ಲೇಖನಗಳು

ತಾಯಿ ಹೊಟ್ಟೆ ತಣ್ಣಗೆ...

ತಾಯಿ ಹೊಟ್ಟೆ ತಣ್ಣಗೆ...

ನಮ್ಮ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಮದುವೆಯ ಎಲ್ಲಾ ಕಾರ್ಯಕ್ರಮಗಳು ತಮ್ಮದೇ ಆದಂತಹ  ವಿಶೇಷತೆಗಳನ್ನು ಹೊಂದಿವೆ. ಈ ಸುಂದರ ಸಂಪ್ರದಾಯದ ಬಗ್ಗೆ ನನ್ನ ಅನಿಸಿಕೆಗಳನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ತಾ ಇದ್ದೀನಿ.   

ಮದುವೆಯ ನಂತರದ ಸಂಪ್ರದಾಯಗಳಲ್ಲಿ  ‘ತಾಯಿ ಹೊಟ್ಟೆ ತಣ್ಣಗೆ’ ಎಂಬ ಸಾಂಪ್ರದಾಯಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಇದನ್ನು ಮದುವೆ ಆದ ಮೇಲೆ ವರನ ತಾಯಿ ವಧುವಿನ ತಾಯಿಗೆ - ’ನಿಮ್ಮ ಮಗಳು ನಮ್ಮ ಮನೆಯ ಭಾಗ್ಯ ಲಕ್ಷ್ಮಿ, ಆಕೆಯನ್ನು ನಮ್ಮ ಮಗಳ ಹಾಗೇ ನೋಡುಕೊಳ್ಳುತ್ತೇವೆ, ನೀವು ಚಿಂತೆ ಮಾಡಬೇಡಿ, ಅವಳು ಎಲ್ಲಿದ್ದರೇನಂತೆ?  

ನೆನೆಸಿದಾಗ ಬಳಿಯಲ್ಲಿ ಇರುವಳು ನಿಮ್ಮ ಮಗಳು’   

ಎಂದು ಸಾಂತ್ವನ ನೀಡುತ್ತಾ ಒಂದು ರೀತಿಯಲ್ಲಿ ವಾಗ್ದಾನ ಮಾಡಿ, ಅವರಿಗೆ ವಿಶೇಷ ಉಡುಗೊರೆ ನೀಡುವ ಸಂಪ್ರದಾಯ. ಇದು ನಡೆಯುವ ಸಂದರ್ಭದಲ್ಲಿ ಎಲ್ಲರ ಕಣ್ಣುಗಳೂ ತೇವಗೊಳ್ಳುವುದು ಸಹಜ. ನಾನು ಕಳೆದ ವರ್ಷವೇ ನನ್ನ ಮಗಳ ಮದುವೆ ಮಾಡಿದ್ದೀನಿ. ಪ್ರತಿ ಕ್ಷಣವೂ ಜೊತೆ ಜೊತೆಗೆ ನೆರಳಿನಂತೆ ಇರುವ ಮಗಳು ಮದುವೆ ಆದಮೇಲೆ ಪರರ ಮನೆಗೆ, ಅದೂ ಅಷ್ಟೊಂದು ದೂರ ಹೋಗುವುದು ಅಂದರೆ ಹೇಗೆ ಆಗಬೇಕು ಹೇಳಿ? ಇದು ಹೀಗೆ ಆಗುತ್ತದೆ ಅಂತ ಗೊತ್ತಿದ್ದರೂ ಮನಸ್ಸು ಒಪ್ಪೋದಿಲ್ಲ ಅಲ್ವಾ. ಹೂಂ.. ಆ ನೋವು ಇನ್ನೂ ಮಾಸಿಲ್ಲ.   

