ಮನರಂಜನೆ

ಭಾರತೀಯ ಪ್ರಸಿದ್ಧ ಗಾಯಕ-ಸಂಯೋಜಕ ಬಪ್ಪಿ ಲಾಹಿರಿ ನಿಧನಕ್ಕೆ ಮೋದಿ, ಅಮಿತ್ ಶಾ, ವೆಂಕಯ್ಯ ನಾಯ್ಡು ಸಂತಾಪ

ಭಾರತೀಯ ಪ್ರಸಿದ್ಧ ಗಾಯಕ-ಸಂಯೋಜಕ ಬಪ್ಪಿ ಲಾಹಿರಿ ನಿಧನಕ್ಕೆ ಮೋದಿ, ಅಮಿತ್ ಶಾ, ವೆಂಕಯ್ಯ ನಾಯ್ಡು ಸಂತಾಪ

ನವದೆಹಲಿ: ಫೆಬ್ರವರಿ 16 ಭಾರತೀಯ ಪ್ರಸಿದ್ಧ ಗಾಯಕ-ಸಂಯೋಜಕ ಬಪ್ಪಿ ಲಾಹಿರಿ ಅವರು ಮಂಗಳವಾರ ರಾತ್ರಿ ಜುಹುವಿನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಲಹಿರಿ ಅವರು ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಹದಗೆಟ್ಟ ಖಾರಣ ಮಂಗಳವಾರ ವೈದ್ಯರನ್ನು ಮನೆಗೆ ಕರೆಸಲಾಗಿತ್ತು. ತದನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಪ್ಪಿ ಮಧ್ಯರಾತ್ರಿಗೆ ಸ್ವಲ್ಪ ಮೊದಲು OSA (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಕಾರಣ ನಿಧನರಾದರು ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ ದೀಪಕ್ ನಾಮಜೋಶಿ ತಿಳಿಸಿದರು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವ್ ಗನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಕ್ಷಯ್ ಕುಮಾರ್ ಟ್ವೀಟ್ ಮಾಡಿ, ಇಂದು ನಾವು ಸಂಗೀತ ಲೋಕದ ಮತ್ತೊಂದು ರತ್ನವನ್ನು ಕಳೆದುಕೊಂಡಿದ್ದೇವೆ. ಬಪ್ಪಿ ಡಾ, ನಾನು ಸೇರಿದಂತೆ ಲಕ್ಷಾಂತರ ಜನರು ನೃತ್ಯ ಮಾಡಲು ನಿಮ್ಮ ಧ್ವನಿ ಕಾರಣವಾಯಿತು. ನಿಮ್ಮ ಸಂಗೀತದ ಮೂಲಕ ಸಂತೋಷ ನೀಡಿದ ನಿಮಗೆ ಧನ್ಯವಾದಗಳು. ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು ಸಂತಾಪ ಸೂಚಿಸಿದ್ದಾರೆ.

ನಿರ್ಮಾಪಕ ಹನ್ಸಾಲ್ ಅವರು, ಮತ್ತೊಂದು ದಂತಕಥೆ ಕಣ್ಮರೆಯಾಯಿತು. #ಬಪ್ಪಿಲಾಹಿರಿ. ನಾನು p&g ಗಾಗಿ ಜಾಹೀರಾತನ್ನು ಚಿತ್ರೀಕರಿಸಿದಾಗ ಮತ್ತು ನಂತರ @_SanjayGupta ಗಾಗಿ ವೈಟ್ ಫೆದರ್ ಫಿಲ್ಮ್ಸ್‌ನೊಂದಿಗೆ ಕೆಲಸ ಮಾಡುವಾಗ ಅವರೊಂದಿಗೆ ಕೆಲಸ ಮಾಡುವ ಅದೃಷ್ಟವನ್ನು ಪಡೆದಿದ್ದೆ. ನಂಬಲಾಗದ ಮಧುರ ಮತ್ತು ಪ್ರತಿಭೆಯ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರ ಅವರು, ಸಂಗೀತ ಸಂಯೋಜಕ ಮತ್ತು ಪಾಪ್ ಸಂಸ್ಕೃತಿ ಗಾಯಕ #ಬಪ್ಪಿಲಾಹಿರಿ ಜಿ ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ. ಅವರ ಆತ್ಮಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದ್ದು, ಶ್ರೀ ಬಪ್ಪಿ ಲಾಹಿರಿಯವರ ನಿಧನದಿಂದ ಭಾರತವು ಮತ್ತೊಬ್ಬ ಹಿರಿಯ ಗಾಯಕ ಮತ್ತು ಸಂಯೋಜಕರನ್ನು ಕಳೆದುಕೊಂಡಿದೆ. ಬಪ್ಪಿ ದಾ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ! ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಅರ್ಪಿಸಿ, ಲಾಹಿರಿಯ ಉತ್ಸಾಹಭರಿತ ಸ್ವಭಾವವನ್ನು ಎಲ್ಲರೂ ಕಳೆದುಕೊಳ್ಳುತ್ತಾರೆ. ಬಪ್ಪಿ ಲಾಹಿರಿ ಜಿಯವರ ಸಂಗೀತವು ವೈವಿಧ್ಯಮಯ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತದೆ. ಎಲ್ಲಾ ತಲೆಮಾರುಗಳ ಜನರಿಗೂ ಚಿರಪರಿಚಿತ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

ಪ್ರಸಿದ್ಧ ಗಾಯಕ ಮತ್ತು ಸಂಯೋಜಕ ಬಪ್ಪಿ ಲಾಹಿರಿ ಜಿ ಅವರ ನಿಧನದ ಬಗ್ಗೆ ತಿಳಿದು ನೋವಾಗಿದೆ. ಅವರ ನಿಧನ ಭಾರತೀಯ ಸಂಗೀತ ಲೋಕದಲ್ಲಿ ದೊಡ್ಡ ನಷ್ಟವನ್ನುಂಟು ಮಾಡಿದೆ. ಬಪ್ಪಿ ದಾ ಅವರ ಬಹುಮುಖ ಗಾಯನ ಮತ್ತು ಉತ್ಸಾಹಭರಿತ ಸ್ವಭಾವಕ್ಕಾಗಿ ನೆನಪಿನಲ್ಲಿ ಉಳಿಯುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಕೇಂದ್ರ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ಸಂಗೀತಗಾರ ಬಪ್ಪಾ ಲಾಹಿರಿ ಅವರ ಮಗ ಯುಎಸ್‌ನ ಲಾಸ್ ಏಂಜಲೀಸ್‌ನಿಂದ ಬರುತ್ತಿರುವ ಕಾರಣ ಅಂತಿಮ ವಿಧಿವಿಧಾನಗಳು ಗುರುವಾರ ನಡೆಯಲಿದೆ. ಜುಹುದಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಲಾಹಿರಿ ಅವರ ಅಳಿಯ ಗೋವಿಂದ್ ಬನ್ಸಾಲ್ ತಿಳಿಸಿದ್ದಾರೆ.

ಸುದ್ದಿ ಓದಿ