ಮಾನಸಿಕ ಕಾಯಿಲೆ ಕೂಡ ದೈಹಿಕ ಕಾಯಿಲೆಯಂತೆ!
(ವೈದ್ಯರು ಹೇಳುವ ಹಾಗೆ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆಯನ್ನು ಹತೊಟೆಯಲ್ಲಿಡಬಹುದು ಮತ್ತು ಗುಣ ಪಡಿಸಬಹುದಾಗಿದೆ. ಮಾನಸಿಕ ಅಸ್ವಸ್ಥರನ್ನು ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ನೋಡಿಕೊಂಡರೆ ಅವರು ಸಾಮಾನ್ಯರಂತೆ ಜೀವನ ನಡೆಸುತ್ತಾರೆ. ಸಮಾಜ ಅವರನ್ನು ನೊಡುವ ದೃಷ್ಟಿ ಬದಲಾಯಿಸಕೊಳ್ಳಬೇಕಿದೆ. ಅವರಿಗಾಗಿ ನಾವು ಸಮಾನತೆಯ ಹಸ್ತ ಚಾಚೊಣ...)
ಎಷ್ಟೋ ಜನ ಮಾನಸಿಕ ಕಾಯಿಲೆಗೆ ತುತ್ತಾಗಿ ಸಮಾಜದಿಂದ ಕಡೆಗಣಿಸಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಹಲವಾರು ಉದಾಹರಣೆಗಳಿವೆ. ಆ ತರಹದೇ ಒಂದು ಸಮಸ್ಯೆಯಿಂದ ಪುಟ್ಟಿದೆದ್ದು ತನ್ನ ಬದುಕನ್ನು ಕಟ್ಟಿಕೊಂಡ ರಾಮು (ಹೆಸರು ಬದಲಾಯಿಸಲಾಗಿದೆ) ತನ್ನ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಾನು 20ನೇ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡೆ. ನಮ್ಮ ಮನೆಯಲ್ಲಿ ನಾನು ಅಕ್ಕ ಮತ್ತು ತಂಗಿ.,. ಅಮ್ಮನಿಗೆ ಹೃದಯ ಕಾಯಿಲೆ, ಕೆಲಸ ಮಾಡಲು ಆಗುತ್ತಿರಲ್ಲಿಲ್ಲ. ನಮ್ಮ ಉಪ-ಜೀವನಕ್ಕೆ ತೊಂದರೆ ಆಗುತ್ತಿತ್ತು. ಕೆಲಸ ಹುಡಕಲು ಬೆಂಗಳೂರಿಗೆ ಪ್ರಯಾಣಿಸಿದೆ. ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಹೇಗಾದರು ಮಾಡಿ ಅಕ್ಕನ ಮದುವೆ ಮಾಡಿದರೆ ಜವಾಬ್ದಾರಿ ಕಡಿಮೆ ಆಗುತ್ತದೆ ಎಂದು ಮತ್ತೆ ಬೇರೆ ಪಾರ್ಟ ಟೈಮ್ ಕೆಲಸಕ್ಕೆ ಸೇರಿಕೊಂಡೆ. ಹಾಗಾಗಿ ಊಟ ನಿದ್ರೆ ಸರಿಯಾಗಿ ಆಗುತ್ತಿರಲ್ಲಿಲ್ಲ. ಕೆಲ ತಿಂಗಳಲ್ಲಿ ಅಕ್ಕನ ಮದುವೆ ಮಾಡಿಕೊಟ್ಟೆವು.