ಮನದ ಪುಟಗಳ ಮಧ್ಯೆ ಅಡಗಿಸಲು ಪ್ರಯತ್ನ ಮಾಡ್ತಾ ಇದ್ದವಳಿಗೆ ಮಗನ ಮದುವೆಯ ಸಂಭ್ರಮದಲ್ಲಿ ನಮ್ಮ ಬೀಗಿತ್ತಿಯ ಮುಖ ನೋಡಿದಾಗ ಆ ನೋವು ಮತ್ತೆ ಮರುಕಳಿಸಿ ತುಂಬಾ ಅಳು ಬಂತು. ಇದನ್ನು ನೋಡಿದ ನನ್ನ ಮಗಳು ಥಟ್ಟನೇ ಬಂದು ನನ್ನ ಅಪ್ಪಿಕೊಂಡಳು.              

ನನ್ನ ಸ್ನೇಹಿತೆಯರೆಲ್ಲ ಅತ್ತೆ ಪಟ್ಟ ಸಿಕ್ಕಿದೆ.. ಜಂಭದಿ ಓಡಾಡೋದು ಬಿಟ್ಟು ಏಕೆ ಅಳ್ತಾ ಇದ್ದೀಯಾ ಅಂತ ಕೇಳಿದಾಗ ನನ್ನ ಬಳಿ ಉತ್ತರ ಇರಲಿಲ್ಲ. ಪಾಪ, ನಮ್ಮ ಬೀಗಿತ್ತಿ ಕಣ್ಣು ತುಂಬಿ ಬಂದರೂ, ಮುಗುಳು ನಗೆ ಬೀರುತ್ತಾ ನನ್ನ ಕೈ ಹಿಡಿದಾಗ ಅವರನ್ನು ಅಪ್ಪಿಕೊಂಡು ಬಿಟ್ಟೆ. ಆ ತಾಯಿಯ ಪ್ರೀತಿಯ ಮುಖ ಈಗಲೂ ಕಣ್ಮುಂದೆ ಬರುತ್ತದೆ.   

’ತಾಯ್ತನವೆಂಬ’ ಅಮೂಲ್ಯ ಕೊಡುಗೆಯನ್ನು ಆ ದೇವರು ಮಹಿಳೆಯರಿಗೆ ಕೊಟ್ಟ ವರವೇ ಸರಿ. ಹುಟ್ಟವ ಕೂಸು ಹೆಣ್ಣೇ ಇರಲಿ ಅಥವಾ ಗಂಡೇ ಆಗಿರಲಿ, ತಾಯಿ ಮತ್ತು ಮಗುವಿನ ನಡುವೆ ಗರ್ಭಾವಸ್ಥೆಯಲ್ಲಿಯೇ ಒಂದು ವಿಶೇಷವಾದ ಭಾವನಾತ್ಮಕ ಹಾಗೂ ಜನ್ಮ ಜನ್ಮಾಂತರಗಳ ಸಂಬಂಧ ಬೆಳೆಯುತ್ತದೆ. ಇದರ ಬಗ್ಗೆ ನಾವೆಲ್ಲ ಪುರಾಣದ ಕಥೆಗಳಲ್ಲಿ ಕೇಳಿದ್ದೀವಿ ಮತ್ತು ಇದನ್ನೇ ಆಧುನಿಕ ಯುಗದ ವಿಜ್ಞಾನವೂ ಹೇಳುತ್ತಿದೆ- ಉದರದಲ್ಲಿರುವ ಭ್ರೂಣ ಸೂಕ್ಷ್ಮಗ್ರಾಹಿಯಾಗಿದ್ದು, ತಾಯಿಯ ಭಾವಗಳಿಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆ. ಅಂದರೆ ಭ್ರೂಣದ ಮೆದುಳಿನ ಬೆಳೆವಣಿಗೆಯ ಜೊತೆ ಜೊತೆಗೆ ತಾಯಿ ಗ್ರಹಿಸಿದ್ದನ್ನು ಅದೂ ಸಹ ಗ್ರಹಿಸುತ್ತದೆ ಅಂತ. ಹಾಗಾಗಿಯೇ ಗರ್ಭಿಣಿಯರ ಸುತ್ತ ಮುತ್ತಲಿನ ಪರಿಸರ ಪ್ರೀತಿ ಮತ್ತು ಸಂತೋಷದಾಯಕ ಇರಬೇಕು.  

ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆ ಆಗುವವರೆಗೆ ಆ ತಾಯಿ ಮಮತೆಯಿಂದ ತನ್ನ ಹಸ್ತಗಳನ್ನು ಹೊಟ್ಟಯ ಮೇಲಿಟ್ಟು, ಹುಟ್ಟುವ ಕಂದನ ಜೊತೆಗೆ ಪ್ರೀತಿಯಿಂದ ಮಾತಾಡುತ್ತಾ ದಿನ ಕಳೆಯುತ್ತಾಳೆ.  

ಸರಿ, ಹೆರಿಗೆ ಆದ ಬಳಿಕ ಹಾಲು ಕುಡಿಯುವ ಕಂದಮ್ಮನ ತಲೆಯನ್ನು ವಾತ್ಸಲ್ಯದಿಂದ ನೇವರಿಸುವ ಮಮತಾಮಯಿ ತಾಯಿ ಅದಕ್ಕೆ ಏನೂ ಆಗದ ಹಾಗೆ ಸುರಕ್ಷೆಯ ಭಾವವನ್ನು ಮೂಡಿಸುತ್ತಾಳೆ.  

ಅಮೃತ ಪಾನದಂತಹ ಅನ್ಯಾಯಮಾನವಾದ ಸ್ತನ್ಯಪಾನವು ಮಗುವಿಗೆ ಪ್ರೀತಿ, ಮಮತೆ, ಶಾಶ್ವತ ಸುರಕ್ಷೆ ಹಾಗೂ ಆರೋಗ್ಯದ ಪಾನ. ಹಾಗಾಗಿ ತಾಯಿ ದೇವರ ಸಮಾನ.  

ಹಾಗಂತ ಅಪ್ಪ ಏನೂ ಮಾಡುವುದಿಲ್ಲ ಅಂತಲ್ಲ. ಅವರ ಬಗ್ಗೆ ಇನ್ನೊಂದು ಲೇಖನ ಬರೀತಿನಿ.  

’ಹೆಣ್ಣು ಅಂದರೆ ಹುಣ್ಣು’ ಎಂಬ ಮಾತನ್ನು ಕೇಳಿದಾಗ ಮೈ ಉರಿಯುತ್ತದೆ. ಉತ್ತರ ಭಾರತದಲ್ಲಿ ನಡೆಯುವ ಘಟನೆಗಳನ್ನು ಕೇಳಿ ಹೃದಯ ಹಿಂಡಿದಂತಾಗುತ್ತದೆ. ಅವರ ಈ ಧೋರಣೆಯಲ್ಲಿ ಎಂದು ಸುಧಾರಣೆ ಆಗುವುದೋ ಗೊತ್ತಿಲ್ಲ.  

ಹೆಣ್ಣು ಮಗುವಿನ ಜನನ ಆದ ತಕ್ಷಣ ಎಲ್ಲರೂ ಇದು ಪರರ ಸ್ವತ್ತು ಅಂತ ಹೇಳಿದಾಗ ಆ ಕಂದನ ಕೇಕೆಯಲ್ಲಿ ತನ್ನ ಮನದ ನೋವುಗಳನ್ನು ಮರೆತು ಲಾಲನೆ ಪಾಲನೆಯಲ್ಲಿ ತೊಡಗುತ್ತಾಳೆ.  

ಪತಿಯ ಜೊತೆ ಸೇರಿ ಮಗಳಿಗೆ ತಮಗೆ ಗೊತ್ತಿರುವ ಎಲ್ಲಾ ವಿಷಯಗಳ ಕುರಿತು ಅರಿವು ಮೂಡಿಸುವ ಜೊತೆಗೆ ಅವಳಿಗೂ ಸಹ ಮಗನ ಹಾಗೆ ಮುಂದೆ ಕಲಿಯಲು ಹುರಿದುಂಬಿಸುತ್ತಾಳೆ.   

