ಕನ್ನಡ ವಿವಿಯಲ್ಲಿ ತಿಂಗಳ ಚಿತ್ರಕಲಾ ಪ್ರದರ್ಶನ
ಕಲಾವಿದನಿಗೆ ಸೌಂದರ್ಯ ಪ್ರಜ್ಞೆಯೇ ಮುಖ್ಯ: ಡಾ. ಕೆ.ರವೀಂದ್ರನಾಥ
ಬಳ್ಳಾರಿ 06: ಇಂದಿನ ದಿನಮಾನಗಳಲ್ಲಿ ಚಿತ್ರಕಲೆಯು ಚಿತ್ರ ಕಲಾವಿದನ ಬದುಕನ್ನು ಕಟ್ಟಿಕೊಡುತ್ತದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮನಾಗಿರುತ್ತದೆ ಹಾಗೂ ಕಲಾವಿದನಿಗೆ ಕಲೆಯೇ ಜೀವಾಳವಾಗಿರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಲಲಿತಕಲೆಗಳ ನಿಕಾಯದ ಮುಖ್ಯಸ್ಥರಾದ ಡಾ.ಕೆ.ರವೀಂದ್ರನಾಥ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಿಂಗಳ ಚಿತ್ರಕಲಾ ಪ್ರದರ್ಶನ-26 ಹಾಗೂ ಎಂ.ವಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ರೇಖಾಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಾಸ್ತವ ಜಗತ್ತಿನಲ್ಲಿ ನಡೆದ ಘಟನೆಗಳನ್ನು ಕಲಾವಿದನು ಚಿತ್ರಕಲೆಯ ಮೂಲಕ ಜೀವ ತುಂಬುವ ಕಾರ್ಯಪ್ರವೃತ್ತಿಯನ್ನು ಮಾಡುತ್ತಾ ಬಂದಿದ್ದಾನೆ. ಚಿತ್ರಕಲೆಯಿಂದ ಕಲಾವಿದನ ಮನಸ್ಸನ್ನು ನಾವು ತಿಳಿಯಬಹುದು ಹಾಗೂ ಅನಕ್ಷರಸ್ಥರು ಕೂಡ ಚಿತ್ರಕಲೆಯನ್ನು ನೋಡಿ ಅರಿಯಬಹುದು. ಸಾಹಿತ್ಯ ಅಧ್ಯಯನ ಹಾಗೂ ಚಿತ್ರಕಲೆ ಅಧ್ಯಯನವು ತುಂಬಾ ಭಿನ್ನವಾಗಿದೆ. ಕಲೆಗಾರ ತನ್ನ ಅನುಭವದ ಮೂಲಕ ಅನೇಕ ಘಟನೆಗಳನ್ನು ಚಿತ್ರಕಲೆಯ ಮೂಲಕ ತಿಳಿಸಿ ಅನಕ್ಷರಸ್ಥರಿಗೂ ಹತ್ತಿರವಾಗಿದ್ದಾನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಪದ ವಿಭಾಗದ ಪ್ರಾಧ್ಯಾಪಕರಾದ ಡಾ.ಸಿ.ಟಿ ಗುರುಪ್ರಸಾದ್ ಮಾತನಾಡಿ ಚಿತ್ರಕಲೆಯು ಅನುಭವಗಳ ಮೂಲಕ ಹೊಸ ಹೊಸ ರೂಪವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಇದು ಪ್ರಾಚೀನ ಕಾಲದಿಂದಲೂ ಚಿತ್ರಕಲೆ ಬೆಳೆದು ಬಂದಿದ್ದು, ಇಂದಿನ ದಿನಮಾನಗಳಲ್ಲಿ ವಿವಿಧ ರೂಪವನ್ನು ಪಡೆದಿದೆ. ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಿವಿಧ ಕೌಶಲ್ಯಗಳನ್ನು ರೂಢಿ ಮಾಡಿಕೊಳ್ಳಬೇಕು. ಜೊತೆಗೆ ಪ್ರಮುಖವಾಗಿ ಕಲಾವಿದರು ತಾಳ್ಮೆ, ಸಮಯ ಪ್ರಜ್ಞೆ, ವಸ್ತುನಿಷ್ಠ ಗುಣಮಟ್ಟ, ಆಸಕ್ತಿ, ಅಭಿರುಚಿ, ಮನರಂಜನೆ ಹಾಗೂ ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕಲಾ ಜಗತ್ತಿನಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.
ದರೋಜಿ ಕರಡಿಧಾಮ ವಲಯ ಅರಣ್ಯಾಧಿಕಾರಿಗಳಾದ ಎಂ.ಉಷಾ ಮಾತನಾಡಿ ಕಲಾವಿದನನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಧರ್ಮವಾಗಿರಬೇಕು. ಚಿತ್ರಕಲೆಯಿಂದ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ. ಚಿತ್ರಕಲೆಯಲ್ಲಿ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥರಾದ ಡಾ.ಮೋಹನರಾವ ಬಿ. ಪಂಚಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವವಿದ್ಯಾಲಯದ ಉಪಕುಲಸಚಿವರಾದ ಡಾ.ಎ.ವೆಂಕಟೇಶ್, ವಿವಿಧ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.