ಟೆನ್ಷನ್ ಫ್ರೀಯಾಗಿ ಅಮ್ಮ, ತಂಗಿ ಜೊತೆ ಆರಾಮಾಗಿದ್ದೆ. ಒಂದು ದಿನ ರಾತ್ರಿ ನಿದ್ರೆ ಬರಲ್ಲಿಲ್ಲ, ಕೆಟ್ಟ ಕನಸು ಬರುತ್ತಿತ್ತು, ಕಿವಿಯಲ್ಲಿ ಯಾರೋ ಬಂದು ಮಾತಾಡುವ ಹಾಗೆ ಆಗುತ್ತಿತ್ತು, ಹೆಚ್ಚು ಜನರನ್ನು ಕಂಡರೆ ಭಯವಾಗುತ್ತಿತ್ತು. ಬೇರೆಯವರು ನನ್ನ ಬಗ್ಗೆ ಮಾತಾಡುತ್ತಾರೆಂದು ಅನಿಸುತಿತ್ತು. ಹೆದರಿಕೆ ಬರುವುದು, ಹೀಗೆ ಕೆಲವೂ ದಿನಗಳು ಕಳೆದವು ಕೆಲಸ ಮಾಡಲು ಆಗುತಿರಲ್ಲಿಲ್ಲ. ಆದ ತೊಂದರೆ ಅಮ್ಮನಿಗೆ ಹೇಳಿ ಒಂದು ದಿನ ಕೆಲಸ ಬಿಟ್ಟು ಊರಿಗೆ ಬಂದೆ.
ಅಮ್ಮ ನನ್ನ ಸ್ಥಿತಿ ನೋಡಿ, ಯಾರೋ ಮಾಟ-ಮಂತ್ರ ಮಾಡಿಸಿರಬೇಕೆಂದು, ಯಂತ್ರ-ಮಂತ್ರ ಎಲ್ಲವೂ ಮಾಡಿಸಿದರೂ ಪ್ರಯೊಜನವಾಗಲಿಲ್ಲ. ಸಾಕಷ್ಟು ಹಣ ಕೂಡ ಹಾಳಾಯಿತು. ಒಂದು ದಿನ ಆಸ್ಪತ್ರೆಗೆ ವೈದ್ಯರ ಬಳಿ ಕರೆದುಕೊಂಡು ಹೋಗಿ ತಲೆ ಸ್ಕ್ಯಾನ್ ಮಾಡಿ ರಕ್ತ ಪರೀಕ್ಷೆ ಮಾಡಿದರು ಎಲ್ಲವೂ ನಾರ್ಮಲ್ ಇತ್ತು. ನಿಮಗೆ ಮಾನಸಿಕ ಕಾಯಿಲೆಯ ಲಕ್ಷಣಗಳು ಇದೆ, ನೀವು ಮಾನಸಿಕ ವೈದ್ಯರನ್ನು ಭೇಟಿಯಾಗಿ ಎಂದು ಬರೆದು ಕೊಟ್ಟರು. ಅದರಂತೆ ಮನೋವೈದ್ಯರನ್ನು ಭೇಟಿಯಾದಾಗ, ಮಾನಸಿಕ ಕಾಯಿಲೆ ಇರುವುದನ್ನು ಖಚಿತ ಪಡಿಸಿದರು. ರೋಗದ ತೀವ್ರತೆ ಹೆಚ್ಚಿರುವುದರಿಂದ, ಒಂದು ವಾರ ಅಡ್ಮಿಟ್ ಆದರೆ ಒಳ್ಳೆದು ಎಂದು ಹೇಳಿದರು. ವೈದ್ಯರ ಮಾತಿನಂತೆ ಅಡ್ಮಿಟ್ ಆದೆ, ಒಂದು ವಾರದಲ್ಲಿ ಶೇ 75ಅ ರಷ್ಟು ರೋಗದ ಲಕ್ಷಣಗಳು ಕಡಿಮೆಯಾಯಿತು. ಡಿಸ್ಚಾರ್ಜ್ ಆಗುವ ಮೊದಲು ಮನೋವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸಮಾಲೋಚನೆ ನಡೆಸಿ, ದಿನಚರಿ, ಮನಸ್ಸನ್ನು ಹೇಗೆ ಹಿಡಿತದಲ್ಲಿಡುವುದು, ಕೋಪ ಬಂದಾಗ ಹೇಗೆ ವರ್ತಿಸುವುದು ಮತ್ತು ಕೆಲಸ ಮತ್ತು ವೈಯಕ್ತಿಕ ಜೀವನ ನಿರ್ವಹಣೆ ಬಗ್ಗೆ ಹೇಳಿಕೊಟ್ಟರು. ಒಂದು ತಿಂಗಳದ ಮಾತ್ರೆ ಕೊಟ್ಟರು. ಒಂದು ತಿಂಗಳಲ್ಲಿ ಪೂರ್ತಿ ಗುಣಮುಖನಾದೆ. ಮತ್ತೆ ಒಂದು ತಿಂಗಳ ನಂತರ ಮನೋವೈದ್ಯರನ್ನು ಭೇಟಿಯಾಗಲು ಹೋದೆ. ಸಂಪೂರ್ಣ ಲಕ್ಷಣಗಳು ಹಿಡಿತಕ್ಕೆ ಬಂದಿದ್ದು ಇನ್ನು ಮುಂದೆ ಮೂರ ರಿಂದ-ನಾಲ್ಕು ವರ್ಷ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದರು. ಮೊದ-ಮೊದಲು ಕಷ್ಟವೇನಿಸಿತು ನಂತರ ಬೆಳಿಗ್ಗೆ ರಾತ್ರಿ ಮಾತ್ರೆ ತಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡೆ.