ತಾಯಿ ಮತ್ತು ಮಗಳ ನಡುವಿನ ಸಂಬಂಧವು ಮಹಿಳೆ ತನ್ನ ಜೀವನದಲ್ಲಿ ಆನಂದಿಸುವ ಅತ್ಯಮೂಲ್ಯ ಬಂಧನ ಎನ್ನಬಹುದು.  

ಮಣ್ಣಿನ ಮುದ್ದೆಯಂತಿದ್ದ ಮಗುವಿನ ಮನಸ್ಸನ್ನು ಸನ್ಮಾರ್ಗದಲ್ಲಿ ವಿಕಸಿತಗೊಳಿಸುವಂತಹ ಗುರುತರವಾದ ಜವಾಬ್ದಾರಿ ತಾಯಿ ಮಾತ್ರ ಹೊರಬಲ್ಲಳು.  

ಮಗುವಿನ ಕನಸುಗಳು ನನಸಾಗಲಿ ಎಂದು ಹಗಲಿರುಳು ಪ್ರಾರ್ಥಿಸುವಳು.   

ಮಗುಳು ಹುಟ್ಟಿದಾಗಿಂದ ಆಕೆ ದೇಶದ ಉತ್ತಮ ಪ್ರಜೆ ಆಗುವುದರ ಜೊತೆಗೆ, ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಯಲ್ಲಿ ದೀಪ ಬೆಳಗಿಸುವಂತೆ ಎಲ್ಲಾ ರೀತಿಯ ಸಂಸ್ಕಾರ, ಶಿಕ್ಷಣ ಹಾಗೂ ರೀತಿ ನೀತಿಗಳನ್ನು ಕಲಿಸುವಳು. ಮಗುಳು ಬೆಳೆದಂತೆ ಆಕೆ ಅಮ್ಮನ ಗೆಳತಿ ಆಗುತ್ತಾಳೆ.   

ಮಗಳ ಮದುವೆಯ ಕನಸ ಕಾಣುವ ಆ ತಾಯಿ ಮದುವೆಯ ದಿನ ತನ್ನ ಕರುಳ ಬಳ್ಳಿಯ ಹೂವನ್ನು ಧಾರೆ ಎರೆದು ಕೊಡುವಾಗ ತನ್ನ ಹೃದಯದ ನೋವನ್ನ ಮರೆತು ಮುಖದಲ್ಲಿ   

ಮಂದಹಾಸ ಬೀರುವ ತಾಯಿ ಹೃದಯದ ಬಗ್ಗೆ ಹೆಣ್ಣು ಹೆತ್ತವರಿಗೇ ಗೊತ್ತು. ಅದಕ್ಕೇ ಆ ತಾಯಿ ನಿಶ್ಚಿಂತೆಯಿಂದ ಇರಲಿ ಎಂದು ನಮ್ಮ ಕಡೆ ’ತಾಯಿ ಹೊಟ್ಟೆ ತಣ್ಣಗೆ’ ಮಾಡುವ ಸಂಪ್ರದಾಯವಿದೆ.   

ಎಲ್ಲಾ ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು ಸುಖವಾಗಿ ಬಾಳಿರೆಂದು ಹಾರೈಸುತ್ತೇನೆ. ಅಲ್ಲದೆ ನನಗೆ ಇನ್ನೊಬ್ಬ ಮಗಳು ಸಿಕ್ಕಿದ್ದಾಳೆ ಎಂದು ಸಂಭ್ರಮ ಪಡುತ್ತಿದ್ದೇನೆ.  

 - ಸವಿತಾ ಇನಾಮದಾರ  

    ದೆಹಲಿ 

 ಮೊ: 98186 52115 


- * * * - 


ಸುದ್ದಿ ಓದಿ