ವಿಜಯಪುರ

ವಿಜಯಪುರದಲ್ಲಿ ನವೋದ್ಯಮ ಪರಿಸರ ಬಲಪಡಿಸಲು ಕ್ರಮ

ವಿಜಯಪುರದಲ್ಲಿ ನವೋದ್ಯಮ ಪರಿಸರ ಬಲಪಡಿಸಲು ಕ್ರಮ


ವಿಜಯಪುರ, ಸೆ.23: ನಗರದ ಶ್ರೀ ಬಿ.ಎಂ. ಪಾಟೀಲ ಫೌಂಡೇಷನ್ ಫಾರ್ ಇನ್ನೋವೇಶನ್ ಆ್ಯಂಡ್ ಇನ್ಕ್ಯುಬೇಶನ್ ಸೆಂಟರ್ ಜಿಲ್ಲೆಯ ಸ್ಟಾರ್ಟಅಪ್ಗಳು, ವಿದ್ಯಾರ್ಥಿ ನವೋದ್ಯಮಿಗಳು ಹಾಗೂ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಸೆಂಟರ್ನ ಕಾರ್ಯಚಟುವಟಿಕೆಗಳಿಗೆ ಕರ್ನಾಟಕ ಡಿಜಿಟಲ್ ಎಕಾನಾಮಿಕ್ ಮಿಷನ್ (ಕೆಡಿಇಎಂ) ಬೆಂಬಲವಾಗಿ ನಿಂತಿದೆ ಎಂದು ಮಿಷನ್ನ ಕಲ್ಯಾಣ ಕರ್ನಾಟಕ ಕ್ಲಸ್ಟರ್ ಹೆಡ್ ಸುಜಯ್ ಮುದಗಲ್ ಹೇಳಿದರು.  

ನಗರದ ಬಿ.ಎಂ. ಪಾಟೀಲ ಫೌಂಡೇಷನ್ ಫಾರ್ ಇನ್ನೋವೇಶನ್ ಆ್ಯಂಡ್ ಇನ್ಕ್ಯುಬೇಶನ್ ಸೆಂಟರ್ಗೆ ಭಾನುವಾರ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳು, ನವೋದ್ಯಮಿಗಳು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು.  

ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನೀತಿಗಳು, ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚಿಸಿದ ಅವರು, ಜಿಲ್ಲೆಯಲ್ಲಿನ ನವೋದ್ಯಮ ಪರಿಸರವನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಬಗ್ಗೆ ಮಾಹಿತಿ ಪಡೆದರು. ಮೂಲಸೌಕರ್ಯ, ಮಾರ್ಗದರ್ಶನ, ಹಣಕಾಸು ಮತ್ತು ಅನುದಾನ, ಮಾರುಕಟ್ಟೆ ಸಂಪರ್ಕ ಹಾಗೂ ಕೈಗಾರಿಕಾ ಸಹಭಾಗಿತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.  

ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟಅಪ್ಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಡುವಿನ ಸಹಭಾಗಿತ್ವ ಹೆಚ್ಚಿಸುವ ಅಗತ್ಯಕ್ಕೂ ಒತ್ತು ನೀಡಲಾಯಿತು. ಇದರಿಂದ ವಿದ್ಯಾರ್ಥಿಗಳಲ್ಲಿ ನವೀನ ಆಲೋಚನೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ, ಸ್ಟಾರ್ಟಅಪ್ಗಳು ಮತ್ತು ಕೈಗಾರಿಕೆಗಳಿಗೆ ಯುವ ಪ್ರತಿಭೆ, ಹೊಸ ಆಲೋಚನೆ ಹಾಗೂ ತಂತ್ರಜ್ಞಾನದೊಂದಿಗೆ ಸಂಪರ್ಕ ಕಲ್ಪಿಸಲು ಅವಕಾಶ ದೊರೆಯಲಿದೆ ಎಂದು ತಿಳಿಸಲಾಯಿತು.  

ಪ್ರತಿ ಶನಿವಾರ ಬಿ.ಎಂ. ಪಾಟೀಲ ಫೌಂಡೇಷನ್ ಫಾರ್ ಇನ್ನೋವೇಶನ್ ಆ್ಯಂಡ್ ಇನ್ಕ್ಯುಬೇಶನ್ ಸೆಂಟರ್ನಲ್ಲಿ ಸ್ಟಾರ್ಟಅಪ್ ಮತ್ತು ನವೋದ್ಯಮ ಸಭೆಗಳನ್ನು ಆಯೋಜಿಸಲಾಗುವುದು. ಈ ಸಭೆಗಳು ಸ್ಟಾರ್ಟಅಪ್ ಸಂಸ್ಥಾಪಕರು, ವಿದ್ಯಾರ್ಥಿಗಳು, ನವೋದ್ಯಮಿಗಳು ಹಾಗೂ ಉದ್ಯಮಿಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು, ಸಂಪರ್ಕ ಬೆಳೆಸಲು ಮತ್ತು ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಲಿವೆ.  

ಕೆಡಿಇಎಂ, ಬಿ.ಎಂ. ಪಾಟೀಲ ಫೌಂಡೇಷನ್ ಫಾರ್ ಇನ್ನೋವೇಶನ್ ಆ್ಯಂಡ್ ಇನ್ಕ್ಯುಬೇಶನ್, ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟಅಪ್ಗಳು ಹಾಗೂ ಕೈಗಾರಿಕೆಗಳ ನಿರಂತರ ಸಹಭಾಗಿತ್ವದ ಮೂಲಕ ವಿಜಯಪುರದಲ್ಲಿ ಬಲಿಷ್ಠ ನವೋದ್ಯಮ ಪರಿಸರ ನಿರ್ಮಾಣಕ್ಕೆ ಉತ್ತೇಜನ ದೊರೆಯಲಿದೆ. ಇದರಿಂದ ಜಿಲ್ಲೆಯ ಯುವ ನವೋದ್ಯಮಿಗಳು ಹಾಗೂ ಉದ್ಯಮಿಗಳಿಗೆ ರಾಜ್ಯದ ವಿವಿಧ ಯೋಜನೆಗಳು, ಅನುದಾನ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಅವಕಾಶಗಳೊಂದಿಗೆ ಸಂಪರ್ಕ ಸಾಧಿಸಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.  ಈ ಸಂದರ್ಭದಲ್ಲಿ ಸೆಂಟರ್ ಪ್ರತಿನಿಧಿಗಳಾದ ಆಶೀಶ್ ಕುಲಕರ್ಣಿ, ಸಹನಾ ಬಿರಾದಾರ್ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