ಮತ್ತೆ ಕೆಲಸಕ್ಕೆ ಸೇರಲು ಹೋದೆ, ಮಾನಸಿಕ ಅಸ್ವಸ್ಥನ ಕೈಯಲ್ಲಿ ಹೇಗೆ ಕಂಪನಿಯ ದಾಖಲೆಗಳನ್ನು ಹೇಗೆ ಕೊಡುವುದು ಎಂದು ಅವಮಾನಿಸಿ ಕಳಿಸಿದರು. ಹೀಗೆ ನಾಲ್ಕಾರು ಕಂಪನಿ ಸುತ್ತಾಡಿದರೂ ನಿನ್ನೊಬ್ಬ ಮಾನಸಿಕ ಅಸ್ವಸ್ಥ ಎಂದು ಯಾರೂ ಕೆಲಸ ಕೊಡಲಿಲ್ಲ. ಒಂದು ದಿನ ನ್ಯೂಜ್ ಪೇಪರಲ್ಲಿ ಸೆಕ್ಯೂರಿಟಿ ಪೋಸ್ಟ್ ಖಾಲಿ ಇದೆ ಎಂದು ನೋಡಿದೆ. ಸದ್ಯಕ್ಕೆ ಯಾವುದಾದರು ಕೆಲಸ ಸಿಕ್ಕರೆ ಸಾಕು, ಎಂದು ತಿಳಿದು, ಎಲ್ಲ ದಾಖಲೆಯೊಂದಿಗೆ ಹೋದೆ. ‘ಈ ಸಲ ನಾನು ಮಾನಸಿಕ ಅಸ್ವಸ್ಥ ಎಂದು ಹೇಳದಿರಲು ನಿಚ್ಚಯಿಸಿದೆ.’ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡು ಮೂರು ವರ್ಷಗಳ ಕಾಲ ಕೆಲಸ ಮಾಡಿದೆ. ನನ್ನ ನಿಯತ್ತು ನೋಡಿ ಸೆಕ್ಯೂರಿಟಿ ಸುಪರವೈಸರ್ ಆಗಿ ಬಡ್ತಿ ಪಡೆದುಕೊಂಡೆ. ಒಂದು ವರ್ಷಗಳ ಕಾಲ ಅದನ್ನು ಚನ್ನಾಗಿ ನಿಭಾಯಿಸಿದೆ. ನಂತರ ಆಫೀಸ್ನಲ್ಲಿ ಕಂಪ್ಯೂಟರ್ ಆಪರೇಟರ್ ಕಂ-ಅಕೌಟಂಟ್, ಕೆಲಸ ಬಿಟ್ಟು ಹೋದರು. ಆಗ ಆಫೀಸ್ನಲ್ಲಿ ಕೆಲಸಕ್ಕೆ ತೊಂದರೆ ಆಗುತ್ತಿತ್ತು. ಅದನ್ನು ಗಮನಿಸಿದ ಬಾಸ್ ಹೇಗೂ ನಿನಗೆ ಕಂಪ್ಯೂಟರ್ ಗೊತ್ತಲ್ಲ ಸ್ವಲ್ಪದಿನ ಆಫೀಸ್ನಲ್ಲಿ ಕೆಲಸ ಮಾಡಲು ಹೇಳಿದರು. ಜೊತೆಗೆ ಅಕೌಂಟನ್ನು ನೋಡಿಕೊಳ್ಳುತ್ತಿದ್ದೆ. ನನ್ನ ಕೆಲಸ ಮತ್ತು ಆಫೀಸ್ ನಿರ್ವಹಣೆ ಮಾಡುವುದ್ದನ್ನು ನೋಡಿ ಖಾಯಂ ಮಾಡಿದರು. ಕೆಲ ದಿನಗಳಲ್ಲಿ ಕಂಪನಿ ಬೆಳೆಯುತಿದ್ದಂತೆ, ಮ್ಯಾನೇಜರ್ ಆಗಿ ಬಡ್ತಿ ಪಡೆದುಕೊಂಡೆ. ಇಗ ಕಂಪನಿಯ ಸಿ.