ಬಳ್ಳಾರಿ

ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ ಬೆಳೆಸಿಕೊಳ್ಳಲಿ: ಡಾ. ಸ.ಚಿ. ರಮೇಶ

ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ ಬೆಳೆಸಿಕೊಳ್ಳಲಿ: ಡಾ. ಸ.ಚಿ. ರಮೇಶ

ಬಳ್ಳಾರಿ 22: ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ, ಭಾಷಾಪ್ರೇಮವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡವನ್ನು ಅನ್ನದ ಭಾಷೆಯಾಗಿ, ಬದುಕಿನ ಭಾಷೆಯಾಗಿ ಮಾರ್ಪಡಿಸಿಕೊಳ್ಳಲು ಸಾಧ್ಯ. ಒತ್ತಡದಿಂದ ಯಾವುದೇ ಭಾಷೆಯನ್ನು ಹೇರಿದರೆ ಜನಸಾಮಾನ್ಯರ ಮಾತೃಭಾಷೆಗಳಿಗೆ ಧಕ್ಕೆಯಾಗುತ್ತದೆ. ಭಾಷೆಯನ್ನು ಶಕ್ತಿಯಾಗಿಸಿಕೊಂಡಾಗ ಬದುಕು ಹಸನಾಗುತ್ತದೆಯೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸ.ಚಿ. ರಮೇಶ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಕೇಶಿರಾಜ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಭಾಷಾ ಅಧ್ಯಯನ ವಿಭಾಗ ಹಾಗೂ ಕೆ.ಎಲ್.ಇ ದತ್ತಿ ನಿಧಿ ಆಶ್ರಯದಲ್ಲಿ ಲೋಕ ತಾಯಿನುಡಿ ದಿನಾಚರಣೆ ಅಂಗವಾಗಿ ವಾರದ ಮಾತು 150 ವಿಶೇಷ ಉಪನ್ಯಾಸ `ಕನ್ನಡದ ಆತಂಕಗಳು' ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಕನ್ನಡ ವಿಶ್ವವಿದ್ಯಾಲಯದ ಮೂಲ ಉದ್ದೇಶವೇ ಕನ್ನಡ ಭಾಷೆಯ ಅಭಿವೃದ್ಧಿಗೊಳಿಸುವುದು. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯವು ವಿಜ್ಞಾನ ನಿಕಾಯದ ಮೂಲಕ ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿಯೇ ಅಧ್ಯಯನ ಮಾಡುತ್ತಿದೆ. ಹೇಳಿಕೊಟ್ಟ ವಿಚಾರ, ಯಾರೋ ಮಾಡಿದ ಸಂಪತ್ತು ದೀರ್ಘಕಾಲ ಬರುವುದಿಲ್ಲ, ನಾವು ಕಲಿತ ಜ್ಞಾನವೇ ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜನ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಮೇಟಿ ,ಕನ್ನಡ ವಿಶ್ವವಿದ್ಯಾಲಯ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಡಿ. ಪಾಂಡುರಂಗ ಬಾಬು ಮಾತನಾಡಿದರು. ಡಾ. ಅಶೋಕಕುಮಾರ ರಂಜೇರೆ ಅವರು ಗಣ್ಯರನ್ನು ಸ್ವಾಗತಿಸಿದರು. ಡಾ. ಪಿ. ಮಹಾದೇವಯ್ಯ ಅವರು ಕಾರ್ಯಕ್ರಮ ವಂದಿಸಿದರು. ಸಂಶೋಧನಾ ವಿದ್ಯಾರ್ಥಿಯಾದ ನಾಗಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು,  

ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ, ಸಿಂಡಿಕೇಟ್ ಸದಸ್ಯರಾದ ಸಮಿಉಲ್ಲಾ ಖಾನ್,  ಪ್ರೊ. ಹೆಚ್.ಎಸ್. ರಘುನಾಥ್, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