ಬ್ಯಾಡ್ಗಿ

ಸಮಾಜದಲ್ಲಿ ಗುರುವಿಗೆ ಅತ್ಯಂತ ಗೌರವದ ಸ್ಥಾನ: ಸಂಕಣ್ಣನವರ

ಸಮಾಜದಲ್ಲಿ ಗುರುವಿಗೆ ಅತ್ಯಂತ ಗೌರವದ ಸ್ಥಾನ:  ಸಂಕಣ್ಣನವರ

ಬ್ಯಾಡಗಿ 15: ಪ್ರಾಮಾಣಿಕವಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದರೆ ಸಮಾಜವೂ ಕೂಡಾ ಅದಕ್ಕೆ ಪ್ರತಿಯಾಗಿ ಗೌರವ ಸಲ್ಲಿಸುತ್ತದೆ ಎಂಬುದಕ್ಕೆ ಈ ಬಾರಿಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಜಮೀರ ರಿತ್ತಿಯವರೇ ಸಾಕ್ಷಿಯಾಗಿದ್ದಾರೆ ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು. ಪಟ್ಟಣದ ವಿಶ್ವಾಸ ಫೌಂಡೇಶನ್ ಹಾಗೂ ಆಂಜನೇಯ ಯುವಕ ಸಂಘದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಮೀರ ರಿತ್ತಿಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಅತ್ಯಂತ ಗೌರವದ ಸ್ಥಾನ ಎಂದಾದರೆ ಅದು ಗುರು ಸ್ಥಾನ. ಗುಣಮಟ್ಟದ ಶಿಕ್ಷಣ ಕೊಟ್ಟ ಗುರುಗಳನ್ನ ಶಿಷ್ಯರು ಎಂದೂ ಮರೆಯಲಾರರು. ಕ್ರೀಡಾಲೋಕದಲ್ಲೂ ಕೂಡಾ ತಮ್ಮ ಶಿಷ್ಯವೃಂದವನ್ನು ರಾಜ್ಯಮಟ್ಟಕ್ಕೆ ತಯಾರು ಮಾಡುವಲ್ಲಿ ಅವರ ಸೇವೆ ಅನುಪಮವಾಗಿದೆ. ಎಂದು ಹೇಳಿದರು.

ಹಿರಿಯ ಶಿಕ್ಷಕ ಹಾಗೂ ಸಾಹಿತಿ ಜೀವರಾಜ ಛತ್ರದ ಮಾತನಾಡಿ,  ಅತ್ತಿಕಟ್ಟಿಯಂತಹ ಗ್ರಾಮೀಣ ಭಾಗದ ಶಾಲಾಮಕ್ಕಳಿಗೆ ಜಮೀರರಂತಹ ಗುರುಗಳು ಜೊತೆಗಿರುವದರಿಂದ ಅಲ್ಲಿನ ಮಕ್ಕಳು ರಾಜ್ಯಮಟ್ಟದಲ್ಲಿ ಪ್ರತಿಭಾವಂತರಾಗಿ ಹೆಸರು ಮಾಡಿದ್ದಾರೆ. ಒಬ್ಬ ಮಾದರಿ ಶಿಕ್ಷಕನಾಗಿರುವ ಜಮೀರರಿಗೆ ಯಾವುದೇ ಲಾಬಿಯಿಲ್ಲದೇ ಜಿಲ್ಲಾ ಶಿಕ್ಷಕ ಪ್ರಶಸ್ತಿ ದೊರೆತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆಂಜನೇಯ ಯುವಕ ಸಂಘದ ರಮೇಶ ಮೋಟೆಬೆನ್ನೂರ, ನಮ್ಮ ಸಂಘಕ್ಕೆ ಜಮೀರ ಗುರುಗಳ ಮಾರ್ಗದರ್ಶನ ಸಾಕಷ್ಟು ಸಂದಿದೆ. ಅವರನ್ನು ಗೌರವಿಸಲು ನಮಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪುಟ್ಟಪ್ಪ ಛತ್ರದ, ಮಲ್ಲಿಕಾರ್ಜುನ ಬಡಿಗೇರ, ಚಿಕ್ಕಪ್ಪ ಛತ್ರದ, ರಾಮಣ್ಣ ಹಡಗಲಿ, ಪ್ರಶಾಂತ ಹಾಲನಗೌಡ್ರ, ಆಂಜನೇಯ ಯುವಕ ಸಂಘದ ಅಧ್ಯಕ್ಷರಾದ ಪ್ರಕಾಶ ಛತ್ರದ, ಶಂಬಣ್ಣ ಬಿದರಿ, ಮಲ್ಲನಗೌಡ್ರ ಭದ್ರಗೌಡ್ರ, ಅಶೋಕ ಮಾಳೇನಹಳ್ಳಿ, ಮುತ್ತಣ್ಣ ಸಂಕಣ್ಣನವರ, ಶಂಭು ಮಠದ, ಶಿದ್ಲಿಂಗಪ್ಪ ಕೊಪ್ಪದ, ಗೋಣೆಪ್ಪ ಹೂಲಿಹಳ್ಳಿ, ಕರಬಸವ ಹಳಿಯಾಳದ, ಮುರುಗೇಶ ಮೋಟೆಬೆನ್ನೂರ, ರುದ್ರಪ್ಪ ಮೂಡ್ವಿ ಮುಂತಾದವರು ಉಪಸ್ಥಿತರಿದ್ದರು. ಮಾಲತೇಶ ಎಲಿ ಸ್ವಾಗತಿಸಿದರು. ಶಿವಕುಮಾರ ಕಲ್ಲಾಪುರ ನಿರೂಪಿಸಿದರು. ಗಂಗಾಧರ ಮಠದ ವಂದಿಸಿದರು.

ಸುದ್ದಿ ಓದಿ