ಗಾಂಧೀಜಿ, ಶಾಸ್ತ್ರಿ ಆದರ್ಶಗಳು ಯುವಜನರಿಗೆ ಪ್ರೇರಣೆಯಾಗಲಿ
ಲೋಕದರ್ಶನ ವರದಿ
ಮುದ್ದೇಬಿಹಾಳ, ಅ.2: “ನನ್ನ ಜೀವನವೇ ನನ್ನ ಸಂದೇಶ” ಎಂದು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿ ಅವರು ಸರಳ ಜೀವನ ಹಾಗೂ ಆದರ್ಶಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರು, ಇತರ ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿಯಾಗಿದ್ದರು. ಅದೇ ರೀತಿ ಸರಳತೆ ಹಾಗೂ ಸೌಜನ್ಯಯುತ ನಡೆನುಡಿಗೆ ಹೆಸರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಪ್ರಗತಿಗೆ ಶ್ರಮಿಸಿದ ಆದರ್ಶ ನಾಯಕರಾಗಿದ್ದಾರೆ ಎಂದು ಹಿರಿಯ ವಿದ್ವಾಂಸರು ಹಾಗೂ ಬಾಗಲಕೋಟೆ ಬಿವಿವಿ ಸಂಘದ ಆಡಳಿತಾಧಿಕಾರಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.
ನಗರದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ 1 ಮತ್ತು 2, ಚಿಂತನಶಿರಿ ಹಾಗೂ ಗಾಂಧಿ ಪ್ರತಿಷ್ಠಾನ, ಮುದ್ದೇಬಿಹಾಳ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.