ಇ.ಓ ಆಗಿ ಕೆಲಸ ಮಾಡುತ್ತಿದ್ದೇನೆ. ‘ಮಾನಸಿಕ ಕಾಯಿಲೆ ಯಾವತ್ತು ನನಗೆ ಅಡ್ಡಿ ಬರಲಿಲ್ಲ.’ ಪ್ರತಿ ತಿಂಗಳು ವೈದ್ಯರಿಂದ ಪರೀಕ್ಷಿಸಿಕೊಂಡು ರೆಗ್ಯೂಲರ್ ಆಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇನೆ.
ಕಾಯಿಲೆಗಳು ಯಾರಿಗೆ ಇಲ್ಲ ಹೇಳಿ? ಪ್ರತಿ ಮನೆಯಲ್ಲಿ ಯಾವುದಾದರೊಂದು ಕಾಯಿಲೆ ಇದ್ದವರು ಇದ್ದೆ ಇರುತ್ತಾರೆ. ಕೆಲವರಿಗೆ ಬಿಪಿ-ಶುಗರ್ ಇದ್ದರೆ ಇನ್ನೂ ಕೆಲವರಿಗೆ ಹಾರ್ಟ ಪ್ರಾಬ್ಲಂ ಹೀಗೆ ಎಲ್ಲರೂ ಒಂದಿಲ್ಲ ಒಂದು ಕಾಯಿಲೆಗೆ ತುತ್ತಾಗಿರುತ್ತಾರೆ. “ಮಾನಸಿಕ ಕಾಯಿಲೆ ಕೂಡ ದೈಹಿಕ ಕಾಯಿಲೆಯಂತೆ,” ವೈದ್ಯರು ಹೇಳುವ ಹಾಗೆ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆಯನ್ನು ಹತೊಟೆಯಲ್ಲಿಡಬಹುದು ಮತ್ತು ಗುಣ ಪಡಿಸಬಹುದಾಗಿದೆ. ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ಮೂಢ ನಂಬಿಕೆ, ಸಮಾಜಕ್ಕೆ ಅತಿ ದೊಡ್ಡ ಪಿಡುಗು. ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ಮೂಢ ನಂಬಿಕೆಯಿಂದ ಹೊರ ಬರಬೇಕಾಗಿದೆ. ಮಾನಸಿಕ ಅಸ್ವಸ್ಥರನ್ನು ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ನೋಡಿಕೊಂಡರೆ ಅವರು ಸಾಮಾನ್ಯರಂತೆ ಜೀವನ ನಡೆಸುತ್ತಾರೆ. ಸಮಾಜ ಅವರನ್ನು ನೊಡುವ ದೃಷ್ಟಿ ಬದಲಾಯಿಸಕೊಳ್ಳಬೇಕಿದೆ. ಅವರಿಗಾಗಿ ನಾವು ಸಮಾನತೆಯ ಹಸ್ತ ಚಾಚೊಣ...
- ಶರಣಪ್ಪ ಮಾಳಗಿಮನಿ
ಧಾರವಾಡ
- * * * -