ನೀಡುವವನೆ ನಿರ್ದೇಶಕನಾಗಿರುತ್ತಾನೆ. ಅವನ್ನು ತನ್ನ ಕೆಲಸದಲ್ಲಿ ಯಶಸ್ಸು ಪಡೆದಾಗಲೇ ನಾಟಕ ಯಶಸ್ಸು ಗಳಿಸುತ್ತದೆ. ಹೀಗಾಗಿ ನಾಟಕ ಎನ್ನುವುದು ಸಂಪೂರ್ಣವಾಗಿ ನಿದರ್ೇಶಕನ ಕೃತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಡಾ.ಅರವಿಂದರ ನಿರ್ದೇಶನ ಅತ್ಯಂತ ಯಶಸ್ವಿಯಾಗಿದೆ.
ಮರಣ ಮೃದಂಗ ನಾಟಕದಲ್ಲಿ ಹೊಸ ಕಲಾವಿದರು ಅಭಿನಯಿಸಿರುವುದು ವಿಶೇಷವಾಗಿದ್ದು, ಅವರೆಲ್ಲರನ್ನು ಪಳಗಸಿ ನಾಟಕವನ್ನು ಪ್ರಯೋಗಿಸಿ ಮೊದಲ ಪ್ರದರ್ಶನದಲ್ಲಿಯೇ ಸಾಕಷ್ಟು ಪ್ರೇಕ್ಷಕರ ಮನ್ನಣೆ ಪಡೆದಿರುವುದು, ಅರವಿಂದರ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ. ಏಕೆಂದರೆ ಇಂದಿನ ದಿನಗಳಲ್ಲಿ ಯುವಜನತೆ ಕನ್ನಡ ಸಾಂಸ್ಕೃತಿಕ ಮತ್ತು ಭಾಷೆಯ ಓದುವಿಕೆಯ ಬಗ್ಗೆ ನಿರಾಸಕ್ತಿ ಹೊಂದಿ ತಂತ್ರಜ್ಞಾನದ ಬೆನ್ನುಹತ್ತಿರುವ ಈ ಸಂದರ್ಭದಲ್ಲಿ ರಂಗಸಂಪದ ಹವ್ಯಾಸಿ ತಂಡವು ಹೆಚ್ಚಿನ ಯುವಜನರನ್ನು ರಂಗಭೂಮಿಯತ್ತ ಸೆಳೆಯಲು ಕಾರ್ಯೋನ್ಮುಖರಾಗಿ ಕೆಲಸ ಮಾಡುತ್ತಿದೆ. ಇದು ಪ್ರಶಂಶೆಗೆ ಅರ್ಹ.
-ಅನಂತ ಪಪ್ಪು